ವಿಜ್ಞಾನಿ ನಂಬಿ ನಾರಾಯಣನ್ ಅವರನ್ನೊಳಗೊಂಡ ದಶಕಗಳ ಕಾಲದ ಇಸ್ರೊ ಬೇಹುಗಾರಿಕೆ ಮತ್ತು ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಯೊಂದರಲ್ಲಿ ನಾರಾಯಣನ್ ಮತ್ತು ಸಿಬಿಐ ಅಧಿಕಾರಿಗಳ ನಡುವಿನ ಭ್ರಷ್ಟ ವ್ಯವಹಾರ ಆರೋಪಿಸಿ ಸಲ್ಲಿಸಲಾದ ಅರ್ಜಿಯನ್ನು ಕೇರಳ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ (ಎಸ್ ವಿಜಯನ್ ಮತ್ತು ಸಿಬಿಐ ಹಾಗೂ ಇನ್ನಿತರರ ನಡುವಣ ಪ್ರಕರಣ).
1994 ರಲ್ಲಿ ಪ್ರಕರಣದ ವಿಶೇಷ ತನಿಖಾಧಿಕಾರಿಯಾಗಿದ್ದ ಹಾಗೂ ನಾರಾಯಣನ್ ಅವರನ್ನು ತಪ್ಪಾಗಿ ಬಂಧಿಸಿ, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದ ಕಾರಣಕ್ಕಾಗಿ ಸಿಬಿಐನಿಂದ ತನಿಖೆಗೊಳಗಾಗಿದ್ದ ಎಸ್ ವಿಜಯನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್ ನಾರಾಯಣ ಪಿಶಾರಡಿ ಅವರು ವಜಾಗೊಳಿಸಿದ್ದಾರೆ.
"ದೂರಿನಲ್ಲಿರುವ ಆರೋಪಗಳು, ಮೇಲ್ನೋಟಕ್ಕೆ ಭ್ರಷ್ಟಾಚಾರ ತಡೆ ಕಾಯಿದೆ-1988ರ (2018 ರಲ್ಲಿ ತಿದ್ದುಪಡಿ ಮಾಡುವ ಮೊದಲು) ಸೆಕ್ಷನ್ 7 ರಿಂದ 9 ರ ಅಡಿಯಲ್ಲಿ ಅಪರಾಧಗಳ ಅಂಶಗಳನ್ನು ಆಕರ್ಷಿಸುವುದಿಲ್ಲ" ಎಂದು ಆದೇಶದಲ್ಲಿ ತಿಳಿಸಲಾಗಿದೆ.
ತನಿಖಾಧಿಕಾರಿಗೊಳೊಂದಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಭೂ ವ್ಯವಹಾರ ನಡೆಸುವ ಮೂಲಕ ನಾರಾಯಣನ್ ಅವರು ತಮ್ಮ ವಿರುದ್ಧದ ಸಿಬಿಐ ತನಿಖೆಯ ಮೇಲೆ ಪ್ರಭಾವ ಬೀರಿದ್ದಾರೆ ಎಂದು ವಿಜಯನ್ ಆರೋಪಿಸಿದ್ದರು.
ಸಾರ್ವಜನಿಕ ಸೇವೆಯಲ್ಲಿರುವವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆಯ ಅಡಿಯಲ್ಲಿ ಮಾಡುವ ಅನಗತ್ಯ ತನಿಖೆ ಅಥವಾ ಪ್ರಾಥಮಿಕ ವಿಚಾರಣೆ ಆತನ ವೃತ್ತಿ ಮತ್ತು ಖ್ಯಾತಿಗೆ ಕಳಂಕ ತರಲಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಸೂಕ್ತ ದಾಖಲೆಗಳೊಂದಿಗೆ ಹೊಸ ದೂರು ಸಲ್ಲಿಸಲು ವಿಜಯನ್ ಸ್ವತಂತ್ರರು ಎಂದು ತಿಳಿಸಿತು. ಜೊತೆಗೆ ಪ್ರಸ್ತುತ ಅರ್ಜಿಯನ್ನು ವಜಾಗೊಳಿಸುವುದು ಸೂಕ್ತವೆಂದು ನಿರ್ಧರಿಸಿತು.
"ಸಾರ್ವಜನಿಕ ನೌಕರನ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆಯಡಿ ಅನಗತ್ಯ ತನಿಖೆ ಅಥವಾ ಪ್ರಾಥಮಿಕ ವಿಚಾರಣೆ ನಡೆಸುವುದು ಅವರ ವೃತ್ತಿ ಮತ್ತು ಖ್ಯಾತಿಗೆ ಕಳಂಕ ತರಬಹುದು. ಒಮ್ಮೆ ಅಂತಹ ಕಳಂಕ ಉಂಟುಮಾಡಿದರೆ, ಅದನ್ನು ಅಳಿಸಲು ತುಂಬಾ ಕಷ್ಟವಾಗುತ್ತದೆ. ದೂರುದಾರರು ಅಪರಾಧದ ಬಗ್ಗೆ ಆರೋಪ ಮಾಡಿದರೆ ಸಾಲದು. ಒಬ್ಬ ವ್ಯಕ್ತಿಯ ವಿರುದ್ಧದ ಅಪರಾಧವನ್ನು ಸಾಬೀತುಪಡಿಸಬೇಕು. ಹುರುಳಿಲ್ಲದ ದೂರಿನ ಆಧಾರದ ಮೇಲೆ ತನಿಖೆಗೆ ಆದೇಶಿಸಲಾಗದು. ದೂರುದಾರರು ಸಲ್ಲಿಸಿದ ಸಾಕ್ಷ್ಯಗಳಿಂದ ಅಪರಾಧ ಸಾಬೀತಾಗಿದೆ ಎಂದು ನ್ಯಾಯಾಲಯಕ್ಕೆ ತೃಪ್ತಿಯಾಗಬೇಕು” ಎಂದು ನ್ಯಾಯಾಲಯ ಹೇಳಿದೆ.
1994-1998ರ ಅವಧಿಯಲ್ಲಿ ಇಸ್ರೋ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿಗಳಿಗೆ ನಾರಾಯಣನ್ ಅವರು ಆಸ್ತಿ ರವಾನಿಸುವ ಮೂಲಕ ಲಂಚ ನೀಡಿದ್ದರು ಎಂದು ನಾರಾಯಣನ್ ಅವರ ನಿಕಟವರ್ತಿಗಳು ತಿಳಿಸಿದ್ದರು ಎಂಬುದು ಅರ್ಜಿದಾರರ ಆರೋಪ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅರ್ಜಿದಾರರು ಒದಗಿಸಿದ್ದರು. ಸಿಬಿಐನಿಂದ ತನಿಖೆಯಾಗಬೇಕೆಂದೂ ಅವರು ಕೋರಿದ್ದರು. ಆದರೆ ವಿಶೇಷ ನ್ಯಾಯಾಧೀಶರು ಈ ಮನವಿಯನ್ನು ತಿರಸ್ಕರಿಸಿದ್ದರು. ಹೀಗಾಗಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಆದೇಶದ ಪ್ರತಿಯನ್ನು ಇಲ್ಲಿ ಓದಿ: