ತನ್ನ ಸಲಿಂಗ ಸಂಗಾತಿಯನ್ನು ಆಕೆಯ ಹೆತ್ತವರು ತನ್ನಿಂದ ಬಲವಂತವಾಗಿ ಬೇರ್ಪಡಿಸಿದ್ದಾರೆ ಎಂದು ಆರೋಪಿಸಿ ಯುವತಿಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಕೇರಳ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಅರ್ಜಿದಾರೆಯೊಂದಿಗೆ ಸಂಬಂಧ ಹೊಂದಿದ್ದರೂ ತನ್ನ ಪೋಷಕರೊಂದಿಗೆ ತೆರಳಲು ಬಯಸುವುದಾಗಿ ಆಕೆಯ ಸಂಗಾತಿ ಹೇಳಿದ್ದರಿಂದ ನ್ಯಾಯಮೂರ್ತಿಗಳಾದ ಪಿ ಬಿ ಸುರೇಶ್ ಕುಮಾರ್ ಮತ್ತು ಶೋಭಾ ಅನ್ನಮ್ಮ ಈಪೆನ್ ಅವರಿದ್ದ ವಿಭಾಗೀಯ ಪೀಠ ಅರ್ಜಿ ವಜಾಗೊಳಿಸಿತು.
ತಾನು ಹಾಗೂ ತನ್ನ ಸಂಗಾತಿ ಇಬ್ಬರೂ ಸಾಂಪ್ರದಾಯಿಕ ಮುಸ್ಲಿಂ ಕುಟುಂಬದಿಂದ ಬಂದಿದ್ದು ತಮ್ಮ ಸಂಬಂಧದ ಬಗ್ಗೆ ಕುಟುಂಬಗಳಿಗೆ ತಿಳಿದ ಬಳಿಕ ತಮ್ಮನ್ನು ಬೇರ್ಪಡಿಸಲು ಬಲವಂತವಾಗಿ ಯತ್ನಿಸಿದ್ದರು ಎಂದು ಅರ್ಜಿದಾರರು ಈ ಹಿಂದೆ ದೂರಿದ್ದರು.
ಇಬ್ಬರೂ ಜನವರಿ 27ರಂದು ಮನೆ ಬಿಟ್ಟು ಹೋಗಿದ್ದರು. ಕೂಡಲೇ ಇಬ್ಬರ ಸಂಬಂಧಿಕರೂ ಪೊಲೀಸ್ ಠಾಣೆ ಮೆಟ್ಟಿಲೇರಿ ಪ್ರಕರಣ ದಾಖಲಿಸಿದ್ದರು.