ಸಾಮಾಜಿಕ ಮಾಧ್ಯಮ ನೀತಿ ಸಂಹಿತೆ ಜಾರಿಗೊಳಿಸಿದ ಕೇರಳ ಹೈಕೋರ್ಟ್‌; ಸರ್ಕಾರ ಟೀಕಿಸದಂತೆ ಅಧಿಕಾರಿಗಳು, ಸಿಬ್ಬಂದಿಗೆ ಸೂಚನೆ

ತೀರ್ಪುಜನ್ಯ ಕಾನೂನುಗಳು ಮತ್ತು ನ್ಯಾಯಾಲಯದ ತೀರ್ಪುಗಳು ಅಥವಾ ನ್ಯಾಯಿಕ ಚಟುವಟಿಕೆಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ವಿವಾದಾತ್ಮಕಗೊಳಿಸುವ ಅಭಿಪ್ರಾಯ ವ್ಯಕ್ತಪಡಿಸದಂತೆ ತನ್ನ ಸಿಬ್ಬಂದಿಗೆ ನೀತಿ ಸಂಹಿತೆಯಲ್ಲಿ ನ್ಯಾಯಾಲಯವು ನಿರ್ದೇಶಿಸಿದೆ.
Kerala High Court and social media
Kerala High Court and social media

'ನಕಲಿ ಈಮೇಲ್‌ ಅಥವಾ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹೊಂದುವಂತಿಲ್ಲ. ತಾವು ನಿರ್ವಹಿಸುತ್ತಿರುವ ಸಾಮಾಜಿಕ ಮಾಧ್ಯಮ ಅಥವಾ ಈಮೇಲ್‌ ವಿಳಾಸವನ್ನು ಘೋಷಿಸಬೇಕು. ಅಧಿಕೃತ ತಾಣದಲ್ಲಿ ವೈಯಕ್ತಿಕ ಸಂವಹನ ನಡೆಸುವಂತಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವಾಗ ಎಚ್ಚರಿಕೆಯಿಂದ ಇರಬೇಕು,' ಇನ್ನು ಮುಂತಾದ ಅಂಶಗಳನ್ನು ಒಳಗೊಂಡ ಏನು ಮಾಡಬೇಕು (ಟು ಡು) ಎಂಬ ಪಟ್ಟಿಯನ್ನು ತನ್ನ ಅಧಿಕಾರಿಗಳು ಹಾಗೂ ಸಿಬ್ಬಂದಿಗಾಗಿ ಕೇರಳ ಹೈಕೋರ್ಟ್‌ ಸಿದ್ಧಪಡಿಸಿ ಜಾರಿಗೊಳಿಸಿದೆ.

ಹೈಕೋರ್ಟ್‌ ಮತ್ತು ಜಿಲ್ಲಾ ನ್ಯಾಯಾಲಯಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸಾಮಾಜಿಕ ಮಾಧ್ಯಮ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ನಿಯಂತ್ರಿಸುವ, ಮಧ್ಯಪ್ರವೇಶ ತಡೆಯುವ ನೀತಿ ಸಂಹಿತೆಯನ್ನು ಕೇರಳ ಹೈಕೋರ್ಟ್‌ ಸಿದ್ಧಪಡಿಸಿದೆ.

ಮಾರ್ಚ್‌ 22ರಂದು ನಡೆದ ಆಡಳಿತ ಸಮಿತಿಯ ಸಭೆಯಲ್ಲಿ ನೀತಿ ಸಂಹಿತೆಯ ಕರಡಿಗೆ ಒಪ್ಪಿಗೆ ನೀಡಲಾಗಿದ್ದು, ಅದನ್ನು ಹೈಕೋರ್ಟ್‌ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅನ್ವಯಿಸಲಾಗಿದೆ. ನೀತಿ ಸಂಹಿತೆಯ ಪ್ರಕಾರ ಹೈಕೋರ್ಟ್‌ ಹಾಗೂ ಜಿಲ್ಲಾ ನ್ಯಾಯಾಲಯಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯು ಕಂಪ್ಯೂಟರ್‌ ಮತ್ತು ವಿದ್ಯುನ್ಮಾನ ಗ್ಯಾಜೆಟ್‌ಗಳನ್ನು ಬಳಿಸಿ ಸಾಮಾಜಿಕ ಮಾಧ್ಯಮ ದುರ್ಬಳಕೆ ತಪ್ಪಿಸಲು ನಿಗಾ ಘಟಕ ಸ್ಥಾಪಿಸಲಾಗುವುದು.

ಹೈಕೋರ್ಟ್‌ ಮತ್ತು ಜಿಲ್ಲಾ ನ್ಯಾಯಾಲಯಗಳ ಸಿಬ್ಬಂದಿಯು ತಮ್ಮ ಇಮೇಲ್‌ ಮತ್ತು ತಾವು ನಿರ್ವಹಿಸುತ್ತಿರುವ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಘೋಷಿಸುವಂತೆ ನಿರ್ದೇಶಿಸಲಾಗಿದೆ. ನಕಲಿ ಐಡಿ ಅಥವಾ ಖಾತೆಗಳನ್ನು ಬಳಸದಂತೆಯೂ ಅವರಿಗೆ ಸೂಚಿಸಿಲಾಗಿದೆ.

ಕರ್ತವ್ಯದ ಸಮಯದಲ್ಲಿ ನಿಷೇಧಿತ ತಾಣಗಳಿಗೆ ಭೇಟಿ ನೀಡದಂತೆ ಹಾಗೂ ಅಧಿಕೃತ ತಾಣಗಳಲ್ಲಿ ವೈಯಕ್ತಿಕ ವಿಚಾರಗಳ ಸಂವಹನ ನಡೆಸದಂತೆ ತನ್ನ ಸದಸ್ಯರಿಗೆ ನ್ಯಾಯಾಲಯವು ಸೂಚಿಸಿದೆ.

ಕಚೇರಿ ಟಿಪ್ಪಣಿಯ ಪ್ರಕಾರ ನೀತಿ ಸಂಹಿತೆಯ ಅನ್ವಯ ಕೆಲವು ಪ್ರಮುಖ ನಿರ್ಧಾರಗಳನ್ನು ಜಾರಿಗೊಳಿಸುವ ಸಾಧ್ಯತೆ ಇದ್ದು, ಅವು ಇಂತಿವೆ:

  • ಸರ್ಕಾರ ಮತ್ತು ಅದರ ಸಂಸ್ಥೆಗಳು, ಮಂತ್ರಿಗಳು, ಅಧಿಕಾರಿಗಳು, ಇಲಾಖೆಗಳ ಮುಖ್ಯಸ್ಥರು, ನ್ಯಾಯಾಧೀಶರು, ರಾಜಕೀಯ ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರ ನೀತಿಗಳು ಮತ್ತು ಕ್ರಮಗಳನ್ನು ಟೀಕಿಸುವ ಆಕ್ರಮಣಕಾರಿ, ಬೇಜವಾಬ್ದಾರಿಯುತ ಅಥವಾ ಮಾನಹಾನಿಕರ ಹೇಳಿಕೆಗಳನ್ನು ನೀಡಲು ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಂಗದ ಸಿಬ್ಬಂದಿ ಸಾಮಾಜಿಕ ಮಾಧ್ಯಮವನ್ನು ಬಳಸುವಂತಿಲ್ಲ.

  • ಯಾವುದೇ ಸಾಂಸ್ಕೃತಿಕ, ಜನಾಂಗೀಯ, ಸಾಮಾಜಿಕ ಅಥವಾ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಬಹುದಾದ ವಿಚಾರಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವಾಗ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಂಗದ ಸಿಬ್ಬಂದಿ ಬಹಳ ಜಾಗರೂಕರಾಗಿರಬೇಕು.

  • ಯಾವುದೇ ಅವಹೇಳನಕಾರಿ ಅಥವಾ ಅವಮಾನಕರ ಟೀಕೆಗಳು, ಯಾವುದೇ ವ್ಯಕ್ತಿಗೆ ಸಂಬಂಧಿಸಿದ ಪ್ರತಿಕ್ರಿಯೆಗಳು, ಅಧಿಕೃತ, ಸಾಮಾಜಿಕ-ಸಾಂಸ್ಕೃತಿಕ ಅಥವಾ ರಾಜಕೀಯ ವ್ಯಕ್ತಿಗಳ ಗುಂಪಿನ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪ್ರಸ್ತಾಪಿಸಲಾದ ವಿಚಾರಗಳ ಬಗೆಗಿನ ಟೀಕೆಗಳಿಂದ ಸಿಬ್ಬಂದಿ ದೂರವಿರಲಿದ್ದಾರೆ.

  • ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಂಗದ ಸಿಬ್ಬಂದಿ ಕಚೇರಿಯ ದಾಖಲೆಗಳಿಗೆ ಸಂಬಂಧಿಸಿದ ಯಾವುದೇ ವಿಚಾರಣೆಗಳು, ಅಧಿಕೃತ ಕ್ರಮಗಳು, ದಾಖಲೆಗಳು ಅಥವಾ ದತ್ತಾಂಶವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಬಾರದು ಅಥವಾ ಹೈಕೋರ್ಟ್‌ನ ಪೂರ್ವಾನುಮತಿ ಇಲ್ಲದೆ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ವಿಷಯಗಳ ಬಗ್ಗೆ ಬ್ಲಾಗ್‌ಗಳನ್ನು ಪ್ರಕಟಿಸುವಂತಿಲ್ಲ.

  • ಹೈಕೋರ್ಟ್‌ ಮತ್ತು ಜಿಲ್ಲಾ ನ್ಯಾಯಾಂಗದ ಸಿಬ್ಬಂದಿ ಮತ್ತು ಅಧಿಕಾರಿಗಳು ಕಂಪ್ಯೂಟಿಂಗ್‌, ದತ್ತಾಂಶ ಹ್ಯಾಕ್‌ ಅಥವಾ ಬೇರಾವುದೇ ಕಾನೂನುಬಾಹಿರ ಚಟುವಟಿಕೆಗಳಿಗಾಗಿ ಮೊಬೈಲ್‌ ಫೋನ್‌ಗಳು, ಟ್ಯಾಬ್ಲೆಟ್‌ಗಳು, ವಿದ್ಯುನ್ಮಾನ ಗ್ಯಾಜೆಟ್‌ ಇತ್ಯಾದಿಗಳನ್ನು ಬಳಸುವಂತಿಲ್ಲ.

  • ಹೈಕೋರ್ಟ್‌ ಮತ್ತು ಜಿಲ್ಲಾ ನ್ಯಾಯಾಂಗದ ಅಧಿಕಾರಿಗಳು ನಿಂದನಾತ್ಮಕವಾದ, ಹತೋಟಿ ಇಲ್ಲದ, ಅಸಹ್ಯದಿಂದ ಕೂಡಿದ, ಕಟುಟೀಕೆಯ, ಪ್ರಚೋದನಕಾರಿ, ತಾರತಮ್ಯದ ಅಭಿಪ್ರಾಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸುವಂತಿಲ್ಲ.

  • ಮುಂದುವರಿದು, ತೀರ್ಪುಜನ್ಯ ಕಾನೂನುಗಳು (ಕೇಸ್‌ ಲಾ) ಮತ್ತು ನ್ಯಾಯಾಲಯದ ತೀರ್ಪುಗಳು ಅಥವಾ ನ್ಯಾಯಿಕ ಚಟುವಟಿಕೆಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ವಿವಾದಾತ್ಮಕಗೊಳಿಸುವ ಅಭಿಪ್ರಾಯ ವ್ಯಕ್ತಪಡಿಸದಂತೆ ತನ್ನ ಎಲ್ಲಾ ಸಿಬ್ಬಂದಿ ಮತ್ತು ಸದಸ್ಯರಿಗೆ ನೀತಿ ಸಂಹಿತೆಯಲ್ಲಿ ನ್ಯಾಯಾಲಯವು ನಿರ್ದೇಶಿಸಿದೆ.

Related Stories

No stories found.
Kannada Bar & Bench
kannada.barandbench.com