ಶಬರಿಮಲೆಗೆ ಸಿನಿತಾರೆಯರ ಭಿತ್ತಿಚಿತ್ರ: ಕೇರಳ ಹೈಕೋರ್ಟ್ ಆಕ್ಷೇಪ, ಸಂಪ್ರದಾಯ ಪಾಲಿಸಲು ಸೂಚನೆ

ಶಬರಿಮಲೆ ಸನ್ನಿಧಾನದಲ್ಲಿ ಯಾತ್ರಾರ್ಥಿಗಳು ಚಲನಚಿತ್ರ ತಾರೆಯರ ಪೋಸ್ಟರ್‌ಗಳನ್ನು ಕೊಂಡೊಯ್ಯುವ ಮತ್ತು ವಾದ್ಯಗಳೊಂದಿಗೆ ಪ್ರದರ್ಶನ ನೀಡುವ ಘಟನೆಗಳನ್ನು ಗಮನಿಸಿದ ನ್ಯಾಯಾಲಯ ಈ ಆದೇಶ ನೀಡಿದೆ.
Pilgrims carrying poster of actor at Sabarimala temple
Pilgrims carrying poster of actor at Sabarimala temple

ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಯಾತ್ರಾರ್ಥಿ ಭಕ್ತರು ಸಮಂಜಸವಾದ ರೀತಿಯಲ್ಲಿ ಪೂಜೆ ಸಲ್ಲಿಸುವುದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಶಬರಿಮಲೆ ದೇವಸ್ಥಾನ ಆಡಳಿತ ನೋಡಿಕೊಳ್ಳುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿಗೆ ಕೇರಳ ಹೈಕೋರ್ಟ್ ಇತ್ತೀಚೆಗೆ ನಿರ್ದೇಶನ ನೀಡಿದೆ.

ಶಬರಿಮಲೆ ಸನ್ನಿಧಾನದಲ್ಲಿ ಯಾತ್ರಾರ್ಥಿಗಳು ಚಲನಚಿತ್ರ ತಾರೆಯರ ಪೋಸ್ಟರ್‌ಗಳನ್ನು ಕೊಂಡೊಯ್ಯುವ ಮತ್ತು ವಾದ್ಯಗಳೊಂದಿಗೆ ಪ್ರದರ್ಶನ ನೀಡುವ ಘಟನೆಗಳನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿ ಜಿ ಅಜಿತ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಪತ್ತಿನೆಟ್ಟಂಪಾಡಿ ಮೂಲಕ ಶಬರಿಮಲೆ ಸನ್ನಿಧಾನಕ್ಕೆ ಯಾವುದೇ ಯಾತ್ರಾರ್ಥಿಗಳಿಗೆ ಪ್ರವೇಶ ನೀಡದಂತೆ ಅಥವಾ ಭಿತ್ತಿಪತ್ರಗಳನ್ನು ಹಿಡಿದು ಶಬರಿಮಲೆ ಸನ್ನಿಧಾನದಲ್ಲಿ ದರ್ಶನ ಪಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿರುವಾಂಕೂರು ದೇವಸ್ವಂ ಮಂಡಳಿಗೆ ನಿರ್ದೇಶನ ನೀಡಿದ್ದು ಈ ಅರ್ಜಿ ವಿಲೇವಾರಿ ಮಾಡುವುದು ಸೂಕ್ತ ಎಂದು ಭಾವಿಸುತ್ತೇವೆ. ಖ್ಯಾತನಾಮರು, ರಾಜಕಾರಣಿಗಳು ಮುಂತಾದವರ ಭಿತ್ತಿಚಿತ್ರಗಳನ್ನು ಪ್ರದರ್ಶಿಸಲು ಅಥವಾ ಡೋಲು ಮತ್ತಿತರ ವಾದ್ಯಗಳನ್ನು ಶಬರಿಮಲೆ ಸನ್ನಿಧಾನದಲ್ಲಿ ನುಡಿಸಲು ಅವಕಾಶ ಇಲ್ಲ ಎಂದಿರುವ ಪೀಠ ಭಗವಾನ್‌ ಅಯ್ಯಪ್ಪನಿಗೆ ಪೂಜೆ ಸಲ್ಲಿಸುವ ಪ್ರತಿಯೊಬ್ಬ ಭಕ್ತರೂ ಶಬರಿಮಲೆಯಲ್ಲಿನ ಆಚರಣೆ ಮತ್ತು ಸಂಪ್ರದಾಯಕ್ಕೆ ಒಳಪಡುವುದು ಕರ್ತವ್ಯ ಎಂದು ನ್ಯಾಯಾಲಯ ಹೇಳಿದೆ.  

ಖ್ಯಾತನಾಮರು, ರಾಜಕಾರಣಿಗಳು ಮತ್ತಿತರರ ಪೋಸ್ಟರ್‌ ಹಾಗೂ ಕಟೌಟ್‌ಗಳನ್ನು ಆರಾಧಕರು ತರುತ್ತಿರುವ ಬಗ್ಗೆ ಶಬರಿಮಲೆ ಭಕ್ತರೊಬ್ಬರು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಇಮೇಲ್‌ ಮೂಲಕ ದೂರು ನೀಡಿದ್ದರು. ಇದನ್ನು ಆಧರಿಸಿ ಸ್ವಯಂಪ್ರೇರಿತವಾಗಿ ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಂಡಿತ್ತು.

ಪತ್ರಿಕಾ ವರದಿ ಪ್ರಕಾರ ಖ್ಯಾತ ಡ್ರಮ್‌ ವಾದಕ ಶಿವಮಣಿ ಅವರು ದೇವಸ್ಥಾನದ ಅಂಗಳದಲ್ಲಿ ಡ್ರಮ್‌ ನುಡಿಸಿದಂತಹ ಘಟನೆ ಬಗ್ಗೆಯೂ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಕೆಲ ದಿನಗಳ ಹಿಂದೆ ಪುನೀತ್‌ ರಾಜಕುಮಾರ್ ಅವರ ಪೋಸ್ಟರ್‌ಗಳನ್ನು ಹಿಡಿದು ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

"ಆಕ್ಸ್‌ಫರ್ಡ್ ನಿಘಂಟಿನ ಪ್ರಕಾರ, 'ಆರಾಧಕ' ಎಂದರೆ ದೇವತೆಗೆ ಗೌರವ ಮತ್ತು ಪೂಜೆ ಸಲ್ಲಿಸುವ ವ್ಯಕ್ತಿ. ಆರಾಧಿಸುವ ಹಕ್ಕು ನಾಗರಿಕ ಹಕ್ಕು, ಸಹಜವಾಗಿ ಇದು ಪ್ರತಿ ದೇವಾಲಯದಲ್ಲಿನ ಆಚರಣೆ ಮತ್ತು ಸಂಪ್ರದಾಯಕ್ಕೆ ಒಳಪಟ್ಟಿರುತ್ತದೆ" ಎಂದು ಅದು ಹೇಳಿತು. ಇದು ಮಕರವಿಳಕ್ಕು ಉತ್ಸವದಂತಹ ಆಚರಣೆಗಳಿಗೂ ಅನ್ವಯಿಸುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ.

ಘಟನೆ ಕುರಿತಂತೆ ದೇವಸ್ಥಾನದ ಅಧಿಕಾರಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ ಸ್ಥಾಯಿ ವಕೀಲರ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿತು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಂಡಳಿಗೆ ಸೂಚಿಸಿದ ನ್ಯಾಯಾಲಯ ಪ್ರಕರಣವನ್ನು ವಿಲೇವಾರಿ ಮಾಡಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Suo_Motu_v_State_of_Kerala___Ors.pdf
Preview

Related Stories

No stories found.
Kannada Bar & Bench
kannada.barandbench.com