ನ್ಯಾ. ಮೇರಿ ಜೋಸೆಫ್ ಅವರಿಗೆ ಕಡಿಮೆ ಪ್ರಕರಣ ಹಂಚಿಕೆ ಆರೋಪ: ಮೇಲ್ಮನವಿ ವಜಾಗೊಳಿಸಿದ ಕೇರಳ ಹೈಕೋರ್ಟ್

ನ್ಯಾ. ಮೇರಿ ಅವರ ಮಾನಹಾನಿ ಮಾಡುವ ಸಲುವಾಗಿ ಈ ಅರ್ಜಿ ಸಲ್ಲಿಸಲಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
Kerala High Court and Justice Mary Joseph
Kerala High Court and Justice Mary Joseph

ಕೇರಳ ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿ ಮೇರಿ ಜೋಸೆಫ್ ಅವರಿಗೆ ವಿಚಾರಣೆಗಾಗಿ ಪ್ರತಿ ದಿನ ಸೀಮಿತ ಸಂಖ್ಯೆಯ ಪ್ರಕರಣಗಳನ್ನಷ್ಟೇ ಪಟ್ಟಿ ಮಾಡಲಾಗುತ್ತಿದೆ ಎಂದು ಆರೋಪಿಸಿ ವಕೀಲರೊಬ್ಬರು ಸಲ್ಲಿಸಿದ್ದ ಮನವಿಯನ್ನು ರಾಜ್ಯ ಉಚ್ಚ ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ [ಯಶವಂತ್ ಶೆಣೈ ಮತ್ತು ಕೇರಳ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಇನ್ನಿತರರ ನಡುವಣ ಪ್ರಕರಣ].

ಬೇರೆ ನ್ಯಾಯಮೂರ್ತಿಗಳಿಗೆ ಪ್ರತಿದಿನ 100ಕ್ಕೂ ಹೆಚ್ಚು ಪ್ರಕರಣಗಳನ್ನು ಪಟ್ಟಿ ಮಾಡುತ್ತಿದ್ದರೂ, ನ್ಯಾ. ಮೇರಿ ಜೋಸೆಫ್‌ ಅವರಿಗೆ ಕೇವಲ 20 ಪ್ರಕರಣಗಳ ವಿಚಾರಣೆ ನಡೆಸುವಂತೆ ಸೂಚಿಸುತ್ತಿರುವುದನ್ನು ವಕೀಲ ಯಶವಂತ ಶೆಣೈ ಈ ಹಿಂದೆ ಪ್ರಶ್ನಿಸಿದ್ದರು. ಅವರ ಮನವಿಯ್ನು ಏಕಸದಸ್ಯ ಪೀಠ ವಜಾಗೊಳಿಸಿತ್ತು.

ಈ ಹಿನ್ನೆಲೆಯಲ್ಲಿ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ ಮುಹಮ್ಮದ್ ಮುಷ್ತಾಕ್ ಮತ್ತು ಸೋಫಿ ಥಾಮಸ್ ಅವರಿದ್ದ ವಿಭಾಗೀಯ ಪೀಠ ಶೆಣೈ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ. ನ್ಯಾ. ಮೇರಿ ಅವರ ಮಾನಹಾನಿ ಮಾಡುವ ಸಲುವಾಗಿ ಈ ಅರ್ಜಿ ಸಲ್ಲಿಸಲಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

Also Read
ನ್ಯಾಯಮೂರ್ತಿಯೊಬ್ಬರಿಗೆ ಪ್ರತಿದಿನ ಕೇವಲ 20 ಪ್ರಕರಣಗಳು: ಕೇರಳ ಹೈಕೋರ್ಟ್‌ಗೆ ವಕೀಲ ದೂರು

ತಾವು ಬಯಸಿದ ರೀತಿಯಲ್ಲಿ ಪ್ರಕರಣ ಪಟ್ಟಿ ಮಾಡಲು ನ್ಯಾಯಾಲಯಕ್ಕೆ ಆದೇಶಿಸಲಾಗದು ಮತ್ತು ಪ್ರಕರಣಗಳ ಪಟ್ಟಿ ಮಾಡುವಿಕೆ ಹೈಕೋರ್ಟ್‌ನ ಆಡಳಿತಾತ್ಮಕ ವಿಭಾಗಕ್ಕೆ ಸೇರಿದ್ದಾಗಿದೆ ಎಂದು ಹೈಕೋರ್ಟ್‌ ಒತ್ತಿ ಹೇಳಿದೆ.

ಮೇಲ್ಮನವಿದಾರರು ಹಾಲಿ ನ್ಯಾಯಾಧೀಶರನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡುವುದಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. "ವಕೀಲರು ಎತ್ತಿರುವ ಎಲ್ಲಾ ಆರೋಪಗಳಿಗೆ ಉತ್ತರಿಸುವ ದಾವೆದಾರರನ್ನಾಗಿ ನ್ಯಾಯಮೂರ್ತಿಗಳನ್ನು  ಮಾಡುವಂತಿಲ್ಲವಾದ್ದರಿಂದ ಅವರು (ಅರ್ಜಿದಾರರು) ಹೈಕೋರ್ಟ್‌ ನ್ಯಾಯಮೂರ್ತಿಯವರನ್ನು ಪಕ್ಷಕಾರರ ಸಾಲಿನಲ್ಲಿಡಲಾಗದು" ಎಂದು ಅದು ನುಡಿಯಿತು.

Kannada Bar & Bench
kannada.barandbench.com