ಕೊಲೆ ಸಂಚು ಪ್ರಕರಣ ರದ್ದತಿ ಕೋರಿ ಮಲಯಾಳಂ ನಟ ದಿಲೀಪ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್

ನಟಿ ಮೇಲಿನ ಹಲ್ಲೆ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಿಸಲಾಗಿರುವ ಎಫ್ಐಆರ್ ರದ್ದುಗೊಳಿಸಲು ದಿಲೀಪ್ ಕೋರಿದ್ದರು. ಈ ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
Dileep and Kerala HC
Dileep and Kerala HC
Published on

ಬಹುಭಾಷಾ ನಟಿಯೊಬ್ಬರ ಮೇಲಿನ ಹಲ್ಲೆ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿಲಾಗಿದೆ ಎಂದು ಆರೋಪಿಸಿ ಮಲಯಾಳಂ ನಟ ದಿಲೀಪ್‌ ವಿರುದ್ಧ ದಾಖಲಿಸಲಾಗಿದ್ದಎಫ್‌ಐಆರ್‌ ರದ್ದುಗೊಳಿಸಲು ಕೇರಳ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ [ಪಿ ಗೋಪಾಲಕೃಷ್ಣನ್ ಅಲಿಯಾಸ್‌ ದಿಲೀಪ್ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ತಮ್ಮ ಹಾಗೂ ಇತರ ಐವರ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ದಿಲೀಪ್‌ ಮಾಡಿದ್ದ ಮನವಿಯನ್ನು ನ್ಯಾಯಮೂರ್ತಿ ಜಿಯಾದ್ ರಹಮಾನ್ ಎಎ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿತು.

ನಟಿ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಎರ್ನಾಕುಲಂ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದಲ್ಲಿ (ಸಿಬಿಐ ವಿಶೇಷ ಸಂಖ್ಯೆ III) ದಿಲೀಪ್‌ ಮತ್ತು ಅವರ ಸಹಚರರು ಈಗಾಗಲೇ ವಿಚಾರಣೆ ಎದುರಿಸುತ್ತಿದ್ದಾರೆ.

ಪ್ರಕರಣದ 8ನೇ ಆರೋಪಿ ದಿಲೀಪ್ ಮತ್ತು 1ನೇ ಆರೋಪಿ ಪಲ್ಸರ್ ಸುನಿ ನಡುವಿನ ನಿಕಟ ಸಂಬಂಧವನ್ನು ಹೇಳುವ ಕೆಲವು ಆಡಿಯೋ ಕ್ಲಿಪ್‌ಗಳನ್ನು ಚಿತ್ರ ನಿರ್ದೇಶಕ ಬಾಲಚಂದ್ರ ಕುಮಾರ್ ಸಂದರ್ಶನ ನೀಡಿ ಬಿಡುಗಡೆ ಮಾಡಿದ್ದರು. ಅದರ ವಿಚಾರಣೆ ಮುಕ್ತಾಯದ ಹಂತದಲ್ಲಿತ್ತು. ತನಿಖೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳನ್ನು ಕೊಲ್ಲಲು ಸಂಚು ರೂಪಿಸಿರುವುದನ್ನು ಆಡಿಯೊ ಮತ್ತು ಬಾಲಚಂದ್ರ ಅವರ ಹೇಳಿಕೆಗಳು ಬಹಿರಂಗಪಡಿಸಿದ್ದವು. ಹೀಗಾಗಿ ದಿಲೀಪ್‌ ಮತ್ತು ಐವರ ವಿರುದ್ಧ ಹೊಸದಾಗಿ ಎಫ್‌ಐಆರ್‌ ದಾಖಲಿಸಲಾಗಿತ್ತು.

Also Read
[ಚುಟುಕು] ನಟ ದಿಲೀಪ್‌ ನಿರೀಕ್ಷಣಾ ಜಾಮೀನು: ಶನಿವಾರ ವಿಶೇಷ ಭೌತಿಕ ವಿಚಾರಣೆ ನಡೆಸಲಿರುವ ಕೇರಳ ಹೈಕೋರ್ಟ್‌

ಫೆಬ್ರವರಿ 7ರಂದು ಕೇರಳ ಹೈಕೋರ್ಟ್ ಈ ಪ್ರಕರಣದಲ್ಲಿ ದಿಲೀಪ್ ಸೇರಿದಂತೆ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಿತ್ತು. ತರುವಾಯ, ಅವರು ನಟಿ ಮೇಲಿನ ಹಲ್ಲೆ ಪ್ರಕರಣದ ಮುಂದಿನ ತನಿಖೆಯನ್ನು ಕೂಡ ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು.

ನಂತರ, ದಿಲೀಪ್ ಪ್ರಸ್ತುತ ಮನವಿ ಸಲ್ಲಿಸಿದ್ದರು. ಪೊಲೀಸ್ ಅಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಮುಂದಿನ ಎಲ್ಲಾ ಪ್ರಕ್ರಿಯೆಗಳನ್ನು ರದ್ದುಗೊಳಿಸಬೇಕು. ಜೊತೆಗೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಅವರು ಕೋರಿದ್ದರು.

Kannada Bar & Bench
kannada.barandbench.com