ಪರಿತ್ಯಕ್ತ ಮಹಿಳೆಯರು ಮತ್ತು ಮಕ್ಕಳು ತಮ್ಮ ಮಾಸಿಕ ಜೀವನಾಂಶವನ್ನು ಪಡೆಯಲು ನ್ಯಾಯಾಲಯಗಳನ್ನು ಸಂಪರ್ಕಿಸುವ ಒತ್ತಡ ಸೃಷ್ಟಿಯಾಗದಂತೆ ಸಮಗ್ರವಾದ ಜೀವನಾಂಶ ಕಾನೂನನ್ನು ತರುವಂತೆ ಸಂಸತ್ತನ್ನು ಕೇರಳ ಹೈಕೋರ್ಟ್ ಇತ್ತೀಚೆಗೆ ಒತ್ತಾಯಿಸಿದೆ [ರಿಜಾಸ್ ಎಂಟಿ ಮತ್ತು ಹಫ್ಸೀನಾ ಎಂ ನಡುವಣ ಪ್ರಕರಣ].
ಜೀವನಾಂಶ ಅರ್ಜಿಗಳ ವಿಲೇವಾರಿ ಮತ್ತು ಆದೇಶಗಳ ಜಾರಿಯಲ್ಲಿ ಎದುರಾಗುವ ಅಡೆತಡೆಗಳನ್ನು ನಿವಾರಿಸಲು ವಿವರವಾದ ಮಾರ್ಗಸೂಚಿಗಳನ್ನು ಸುಪ್ರೀಂ ಕೋರ್ಟ್ ರಜನೀಶ್ ಮತ್ತು ನೇಹಾ ಇನ್ನಿತರರ ನಡುವಣ ಪ್ರಕರಣದಲ್ಲಿ ನೀಡಿದೆ ಎಂದು ನ್ಯಾಯಮೂರ್ತಿ ಸಿ ಎಸ್ ಡಯಾಸ್ ತಿಳಿಸಿದರು.
ಆದರೂ ಮಿತಿಮೀರಿ ಪ್ರಕರಣ ವಿಳಂಬಗೊಳಿಸುವ ಕಾರ್ಯವಿಧಾನವನ್ನು ಕೌಟುಂಬಿಕ ನ್ಯಾಯಾಲಯಗಳು ಮುಂದುವರೆಸಿದ್ದು ಇದು ನ್ಯಾಯಾಲಯಗಳಿಗೆ ಅಲೆದು ಸುಸ್ತಾದ ವ್ಯಕ್ತಿಗಳ ದುಃಖವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಆದ್ದರಿಂದ, ಪತ್ನಿ, ಮಕ್ಕಳು ಹಾಗೂ ಪೋಷಕರ ಜೀವನಾಂಶಕ್ಕೆ ಸಂಬಂಧಿಸಿದ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಒಂಬತ್ತನೇ ಅಧ್ಯಾಯದಲ್ಲಿ ಬದಲಾವಣೆಗಳನ್ನು ತರಲು ಸಂಸತ್ತನ್ನು ಅದು ಆಗ್ರಹಿಸಿತು.
ಇಪ್ಪತ್ತೆಂಟು ತಿಂಗಳುಗಳಿಂದ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ಜೀವನಾಂಶ ಭತ್ಯೆಯ ಬಾಕಿ ಪಾವತಿಸದ ಕಾರಣ ಹತ್ತು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಪರಿಶೀಲನಾ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಿಆರ್‌ಪಿಸಿಯ ಸೆಕ್ಷನ್ 125 ರ ನಿಯಮಾವಳಿ ಮತ್ತು ಇದಕ್ಕೆ ಸಂಬಂಧಪಟ್ಟಂತೆ ಈ ಹಿಂದೆ ನೀಡಲಾದ ತೀರ್ಪುಗಳನ್ನು ಪರಿಗಣಿಸಿದಾಗ ಸೆಕ್ಷನ್ 125 (3) ರ ಅಡಿಯಲ್ಲಿ ಜೀವನಾಂಶವನ್ನು ಪಾವತಿಸದಿದ್ದರೆ ವಿಧಿಸಬಹುದಾದ ಗರಿಷ್ಠ ಶಿಕ್ಷೆಯು ಪಾವತಿ ಮಾಡದ ಪ್ರತಿ ತಿಂಗಳಿಗೆ ಒಂದು ತಿಂಗಳಿನಂತೆ ಸೆರೆವಾಸ ವಿಧಿಸಬಹುದಾಗಿರುತ್ತದೆ. ಹೀಗಾಗಿ ಅರ್ಜಿದಾರರಿಗೆ 10 ತಿಂಗಳ ಜೈಲು ಶಿಕ್ಷೆ ವಿಧಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶ ಬದಲಿಸುವುದು ಅನಗತ್ಯ ಎಂದು ನ್ಯಾಯಾಲಯ ನುಡಿಯಿತು.
ರಜನೀಶ್ ಪ್ರಕರಣದಲ್ಲಿ ರೂಪಿಸಲಾದ ಕಾನೂನನ್ನು ಪರಿಗಣಿಸಿದರೆ ಅರ್ಜಿದಾರರ ವಿರುದ್ಧ ದಂಡ ವಿಧಿಸುವ ಅಥವಾ ಬಂಧನದ ವಾರಂಟ್ ಹೊರಡಿಸುವ ವಿಧಾನದಲ್ಲಿಯೂ ಕೌಟುಂಬಿಕ ನ್ಯಾಯಾಲಯ ಎಡವಿಲ್ಲ ಎಂದು ಅದು ಹೇಳಿದೆ.
ಆದ್ದರಿಂದ, ಪತಿಗೆ 10 ತಿಂಗಳ ಜೈಲು ಶಿಕ್ಷೆ ವಿಧಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಅದು ಎತ್ತಿಹಿಡಿಯಿತು. ಆದರೆ ಸಂಪೂರ್ಣ ಜೀವನಾಂಶ ಮೊತ್ತ ಪಾವತಿಸಿದರೆ ಪತಿಯನ್ನು ಕೂಡಲೇ ಜೈಲಿನಿಂದ ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿತು.
[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]