ಅಪರಾಧಕ್ಕಾಗಿ ಬಳಕೆಯಾಗದ ಹೊರತು ತನಿಖಾ ಸಂಸ್ಥೆಯು ಪಾಸ್‌ಪೋರ್ಟ್‌ ವಶಕ್ಕೆ ಪಡೆಯುವಂತಿಲ್ಲ: ಕೇರಳ ಹೈಕೋರ್ಟ್

"ಪಾಸ್‌ಪೋರ್ಟ್‌ ಬಳಸಿ ಯಾವುದೇ ಅಪರಾಧ ನಡೆದಿದೆ ಎಂದು ಶಂಕಿಸಲಾಗದಿದ್ದರೆ, ಅದನ್ನು ತನಿಖಾ ಸಂಸ್ಥೆಗಳು ವಶಪಡಿಸಿಕೊಳ್ಳಲು ಅಥವಾ ಇರಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಹೇಳಿದೆ.
ಕೇರಳ ಹೈಕೋರ್ಟ್ ಮತ್ತು ಪಾಸ್‌ಪೋರ್ಟ್‌
ಕೇರಳ ಹೈಕೋರ್ಟ್ ಮತ್ತು ಪಾಸ್‌ಪೋರ್ಟ್‌

ಅಪರಾಧ ಕೃತ್ಯಕ್ಕಾಗಿ ಪಾಸ್‌ಪೋರ್ಟ್‌ ಬಳಸಲಾಗಿದೆ ಎಂಬ ಅನುಮಾನ ಇಲ್ಲದಿದ್ದರೆ ತನಿಖಾ ಸಂಸ್ಥೆಗಳು ಆರೋಪಿಗಳ ಪಾಸ್‌ಪೋರ್ಟ್‌ಗಳನ್ನು ವಶಕ್ಕೆ ಪಡೆಯುವುದಾಗಲೀ ಅಥವಾ ತಮ್ಮಲ್ಲಿ ಇರಿಸಿಕೊಳ್ಳುವುದಾಗಲೀ ಮಾಡುವಂತಿಲ್ಲ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.

ಜಾಮೀನು ಆದೇಶದಲ್ಲಿ ಯಾವುದೇ ಷರತ್ತು ವಿಧಿಸದೇ ಇರುವಾಗ ಪಾಸ್‌ಪೋರ್ಟ್‌ಅನ್ನು ದೀರ್ಘಕಾಲದವರೆಗೆ ಇರಿಸಿಕೊಳ್ಳುವುದು ಅದನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಸಮನಾಗಿದ್ದು ಇದು ಕಾನೂನಿಗೆ ವಿರುದ್ಧ ಎಂದು ನ್ಯಾ. ಬೆಚು ಕುರಿಯನ್‌ ಥಾಮಸ್‌ ಅವರಿದ್ದ ಪೀಠ ತಿಳಿಸಿತು.

ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್
ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್

ಸುರೇಶ್ ನಂದಾ ಮತ್ತು ಸಿಬಿಐ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಪೀಠ ಉಲ್ಲೇಖಿಸಿತು. ಸಿಆರ್‌ಪಿಸಿ ಸೆಕ್ಷನ್‌ 102 (1)ರ ಅಡಿಯಲ್ಲಿ ಪಾಸ್‌ಪೋರ್ಟ್‌ ವಶಪಡಿಸಿಕೊಳ್ಳುವ ಅಧಿಕಾರ ಪೊಲೀಸರಿಗೆ ಇದ್ದರೂ, ಅವರಿಗೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ. ಪಾಸ್‌ಪೋರ್ಟ್‌ ಕಾಯಿದೆ, 1967ರ ಸೆಕ್ಷನ್ 10 (3) ರ ಅಡಿಯಲ್ಲಿ ಪಾಸ್‌ಪೋರ್ಟ್‌ ಅಧಿಕಾರಿ ಮಾತ್ರ ಹೀಗೆ ಮಾಡಬಹುದು ಎಂದು ತೀರ್ಪು ಹೇಳಿತು.

ದಾಖಲೆಯನ್ನು ವಶಪಡಿಸಿಕೊಳ್ಳುವುದಕ್ಕೂ ಅದನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೂ ವ್ಯತ್ಯಾಸವಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿರುವುದನ್ನು ಪೀಠ ಪ್ರಸ್ತಾಪಿಸಿತು. ಒಮ್ಮೆ ದಾಖಲೆ ಅಥವಾ ವಸ್ತುವನ್ನು ವಶಕ್ಕೆ (ಸೀಜುರ್‌) ಪಡೆದ ನಂತರ ಅದನ್ನು ನಿರ್ದಿಷ್ಟ ಅವಧಿಯವರೆಗೆ ಸ್ವಾಧೀನದಲ್ಲಿರಿಸಿಕೊಂಡರೆ ಆಗ ಅದು ಮುಟ್ಟುಗೋಲಾಗುತ್ತದೆ (ಇಂಪೌಂಡಿಂಗ್).

3.5 ಕಿಲೋಗ್ರಾಂಗಳಷ್ಟು ಹಶಿಶ್ ಇದ್ದ ಪಾರ್ಸೆಲ್ ಸ್ವೀಕರಿಸಿದ ಆರೋಪದ ಮೇಲೆ ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್‌) ಕಾಯಿದೆ- 1985ರ ಅಡಿಯಲ್ಲಿ 2022ರ ಏಪ್ರಿಲ್‌ನಲ್ಲಿ ಬಂಧಿತನಾಗಿದ್ದ ವ್ಯಕ್ತಿ ಈ ಸಂಬಂಧ ಅರ್ಜಿ ಸಲ್ಲಿಸಿದ್ದ.

ಒಂದು ತಿಂಗಳ ಬಳಿಕ ಜಾಮೀನ ಮೇಲೆ ಬಿಡುಗಡೆಯಾಗಿದ್ದ ಆತ ತನ್ನ ಪಾಸ್‌ಪೋರ್ಟ್‌, ಗುರುತಿನ ಚೀಟಿ ಹಾಗೂ ಮೊಬೈಲ್‌ ಫೋನನ್ನು ಪೊಲೀಸರಿಂದ ಮರಳಿ ಕೊಡಿಸುವಂತೆ ಕೋರಿ ಎರ್ನಾಕುಲಂ ಸೆಷನ್ಸ್‌ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಸೆಷನ್ಸ್‌ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಆತ ಹೈಕೋರ್ಟ್‌ ಮೆಟ್ಟಿಲೇರಿದ್ದ.

ಅರ್ಜಿದಾರನ ಮನವಿ ಪುರಸ್ಕರಿಸಿದ ನ್ಯಾಯಾಲಯ ಪಾಸ್‌ಪೋರ್ಟ್‌, ಮೊಬೈಲ್ ಫೋನ್ ಮತ್ತು ಗುರುತಿನ ಚೀಟಿ ಮರಳಿಸುವಂತೆ ತನಿಖಾ ಸಂಸ್ಥೆಗೆ ನಿರ್ದೇಶಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Davood v. State of Kerala.pdf
Preview

Related Stories

No stories found.
Kannada Bar & Bench
kannada.barandbench.com