
ಸಹೋದ್ಯೋಗಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪ ಎದುರಿಸುತ್ತಿರುವ ಗುಪ್ತಚರ ದಳದ ಅಧಿಕಾರಿ ಸುಕಾಂತ್ ಸುರೇಶ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಕೇರಳ ಹೈಕೋರ್ಟ್ ಸೋಮವಾರ ನಿರಾಕರಿಸಿದೆ [ ಸುಕಾಂತ್ ಸುರೇಶ್ ಪಿ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].
ವಿಚಾರಣೆಯ ಈ ಹಂತದಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಸಾಧ್ಯತೆ ತಳ್ಳಿಹಾಕಲು ಆಗುವುದಿಲ್ಲ. ಹಾಗಿರುವಾಗ ಸುರೇಶ್ ಅವರನ್ನು ಬಂಧಿಸದಂತೆ ಮತ್ತು ಕಸ್ಟಡಿ ವಿಚಾರಣೆ ನಡೆಸದಂತೆ ರಕ್ಷಿಸುವುದು ತನಿಖೆಗೆ ಅಡ್ಡಿಯಾಗುತ್ತದೆ ಎಂದು ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅಭಿಪ್ರಾಯಪಟ್ಟರು.
ತನ್ನ ಸಹೋದ್ಯೋಗಿ, 24 ವರ್ಷದ ಗೆಳತಿಯ ಆತ್ಮಹತ್ಯೆಯಲ್ಲಿ ಪಾತ್ರವಿರುವ ಆರೋಪವನ್ನು ಸುಕಾಂತ್ ಎದುರಿಸುತ್ತಿದ್ದಾರೆ. "ಪ್ರಸಕ್ತ ಪ್ರಕರಣದಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡುವ ಆದೇಶದ ಮೂಲಕ ರಕ್ಷಣೆ ನೀಡಿದರೆ, ತನಿಖೆಗೆ ತೀವ್ರ ಹಿನ್ನಡೆಯಾಗುತ್ತದೆ. ಅರ್ಜಿದಾರರು ನಿರೀಕ್ಷಣಾ ಜಾಮೀನಿಗೆ ಅರ್ಹರಲ್ಲ” ಎಂದು ಕೇರಳ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 24 ವರ್ಷದ ಗುಪ್ತಚರ ಅಧಿಕಾರಿ ಮಾರ್ಚ್ 24 ರಂದು ಚಕ್ಕಾದಲ್ಲಿ ರೈಲ್ವೆ ಹಳಿಗಳ ಬಳಿ ಶವವಾಗಿ ಪತ್ತೆಯಾಗಿದ್ದರು.
ತನ್ನ ಮಗಳು 31 ವರ್ಷದ ಸುರೇಶ್ ಜೊತೆ ಸಂಬಂಧ ಹೊಂದಿದ್ದಳು ಎಂದು ಯುವತಿಯ ತಂದೆ ಆರೋಪಿಸಿದ್ದರು. ಸುರೇಶ್ ಹಲವು ತಿಂಗಳುಗಳಿಂದ ಆಕೆಯ ಸಂಬಳವನ್ನು ಬಲವಂತವಾಗಿ ಕಿತ್ತುಕೊಂಡಿರುವುದಲ್ಲದೆ, ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದ ಎಂದು ಮೃತಳ ತಂದೆ ನೀಡಿದ್ದ ದೂರಿನ ಮೇರೆಗೆ ಪೆಟ್ಟಾ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.
ಆತ್ಮಹತ್ಯೆಗೆ ಪ್ರಚೋದನೆ ನೀಡುವ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 194 ರ ಅಡಿಯಲ್ಲಿ ಸುರೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪ್ರಸ್ತುತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನ್ನ ಮಾಜಿ ಗೆಳತಿಯ ಸಾವಿನಲ್ಲಿ ತನ್ನ ಪಾತ್ರವಿಲ್ಲ ಎಂದು ಪ್ರತಿಪಾದಿಸಿ ಸುರೇಶ್ ನಂತರ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಸಹಜೀವನ ನಡೆಸುತ್ತಿದ್ದ ತಾವು ಮದುವೆಯಾಗಲು ಪರಸ್ಪರ ಒಪ್ಪಿದ್ದೆವು. ಆಕೆಯ ಮೇಲೆ ಪೋಷಕರು ಒತ್ತಡ ಹೇರಿದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಳು ಎಂದು ಸುರೇಶ್ ವಾದಿಸಿದ್ದರು.
ಆದರೆ ವಿವಿಧ ಸಾಕ್ಷ್ಯಾಧಾರಗಳು ಆರೋಪಿ ತನ್ನ ಸ್ನೇಹಿತೆಯ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದನ್ನು ಹೇಳಿರುವುದು, ಜೊತೆಗೆ ಆಕೆಗೆ ಗರ್ಭಪಾತವಾಗಿರುವುದು ಮುಂತಾದ ಸಂಗತಿಗಳನ್ನು ಗಮನಿಸಿದ ನ್ಯಾಯಾಲಯ ವಿಚಾರಣೆಯ ಈ ಹಂತದಲ್ಲಿ ನಿರೀಕ್ಷಣಾ ಜಾಮೀನು ನೀಡಲಾಗದು ಎಂದಿತು.