ಅಪರೂಪದ ಘಟನೆ: ಪೋಷಕರ ಸ್ಥಾನದಲ್ಲಿ ನಿಂತು ಮಗುವಿನ ನಾಮಕರಣ ಮಾಡಿದ ಕೇರಳ ಹೈಕೋರ್ಟ್

ಮಗುವಿನ ಪೋಷಕರು ನಿರಂತರ ಜಗಳ ಮಗುವಿನ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರಬಾರದು ಎಂದು ನ್ಯಾ. ಬೆಚು ಕುರಿಯನ್ ಥಾಮಸ್ ಈ ಸಂದರ್ಭದಲ್ಲಿ ತಿಳಿಸಿದರು.
Kerala HC, Estranged parents
Kerala HC, Estranged parents

ವಿಚ್ಛೇದಿತ ಪೋಷಕರು ತಮ್ಮ ಮಗುವಿಗೆ ನಾಮಕರಣ ಮಾಡದೇ ಹೋದಾಗ ಕೇರಳ ಹೈಕೋರ್ಟ್ ಈಚೆಗೆ ತಾನೇ ಪೋಷಕರ ಅಧಿಕಾರ (Parents Patriae Jurisdiction) ಚಲಾಯಿಸಿ ಮಗುವಿಗೆ ನಾಮಕರಣ ಮಾಡಿದ ವಿರಳ ಘಟನೆ ನಡೆದಿದೆ.

ಮಗುವಿನ ಪೋಷಕರು ನಿರಂತರ ಜಗಳ ಮಗುವಿನ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರಬಾರದು ಎಂದು ನ್ಯಾ. ಬೆಚು ಕುರಿಯನ್ ಥಾಮಸ್ ಈ ಸಂದರ್ಭದಲ್ಲಿ ತಿಳಿಸಿದರು.  

Also Read
ವೀರಪ್ಪನ್ ಶೋಧದ ನೆವದಲ್ಲಿ ವಾಚಾತಿ ಅತ್ಯಾಚಾರ ಪ್ರಕರಣ: 215 ಸರ್ಕಾರಿ ನೌಕರರ ಶಿಕ್ಷೆ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್

“ಮಗುವಿಗೆ ಹೆಸರು ಇಡದೇ ಇರುವುದು ಅದರ ಏಳಿಗೆ ಮತ್ತು ಹಿತಾಸಕ್ತಿಗಳಿಗೆ ಅನುಕೂಲಕರ ರೀತಿಯಲ್ಲಿ ಇಲ್ಲ. ಮಗುವಿನ ಯೋಗಕ್ಷೇಮಕ್ಕಾಗಿ ಅದಕ್ಕೆ ಹೆಸರು ನೀಡಲೇಬೇಕಿದೆ. ಪೋಷಕರ ನಡುವಿನ ನಿರಂತರ ಜಗಳಗಳು ಮಗುವಿನ ಹಿತಾಸಕ್ತಿಗಳಿಗೆ ಪೂರಕವಾಗಿರುವುದಿಲ್ಲ. ಹೀಗಾಗಿ ಇದೊಂದು ವಿಶಿಷ್ಟ ಪ್ರಕರಣವಾಗಿದ್ದು ಪೋಷಕರ ಅಧಿಕಾರವನ್ನು ನ್ಯಾಯಾಲಯವೇ ಚಲಾಯಿಸಬೇಕಿದೆ” ಎಂದು ನ್ಯಾಯಮೂರ್ತಿಗಳು ಹೇಳಿದರು.

ಹೀಗಾಗಿ ತಾಯಿಯ ಆಯ್ಕೆಯ ಹೆಸರಾದ ಪುಣ್ಯ ಎಂಬ ಹೆಸರನ್ನು ಮಗುವಿಗೆ ಇಡಬೇಕು, ತಂದೆಯ ಹೆಸರನ್ನು ಉಪನಾಮವಾಗಿ ಸೇರ್ಪಡೆ ಮಾಡಬೇಕು ಎಂದು ಅವರು ಸೂಚಿಸಿದರು.

ಪೋಷಕರ ಅಧಿಕಾರವ್ಯಾಪ್ತಿ ಚಲಾಯಿಸುವಾಗ ಮಗುವಿನ ಕ್ಷೇಮ, ಸಾಂಸ್ಕೃತಿಕ ಪರಿಗಣನೆಗಳು, ಪೋಷಕರ ಹಿತಾಸಕ್ತಿ ಮತ್ತು ಸಾಮಾಜಿಕ ಮಾನದಂಡಗಳನ್ನು ಪರಿಗಣಿಸಿ ಮಗುವಿಗೆ ಹೆಸರನ್ನು ಆಯ್ಕೆ ಮಾಡಬೇಕಿದೆ ಎಂದು ನ್ಯಾಯಾಲಯ ವಿವರಿಸಿದೆ.

ತನ್ನ ಪತಿಯ ಅನುಪಸ್ಥಿತಿಯಲ್ಲಿ ಮಗುವಿನ ಹೆಸರನ್ನು ನೋಂದಾಯಿಸಲು ಸಾಧ್ಯವಿಲ್ಲ ಎಂದು ರಿಜಿಸ್ಟ್ರಾರ್‌ ಹೇಳಿದ್ದಾಗಿ ತಾಯಿ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ತಾನೇ ಮಗುವಿನ ನಾಮಕರಣ ಮಾಡುವ ನಿರ್ಧಾರ ತಳೆಯಿತು.

ತಂದೆಗೆ 'ಪದ್ಮ' ಎಂಬ ಹೆಸರು ಇಷ್ಟವಾಗಿದ್ದರೆ ತಾಯಿ 'ಪುಣ್ಯ' ಎಂಬ ಹೆಸರನ್ನು ಮಗುವಿಗೆ ಇಡಲು ಬಯಸಿದ್ದರು. ಆದರೆ ಈ ಹೆಸರುಗಳನ್ನು ಪರಸ್ಪರ ಒಪ್ಪದ ಕಾರಣ ತಾಯಿ ಹೈಕೋರ್ಟ್‌ ಮೊರೆ ಹೋಗಿದ್ದರು.

Kannada Bar & Bench
kannada.barandbench.com