ಮಾರ್ಪಡಿಸಿದ ವಾಹನಗಳಿಂದ ವಿಡಿಯೋ: ವ್ಲಾಗರ್‌ಗಳ ವಿರುದ್ಧ ಕಠಿಣ ಕ್ರಮಕ್ಕೆ ಕೇರಳ ಹೈಕೋರ್ಟ್ ಆದೇಶ

ಕಾನೂನುಬಾಹಿರವಾಗಿ ಮಾರ್ಪಡಿಸಿದ ವಾಹನಗಳು ಅದರ ಮಾಲೀಕರು ಹಾಗೂ ಅಂತಹ ವಾಹನಗಳನ್ನು ವಿಡಿಯೋ ಮಾಡಿ ಪ್ರಚುರಪಡಿಸುವ ವ್ಲಾಗರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿವಿಧ ನಿರ್ದೇಶನಗಳನ್ನು ನೀಡಿದ ಪೀಠ.
Vlog posts on modified cars
Vlog posts on modified cars Screengrab from YouTube, extracted from High Court order

ಕಾನೂನುಬಾಹಿರವಾಗಿ ಮಾರ್ಪಡಿಸಿದ ವಾಹನಗಳು, ಅದರ ಮಾಲೀಕರು ಹಾಗೂ ಅಂತಹ ಚಲಿಸುತ್ತಿರುವ ವಾಹನಗಳ ಡ್ರೈವರ್‌ ಕ್ಯಾಬಿನ್‌ನಲ್ಲಿ ಕುಳಿತು ವಿಡಿಯೋ ಚಿತ್ರೀಕರಿಸುವ ವ್ಲಾಗರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇರಳ ಹೈಕೋರ್ಟ್‌ ಆದೇಶಿಸಿದೆ [ಸ್ವಯಂ ಪ್ರೇರಿತ ಮೊಕದ್ದಮೆ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ]

ಮಾರ್ಪಾಡು ಮಾಡಿದ ವಾಹನಗಳ ಕ್ಯಾಬಿನ್‌ಗಳಲ್ಲಿ ಕುಳಿತು ವೀಡಿಯೊ ಮಾಡಿ ಚಾಲಕನ ಏಕಾಗ್ರತೆಗೆ ಭಂಗ ತರುವ ಮತ್ತು ಪ್ರಯಾಣಕ್ಕೆ ಅಡ್ಡಿಪಡಿಸುವ ವ್ಲಾಗರ್‌ಗಳು (ವೀಡಿಯೊ ಬ್ಲಾಗರ್‌ಗಳು)  1988ರ ಮೋಟಾರು ವಾಹನ ಕಾಯಿದೆಯಡಿ ಕ್ರಮ ಎದುರಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಹರಿಶಂಕರ್ ವಿ ಮೆನನ್ ಅವರು ಮೇ 31ರ ಆದೇಶದಲ್ಲಿ ತಿಳಿಸಿದ್ದಾರೆ.

ವಾಹನದ ರೂಪವನ್ನು ಅಕ್ರಮವಾಗಿ ಬದಲಿಸುವ ಮಾಲೀಕರ ವಿರುದ್ಧ ಮೋಟಾರು ವಾಹನ ಕಾಯಿದೆಯಡಿ ವಾಹನದ ಪ್ರತಿಯೊಂದು ಬದಲಾವಣೆಗೂ ತಲಾ ₹ 5,000 ದಂಡ ವಿಧಿಸಬೇಕು ಎಂದು ನ್ಯಾಯಾಲಯ ನುಡಿದಿದೆ.

ಇಂತಹ ವ್ಲಾಗರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅವರು ಯೂಟ್ಯೂಬ್‌ನಂತಹ ಆನ್‌ಲೈನ್‌ ವೇದಿಕೆಗಳಲ್ಲಿ ಅಪ್‌ಲೋಡ್‌ ಮಾಡಿರುವ ಮಾರ್ಪಡಿತ ವಾಹನಗಳ ವೀಡಿಯೊ ಕುರಿತು ಮಾಹಿತಿ ಕಲೆಹಾಕುವಂತೆ ಕೇರಳ ಮೋಟಾರು ವಾಹನ ಇಲಾಖೆಯ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.

ಎಐಎಸ್‌-008 ನಲ್ಲಿ ವಿವರಿಸಿರುವ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿ ಅನಧಿಕೃತ ದೀಪಗಳು, ಜೊತೆಗೆ ಜ್ವಾಜಲ್ಯಮಾನ ಬೆಳಕು, ಹೊಗೆ ಮತ್ತು ಶಬ್ದ ಹೊರಸೂಸುವ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡ ಮಾರ್ಪಡಿತ ವಾಹನಗಳಿಗೆ ಸಂಬಂಧಿಸಿದಂತೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಮೊಕದ್ದಮೆಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ಈ ಸಂಬಂಧ ತಾನು ನೀಡುತ್ತಿರುವ ವಿವಿಧ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಾರಿಗೆ ಆಯುಕ್ತರು ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಆದೇಶಿಸಿದ ನ್ಯಾಯಾಲಯ ಜೂನ್ 7, 2024ಕ್ಕೆ ಪ್ರಕರಣ ಮುಂದೂಡಿತು.

Kannada Bar & Bench
kannada.barandbench.com