ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಪ್ರಕರಣ: ಸಿಪಿಎಂ ಮಾಜಿ ಮುಖಂಡನಿಗೆ ಮರಣದಂಡನೆ ಬದಲು 10 ವರ್ಷಗಳ ಕಠಿಣ ಸಜೆ
ಕಾಂಗ್ರೆಸ್ ಕಾರ್ಯಕರ್ತ ಕೆಎಸ್ ದಿವಾಕರನ್ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸಿಪಿಎಂ ಮಾಜಿ ಮುಖಂಡ ಆರ್ ಬೈಜು ಅವರಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು 10 ವರ್ಷಗಳ ಕಠಿಣ ಸಜೆಯಾಗಿ ಕೇರಳ ಹೈಕೋರ್ಟ್ ಶುಕ್ರವಾರ ಮಾರ್ಪಡಿಸಿದೆ.
ಸೇತುಕುಮಾರ್ ಎಂಬಾತನನ್ನು ಖುಲಾಸೆಗೊಳಿಸಿದ ನ್ಯಾಯಾಲಯ ಉಳಿದ ಆರೋಪಿಗಳಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿತು.
ದಿವಾಕರನ್ ಮತ್ತು ಅವರ ಕುಟುಂಬದ ಸದಸ್ಯರ ಮೇಲೆ ನವೆಂಬರ್ 29, 2009ರಲ್ಲಿ ಬೈಜು ಹಾಗೂ ಉಳಿದ ಆರೋಪಿಗಳು ಹಲ್ಲೆ ನಡೆಸಿದ್ದರು. ತಲೆಗೆ ಆದ ಭಾರೀ ಗಾಯದಿಂದಾಗಿ ದಿವಾಕರನ್ ಡಿಸೆಂಬರ್ 9, 2009 ರಂದು ನಿಧನರಾಗಿದ್ದರು.
ಆರೋಪಿಗಳು ಕೊಲೆ ಮಾಡುವ ಉದ್ದೇಶದಿಂದ ಕೃತ್ಯ ಎಸಗಿದ್ದರು ಎನ್ನುವಂತಹ ತೃಪ್ತಿಕರ ಸಾಕ್ಷ್ಯ ದೊರೆತಿಲ್ಲ ಎಂದು ನ್ಯಾಯಮೂರ್ತಿಗಳಾದ ಪಿ.ಬಿ.ಸುರೇಶ್ ಕುಮಾರ್ ಮತ್ತು ಎಂ.ಬಿ.ಸ್ನೇಹಲತಾ ಅವರಿದ್ದ ಪೀಠ ತಿಳಿಸಿತು.
ಕೊಲೆ ಮಾಡಬೇಕು ಎಂಬುದೇ ಸಂಚಿನ ಉದ್ದೇಶವಾಗಿದ್ದರೆ ದಾಳಿಕೋರರು ಖಂಡಿತವಾಗಿಯೂ ಶಸ್ತ್ರಾಸ್ತ್ರಗಳೊಂದಿಗೆ ಬರುತ್ತಿದ್ದರು. ಆದರೆ ಅವರು ಮರದ ಕಟ್ಟಿಗೆಗಳಿಂದ ದಾಳಿ ನಡೆಸಿದ್ದಾರೆ. ಇದು ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಗಂಭೀರ ಗಾಯ ಉಂಟು ಮಾಡುವ ಉದ್ದೇಶ ಹೊಂದಿತ್ತು ಎಂಬುದನ್ನು ತೋರಿಸುತ್ತದೆ ಎಂದು ನ್ಯಾಯಾಲಯ ಹೇಳಿತು.
ಹೀಗಾಗಿ ಬೈಜು ಸೇರಿದಂತೆ ಐವರು ಆರೋಪಿಗಳ ಶಿಕ್ಷೆಯನ್ನು ನ್ಯಾಯಾಲಯವು ಕೊಲೆಯ ಉದ್ದೇಶವಲ್ಲದ ನರಹತ್ಯೆ ಎಂದು ಮಾರ್ಪಡಿಸಿದೆ.