ಮಹಿಳೆ ಲೈಂಗಿಕ ಪ್ರಚೋದನಕಾರಿ ಉಡುಗೆ ಧರಿಸಿದ್ದರೆ ಮೇಲ್ನೋಟಕ್ಕೆ ಲೈಂಗಿಕ ಕಿರುಕುಳದ ದೂರು ನಿಲ್ಲುವುದಿಲ್ಲ ಎಂದು ಸೆಷನ್ಸ್ ನ್ಯಾಯಾಧೀಶರೊಬ್ಬರು ನೀಡಿದ್ದ ವಿವಾದಾತ್ಮಕ ಅವಲೋಕನಗಳನ್ನು ಕೇರಳ ಹೈಕೋರ್ಟ್ ಗುರುವಾರ ತೆಗೆದು ಹಾಕಿತು [ಕೇರಳ ಸರ್ಕಾರ ಮತ್ತು ಸಿವಿಕ್ ಚಂದ್ರನ್ ನಡುವಣ ಪ್ರಕರಣ].
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ ಮತ್ತು ಲೇಖಕ ಸಿವಿಕ್ ಚಂದ್ರನ್‌ಗೆ ನಿರೀಕ್ಷಣಾ ಜಾಮೀನು ನೀಡುವ ವೇಳೆ ಕೋರಿಕ್ಕೋಡ್ ಸೆಷನ್ಸ್ ನ್ಯಾಯಾಧೀಶ ಕೃಷ್ಣಕುಮಾರ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಚಂದ್ರನ್ ಅವರಿಗೆ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿರುವುದನ್ನು ಎತ್ತಿ ಹಿಡಿದ ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರಿದ್ದ ಹೈಕೋರ್ಟ್ ಪೀಠ ತೀರ್ಪಿನಲ್ಲಿರುವ ವಿವಾದಾತ್ಮಕ ಅಂಶಗಳನ್ನು ತೆಗೆದು ಹಾಕಲು ನಿರ್ಧರಿಸಿತು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಎ (2) & 341 ಮತ್ತು 354ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳನ್ನು ಮಾಡಿದ ಆರೋಪ ಹೊತ್ತ ಚಂದ್ರನ್ ಅವರಿಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಕೇರಳ ಸರ್ಕಾರ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ನಿರ್ಧಾರ ತೆಗೆದುಕೊಂಡಿತು.
ಸಾಂಸ್ಕೃತಿಕ ಶಿಬಿರವೊಂದರಲ್ಲಿ ದೂರುದಾರೆ ಮತ್ತು ಆರೋಪಿ ಚಂದ್ರನ್ ಭಾಗವಹಿಸಿದ್ದರು. ಬಳಿಕ ದೂರುದಾರೆ ಸಮುದ್ರತಟದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಆರೋಪಿ ದೂರುದಾರೆಯನ್ನು ಬಲವಂತವಾಗಿ ಆಲಂಗಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂಬುದು ಪ್ರಾಸಿಕ್ಯೂಷನ್ ವಾದವಾಗಿತ್ತು. ವಿಚಾರಣೆ ನಡೆಸಿದ್ದ ಸೆಷನ್ಸ್ ನ್ಯಾಯಾಲಯ ಸಿವಿಕ್ ಚಂದ್ರನ್ ಅವರಿಗೆ ಜಾಮೀನು ನೀಡಿತ್ತು.
ಈ ವೇಳೆ ನ್ಯಾಯಾಧೀಶ ಕೃಷ್ಣ ಕುಮಾರ್ ಅವರು “ಈ ಸೆಕ್ಷನ್‌ನಡಿ (ಸೆಕ್ಷನ್ 354ಎ) ಅಪರಾಧ ಎಂದು ಗುರುತಿಸಲು ದೈಹಿಕ ಸಂಪರ್ಕ ಮತ್ತು ಇಷ್ಟವಿಲ್ಲದ ಮತ್ತು ಸ್ಪಷ್ಟವಾದ ಲೈಂಗಿಕ ಅಭಿವ್ಯಕ್ತಿಗಳನ್ನು ಒಳಗೊಂಡಿರುವ ಬೆಳವಣಿಗೆಗಳು ನಡೆದಿರಬೇಕು. ಲೈಂಗಿಕ ಲಾಭಕ್ಕಾಗಿ ಬೇಡಿಕೆ ಅಥವಾ ವಿನಂತಿ ಇರಬೇಕು. ಲೈಂಗಿಕ ಛಾಯೆಯ ಮಾತುಗಳಿರಬೇಕು. ಆರೋಪಿ ಜಾಮೀನು ಅರ್ಜಿಯೊಂದಿಗೆ ಸಲ್ಲಿಸಿರುವ ಛಾಯಾಚಿತ್ರಗಳು ದೂರುದಾರೆಯೇ ಕೆಲ ಲೈಂಗಿಕ ಪ್ರಚೋದನಕಾರಿಯಾದ ಉಡುಪುಗಳನ್ನು ತೊಟ್ಟಿರುವುದನ್ನು ಬಹಿರಂಗಪಡಿಸುತ್ತದೆ. ಹಾಗಾಗಿ ಆರೋಪಿಗಳ ವಿರುದ್ಧ ಸೆಕ್ಷನ್ 354ಎ ಮೇಲ್ನೋಟಕ್ಕೆ ನಿಲ್ಲುವುದಿಲ್ಲ” ಎಂದಿದ್ದರು.