'ವರಾಹ ರೂಪಂʼ ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣ: ರಿಷಬ್ ಶೆಟ್ಟಿ, ಕಿರಗಂದೂರುಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು

ಹಕ್ಕುಸ್ವಾಮ್ಯ ಉಲ್ಲಂಘನೆ ದಾವೆಗೆ ಸಂಬಂಧಿಸಿದ ಆದೇಶ ಹೊರಬೀಳುವವರೆಗೆ ರಿಷಬ್ ಶೆಟ್ಟಿ ಮತ್ತು ನಿರ್ಮಾಪಕರು 'ವರಾಹ ರೂಪಂ' ಹಾಡಿರುವ ಕಾಂತಾರ ಚಲನಚಿತ್ರವನ್ನು ಪ್ರದರ್ಶಿಸುವಂತಿಲ್ಲ ಎಂದು ನಿರ್ದಿಷ್ಟ ಜಾಮೀನು ಷರತ್ತು ವಿಧಿಸಿದ ನ್ಯಾಯಾಲಯ.
Varaha Roopam , Rishab Shetty
Varaha Roopam , Rishab Shetty

ʼವರಾಹ ರೂಪಂʼ ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ʼಕಾಂತಾರʼ ಚಿತ್ರದ ನಿರ್ದೇಶಕ ರಿಷಬ್‌ ಶೆಟ್ಟಿ ಮತ್ತು ನಿರ್ಮಾಪಕ ವಿಜಯ್‌ ಕಿರಗಂದೂರು ಅವರಿಗೆ ಕೇರಳ ಹೈಕೋರ್ಟ್‌ ಸೋಮವಾರ ನಿರೀಕ್ಷಣಾ ಜಾಮೀನು ನೀಡಿದೆ [ವಿಜಯ್‌ ಕಿರಗಂದೂರು ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

ವರಾಹರೂಪಂ ಹಾಡು ಎರಡು ದಾವೆಗಳಿಗೆ ಸಂಬಂಧಿಸಿದ ವಿಷಯವಾಗಿದ್ದು ನವರಸಂ ಹಾಡಿನ ಹಕ್ಕುಸ್ವಾಮ್ಯ ಹೊಂದಿದ್ದ 'ಮಾತೃಭೂಮಿ ಮುದ್ರಣ ಮತ್ತು ಪ್ರಕಾಶನ ಸಂಸ್ಥೆ' ಹಾಗೂ ಐದು ವರ್ಷಗಳ ಹಿಂದೆ ಹಾಡನ್ನು ಸಂಯೋಜಿಸಿದ್ದ ಕೇರಳದ ಜನಪ್ರಿಯ ಸಂಗೀತ ತಂಡ 'ಥೈಕ್ಕುಡಂ ಬ್ರಿಜ್‌' ಮೊಕದ್ದಮೆ ಹೂಡಿದ್ದವು.

ರಿಷಬ್‌ ಮತ್ತು ಕಿರಗಂದೂರು ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಾಗ, ನ್ಯಾಯಮೂರ್ತಿ ಎ ಬದ್ರುದ್ದೀನ್ ಅವರು "ಮಧ್ಯಂತರ ಆದೇಶ ಅಥವಾ ಅಂತಿಮ ಆದೇಶದವರೆಗೆ  ಅರ್ಜಿದಾರರಾದ ರಿಷಬ್ ಶೆಟ್ಟಿ ಮತ್ತು ನಿರ್ಮಾಪಕರು ವರಾಹ ರೂಪಂ ಹಾಡನ್ನು ಒಳಗೊಂಡ ʼಕಾಂತಾರʼ ಚಲನಚಿತ್ರವನ್ನು ಪ್ರದರ್ಶಿಸುವಂತಿಲ್ಲ. ಹಕ್ಕುಸ್ವಾಮ್ಯ ಕುರಿತಂತೆ ಸಂಬಂಧಪಟ್ಟ ಸಿವಿಲ್‌ ನ್ಯಾಯಾಲಯ ತೀರ್ಮಾನಿಸಬೇಕು” ಎಂದು ನಿರ್ದಿಷ್ಟ ಜಾಮೀನು ಷರತ್ತು ವಿಧಿಸಿದರು.

ನ್ಯಾಯವ್ಯಾಪ್ತಿಯ ಸಮಸ್ಯೆಯಿಂದಾಗಿ ಹಕ್ಕುಸ್ವಾಮ್ಯ ಉಲ್ಲಂಘನೆ ಮೊಕದ್ದಮೆಯ ವಿಚಾರಣೆ ಸ್ಥಗಿತಗೊಂಡಿದೆ ಎಂಬ ವಿಚಾರ ಗಮನಿಸಿದ ನ್ಯಾಯಮೂರ್ತಿಗಳು “ಇದನ್ನು ಹೈಕೋರ್ಟ್‌ ಇನ್ನೂ ನಿರ್ಧರಿಸಬೇಕಿರುವುದರಿಂದ ಮೊಕದ್ದಮೆಯ ಇತರ ಕಕ್ಷಿದಾರರ ಹಿತ ರಕ್ಷಿಸುವುದರ ಜೊತೆಗೆ ನಿರೀಕ್ಷಣಾ ಜಾಮೀನು ನೀಡುವುದು ಸೂಕ್ತ" ಎಂದು ಪರಿಗಣಿಸಿದರು.

“ಆರೋಪಿಗಳನ್ನು ನಿರೀಕ್ಷಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿ ಹಕ್ಕುಸ್ವಾಮ್ಯ ಉಲ್ಲಂಘಿಸುವವರಿಗೆ ಅದರ ಲಾಭ ಪಡೆಯಲು ಅನುಮತಿ ನೀಡುವುದು ಸಾಧ್ಯವಿಲ್ಲ. ಹಾಗೆ ಮಾಡಿದರೆ ಅಂತಿಮವಾಗಿ ಹಕ್ಕು ಸ್ವಾಮ್ಯ ಉಲ್ಲಂಘನೆ ಮಾಡಿದವರು ಇದರ ಲಾಭವನ್ನು ಪಡೆಯುತ್ತಾರೆ… ಪರಿಣಾಮ ಕೃತಿಸ್ವಾಮ್ಯ ಪಡೆದವರ ಹಕ್ಕನ್ನು ಕಸಿದುಕೊಂಡಂತಾಗುತ್ತದೆ” ಎಂದು ನ್ಯಾಯಾಲಯ ಹೇಳಿತು.

ಆದರೆ ಹಕ್ಕುಸ್ವಾಮ್ಯ ಉಲ್ಲಂಘನೆಯ ಆರೋಪಗಳ ಕುರಿತು ತ್ವರಿತ ತೀರ್ಪು ಪಡೆಯಲು ಆರೋಪಿಗಳು ಸಂಬಂಧಪಟ್ಟ ಸಿವಿಲ್‌ ನ್ಯಾಯಾಲಯದ ಮೊರೆ ಹೋಗಬಹುದು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಜೊತೆಗೆ ತನಿಖೆಗೆ ಸಹಕರಿಸಬೇಕು, ವಿಚಾರಣೆಗೆ ಲಭ್ಯವಿರಬೇಕು. ಸಾಕ್ಷಿಗಳ ಮೇಲೆ ಪ್ರಭಾವ ಬೀರುವಂತಿಲ್ಲ, ಸಾಕ್ಷ್ಯ ತಿರುಚುವಂತಿಲ್ಲ ಹಾಗೂ ಯಾವುದೇ ಅಪರಾಧದಲ್ಲಿ ಭಾಗಿಯಾಗುವಂತಿಲ್ಲ ಎಂದು ರಿಷಬ್‌ ಮತ್ತು ಕಿರಗಂದೂರು ಅವರಿಗೆ ಪೀಠ ಸೂಚಿಸಿತು.

ಈ ಇಬ್ಬರೂ ʼಕಾಂತಾರʼ ಚಿತ್ರದ ವರಾಹರೂಪಂ ಹಾಡಿನಲ್ಲಿ ನವರಸಂ ಗೀತೆಯ ಸಂಗೀತ ಬಳಸಿಕೊಂಡು ಹಕ್ಕುಸ್ವಾಮ್ಯ ಕಾಯಿದೆಯ ಸೆಕ್ಷನ್‌ 63ರ ಅಡಿ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ ಎಂದು ಪ್ರಕರಣ ದಾಖಲಿಸಲಾಗಿತ್ತು. ತಮ್ಮ ನಿರೀಕ್ಷಣಾ ಜಾಮೀನಿನಲ್ಲಿ ಈ ಇಬ್ಬರೂ ಚಿತ್ರಕರ್ಮಿಗಳು ವರಾಹ ರೂಪಂ ಹಾಡು ಸ್ವತಂತ್ರ ಸೃಷ್ಟಿಯಾಗಿದ್ದು ನವರಸಂ ಹಾಡಿಗೂ ಇದಕ್ಕೂ ಸಂಬಂಧವಿಲ್ಲ ಎಂದು ವಾದಿಸಿದ್ದರು.  ಆದರೆ ತನಿಖೆಗೆ ಅಡ್ಡಿಯಾಗುವುದರಿಂದ ನಿರೀಕ್ಷಣಾ ಜಾಮೀನು ನೀಡುವುದಕ್ಕೆ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ಎಫ್‌ಐಆರ್‌ನಲ್ಲಿ ಆರೋಪಗಳನ್ನು ಮೇಲ್ನೋಟಕ್ಕೆ ಸಾಬೀತುಪಡಿಸುವಂತಹ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದಿದ್ದರು.  

ನ್ಯಾಯಾಲಯ ಆರಂಭದಲ್ಲಿ ಇದು ಸಂಜ್ಞೇಯ ಮತ್ತು ಜಾಮೀನುರಹಿತ ಅಪರಾಧವಾಗಿದೆ ಎಂದಿತ್ತು. ಎರಡೂ ಹಾಡುಗಳಲ್ಲಿ ಸಾಮ್ಯತೆ ಇರುವುದು ತನಿಖಾಧಿಕಾರಿಗಳು ಸಂಗ್ರಹಿಸಿದ ದಾಖಲೆಗಳಿಂದ ತಿಳಿದುಬಂದಿದೆ ಎಂಬುದಾಗಿ ಹೇಳಿತ್ತು.

ಕೋರಿಕ್ಕೋಡ್ ಮತ್ತು ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯಗಳಲ್ಲಿ 'ಮಾತೃಭೂಮಿ' ಸಂಸ್ಥೆ ಮತ್ತು 'ಥೈಕ್ಕುಡಂ ಬ್ರಿಜ್‌' ಎರಡು ಪ್ರತ್ಯೇಕ ಮೊಕದ್ದಮೆ ಹೂಡಿರುವುದನ್ನು ನ್ಯಾಯಾಲಯ ಬಳಿಕ ಗಮನಿಸಿತ್ತು. ಎರಡೂ ನ್ಯಾಯಾಲಯಗಳು ದಾವೆಯ ವಿಚಾರಣೆಗೆ ನಿರಾಕರಿಸಿದ್ದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಲಾಗಿತ್ತು. ಈ ಪ್ರಕರಣಗಳ ವಿಚಾರಣೆ ಹೈಕೋರ್ಟ್‌ನಲ್ಲಿ ಇನ್ನಷ್ಟೇ ಇತ್ಯರ್ಥವಾಗಬೇಕಿದೆ.

ಸಿವಿಲ್ ಮೊಕದ್ದಮೆಗಳ ವಿಚಾರಣೆ ವಿಳಂಬವಾದ ಹಿನ್ನೆಲೆಯಲ್ಲಿ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ನೀಡಿತು. ಅರ್ಜಿದಾರರ ಪರ ವಕೀಲರಾದ ಅನೂಪ್ ವಿ ನಾಯರ್, ಇ ಆದಿತ್ಯನ್ ಮತ್ತು ರೋಹನ್ ಮಾಮೆನ್ ರಾಯ್ ವಾದ ಮಂಡಿಸಿದ್ದರು.

Related Stories

No stories found.
Kannada Bar & Bench
kannada.barandbench.com