ಶವರ್ಮಾ ಸೇವಿಸಿ ಸಾವು ಪ್ರಕರಣ: ಆಹಾರ ತಯಾರಿಕೆ ದಿನಾಂಕ, ವೇಳೆ ಪ್ರದರ್ಶಿಸುವಂತೆ ಕೇರಳ ಹೈಕೋರ್ಟ್‌ ಸೂಚನೆ

ಶವರ್ಮಾ ಸೇವಿಸಿ 2022 ರಲ್ಲಿ ಮೃತಪಟ್ಟ ಹದಿನಾರು ವರ್ಷದ ಬಾಲಕಿಯೊಬ್ಬಳ ತಾಯಿ ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ಆದೇಶ ನೀಡಿತು.
Non Veg Stall
Non Veg StallImage for representative purpose

ಕಳೆದ ವರ್ಷ ಶವರ್ಮಾ ಮಾಂಸಾಹಾರ ತಿಂದು ಕೇರಳದ ಕಾಸರಗೋಡಿನ ಬಾಲಕಿ ಸಾವನ್ನಪ್ಪಿ, ಹಲವು ಮಂದಿ ಆಸ್ಪತ್ರೆ ಸೇರಿದ್ದ ಹಿನ್ನೆಲೆಯಲ್ಲಿ ಆಹಾರ ತಯಾರಿಸಿದ ನಿಖರವಾದ ದಿನ ಮತ್ತು ವೇಳೆಯನ್ನು ಪ್ರದರ್ಶಿಸುವಂತೆ ಆಹಾರ ತಯಾರಕರಿಗೆ ಸೂಚನೆ ನೀಡಬೇಕು ಎಂದು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಕೇರಳ ಹೈಕೋರ್ಟ್ ಮಂಗಳವಾರ ಆದೇಶಿಸಿದೆ [ಪ್ರಸನ್ನ ಇವಿ ಮತತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಎಷ್ಟು ಸುರಕ್ಷತಾ ಅವಧಿಯೊಳಗೆ ಆಹಾರ ಸೇವಿಸಬೇಕು ಎಂದು ಸಾರ್ವಜನಿಕರಿಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆಯೂ ನ್ಯಾಯಾಲಯ ಇದೇ ವೇಳೆ ಸೂಚಿಸಿದೆ.

ಶವರ್ಮಾ ಸೇವಿಸಿ 2022 ರಲ್ಲಿ ಮೃತಪಟ್ಟ ಹದಿನಾರು ವರ್ಷದ ಬಾಲಕಿಯೊಬ್ಬಳ ತಾಯಿ ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರಿದ್ದ ಪೀಠ ಈ ಆದೇಶ ನೀಡಿತು.

ಶವರ್ಮಾ ಸೇವನೆ ಮತ್ತು ಆಹಾರ ಪದಾರ್ಥ ಮಾರಾಟ ಮಾಡುವ ಕುರಿತಾದ ತಪಾಸಣೆಗೆ ಸಂಬಂಧಿಸಿದಂತೆ ಈಗಾಗಲೇ ಮಾರ್ಗಸೂಚಿಗಳು ಜಾರಿಯಲ್ಲಿವೆ ಎಂದು ಆಹಾರ ಸುರಕ್ಷತಾ ಆಯುಕ್ತರಾದ ಅಫ್ಸಾನಾ ಪರ್ವೀನ್ ನ್ಯಾಯಾಲಯಕ್ಕೆ ತಿಳಿಸಿದರು. ಆಗ ಪೀಠ ಸೆಪ್ಟೆಂಬರ್ 2022ರಲ್ಲಿ ಶವರ್ಮಾ ಕುರಿತು ಮಾರ್ಗಸೂಚಿ ಹೊರಡಿಸಿದ್ದು ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸೂಚಿಸಿತು.

“ಆಹಾರವನ್ನು ಕೌಂಟರ್‌ಗಳಲ್ಲೇ ನೀಡಲಿ ಅಥವಾ ಪಾರ್ಸೆಲ್‌ ಮೂಲಕ ನೀಡಲಿ ಅದರ ಪೊಟ್ಟಣಗಳಲ್ಲಿ ಆಹಾರ ತಯಾರಿಕಾ ದಿನಾಂಕ ಮತ್ತು ಸಮಯ ಪ್ರದರ್ಶಿಸುವಂತೆ ಎಲ್ಲಾ ತಿನಿಸು ತಯಾರಕರಿಗೆ ಅಗತ್ಯ ಸೂಚನೆ ನೀಡಬೇಕು. ಅಂತಹ ಕಾಲಾವಧಿ ಕುರಿತು ಜನ ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ತಮ್ಮ ಅಧೀನ ಅಧಿಕಾರಿಗಳ ಮೂಲಕ ಆಹಾರ ಸುರಕ್ಷತಾ ಆಯುಕ್ತರು ಮೇಲ್ವಿಚಾರಣೆ ಮಾಡುತ್ತಿರಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.  

ಆಹಾರ ತಯಾರಿಕಾ ಕಂಪೆನಿಗಳಿಗೆ ನೀಡಲಾಗುವ ಪರವಾನಗಿಗಳ ಜೊತೆಯಲ್ಲಿಯೇ ಶವರ್ಮಾ ತಯಾರಿಕಾ ಮಾರ್ಗಸೂಚಿಗಳನ್ನು ನೀಡುವಂತೆ ನೋಡಿಕೊಳ್ಳಬೇಕು ಎಂದು ಕೂಡ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಅದು ನಿರ್ದೇಶನ ನೀಡಿತು. ಈ ನಿರ್ದೇಶನಗಳನ್ನು ಉಲ್ಲಂಘಿಸಿದರೆ ತನಗೆ ವರದಿ ಮಾಡಬೇಕು ಎಂದು ಕೂಡ ನ್ಯಾಯಾಲಯ ತಿಳಿಸಿದೆ.

ಈಗಾಗಲೇ ಹೊರಡಿಸಲಾದ ಮಾರ್ಗಸೂಚಿ ಮತ್ತು ನಿಷೇಧ ಆದೇಶಗಳು ಸರಿಯಾದ ದಿಕ್ಕಿನಲ್ಲಿ ಇರಿಸಿದ ಹೆಜ್ಜೆಗಳಾದರೂ ಹೆಚ್ಚಿನ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ನ್ಯಾ. ರಾಮಚಂದ್ರನ್‌ ಅಭಿಪ್ರಾಯಪಟ್ಟರು. ಪ್ರಕರಣದ ಮುಂದಿನ ವಿಚಾರಣೆ ಡಿ. 5ರಂದು ನಡೆಯಲಿದೆ.

Related Stories

No stories found.
Kannada Bar & Bench
kannada.barandbench.com