ಮಲಯಾಳಂ ಸುದ್ದಿ ವಾಹಿನಿ ಮೀಡಿಯಾ ಒನ್ ಪರವಾನಗಿ ರದ್ದತಿಯ ಕೇಂದ್ರ ಸರ್ಕಾರದ ನಿರ್ಧಾರವನ್ನು ಕೇರಳ ಹೈಕೋರ್ಟ್ ಬುಧವಾರ ಎತ್ತಿಹಿಡಿದಿದೆ [ಮಾಧ್ಯಮಮ್ ಬ್ರಾಡ್‌ಕಾಸ್ಟಿಂಗ್ ಲಿಮಿಟೆಡ್ ಮತ್ತು ಕೇಂದ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಪ್ರಕರಣ ಕುರಿತಂತೆ ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ಎತ್ತಿಹಿಡಿದ ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್, ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರಿದ್ದ ವಿಭಾಗೀಯ ಪೀಠ ಚಾನಲ್‌ನ ಮೇಲ್ಮನವಿಯನ್ನು ತಿರಸ್ಕರಿಸಿತು.
"ತೀರ್ಪಿನ ವಿರುದ್ಧ ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇವೆ" ಎಂದು ಸುದ್ದಿವಾಹಿನಿಯ ಕಾನೂನು ಸಲಹೆಗಾರ ಅಮೀನ್ ಹಸನ್ ʼಬಾರ್ & ಬೆಂಚ್ʼಗೆ ತಿಳಿಸಿದರು.
ರಾಷ್ಟ್ರೀಯ ಭದ್ರತೆ ಸಾರ್ವಜನಿಕ ಸುವ್ಯವಸ್ಥೆಯ ಕಾರಣಕ್ಕಾಗಿ ಕೇಂದ್ರ ಸರ್ಕಾರ ಸುದ್ದಿವಾಹಿನಿಯ ಪರವಾನಗಿ ನಿಷೇಧಿಸಿತ್ತು. ಪರವಾನಗಿ ರದ್ದುಪಡಿಸಲು ರಾಷ್ಟ್ರೀಯ ಭದ್ರತೆ ಒಂದು ನೆಪ ಎಂದು ಸಂಸ್ಥೆ ಈ ಹಿಂದೆ ವಾದಿಸಿತ್ತು.
ವಾಹಿನಿಗೆ ಕಡಿವಾಣ ಹಾಕುತ್ತಿರುವುದು ಇದೇ ಮೊದಲಲ್ಲ. ದೆಹಲಿ ಗಲಭೆ ಪ್ರಸಾರ ಮಾಡುವ ಹಿನ್ನೆಲೆಯಲ್ಲಿ ಇದೇ ವಾಹಿನಿ ಮತ್ತು ಏಷ್ಯಾನೆಟ್ ಚಾನೆಲ್‌ಗಳನ್ನು 2020ರಲ್ಲಿ 48 ಗಂಟೆಗಳ ಕಾಲ ಅಮಾನತುಗೊಳಿಸಲಾಗಿತ್ತು.