ಮಹಿಳಾ ಪೊಲೀಸ್ ಅಧಿಕಾರಿಯಿಂದ ಕಳ್ಳತನದ ಸುಳ್ಳು ಆರೋಪ: ಬಾಲಕಿಗೆ ಪರಿಹಾರ ನೀಡಲು ಸರ್ಕಾರಕ್ಕೆ ಆದೇಶಿಸಿದ ಕೇರಳ ಹೈಕೋರ್ಟ್

3 ಮಕ್ಕಳ ತಾಯಿ ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ಪೊಲೀಸ್ ಅಧಿಕಾರಿಯನ್ನು ಕೆಲಸದಿಂದ ತೆಗೆದುಹಾಕಲು ನ್ಯಾಯಾಲಯ ನಿರಾಕರಿಸಿತು.
ಮಹಿಳಾ ಪೊಲೀಸ್ ಅಧಿಕಾರಿಯಿಂದ ಕಳ್ಳತನದ ಸುಳ್ಳು ಆರೋಪ: ಬಾಲಕಿಗೆ ಪರಿಹಾರ ನೀಡಲು ಸರ್ಕಾರಕ್ಕೆ ಆದೇಶಿಸಿದ ಕೇರಳ ಹೈಕೋರ್ಟ್

ಮೊಬೈಲ್‌ ಕದ್ದಿರುವುದಾಗಿ ದೂಷಿಸಿ ತನ್ನನ್ನು ಸಾರ್ವಜನಿಕವಾಗಿ ಅವಮಾನಿಸಲಾಗಿದೆ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದ ದೇವಿಪ್ರಿಯಾ ಎಂಬ ಎಂಟು ವರ್ಷದ ದಲಿತ ಬಾಲಕಿಗೆ ₹ 1.5 ಲಕ್ಷ ಪರಿಹಾರ ನೀಡುವಂತೆ ಕೇರಳ ಹೈಕೋರ್ಟ್‌ ಬುಧವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಒಂದು ತಿಂಗಳೊಳಗೆ ಬಾಲಕಿಗೆ ₹ 25,000 ಪರಿಹಾರ ಧನ ನೀಡಬೇಕು ಎಂದು ನ್ಯಾ. ದೇವನ್ ರಾಮಚಂದ್ರನ್ ಅವರಿದ್ದ ಏಕಸದಸ್ಯ ಪೀಠ ಆದೇಶಿಸಿತು. ಇದೇ ವೇಳೆ ತಪ್ಪೆಸಗಿದ ಪೊಲೀಸ್‌ ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ಆರಂಭಿಸುವಂತೆ ನ್ಯಾಯಾಲಯ ಸೂಚಿಸಿತಾದರೂ 3 ಮಕ್ಕಳ ತಾಯಿ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ರೆಜಿತಾ ಹೆಸರಿನ ಪೊಲೀಸ್‌ ಅಧಿಕಾರಿಯನ್ನು ಕೆಲಸದಿಂದ ತೆಗೆದುಹಾಕಲು ನಿರಾಕರಿಸಿತು.

ಎಂದಿನಂತೆ, ಆಕೆಯನ್ನು (ಅಧಿಕಾರಿಯನ್ನು) ಉದ್ಯೋಗದಿಂದ ತೆಗೆದುಹಾಕಲು ಯಾವುದೇ ನಿರ್ದೇಶನ ನೀಡಲಾಗದು, ಅರ್ಜಿದಾರೆಯ ಪಾಲಿಗೆ (ಬಾಲಕಿಗೆ) ಮುಯ್ಯಿಗೆ ಮುಯ್ಯಿ ಎಂಬ ತತ್ವ ಮುಖ್ಯವಾಗದೆ ದುರದೃಷ್ಟದಿಂದ ತಾನು ಅನುಭವಿಸಿದ ಆಘಾತಕ್ಕೆ ಅಂತ್ಯ ಹಾಡುವುದು ಮುಖ್ಯವಾಗಬೇಕಿದೆ. ಪೋಲೀಸ್ ಅಧಿಕಾರಿ ದಾಖಲೆಯಲ್ಲಿ ಸಲ್ಲಿಸಿರುವ ಕ್ಷಮೆಯಾಚನೆ ಖಂಡಿತವಾಗಿ ಈ ನಿಟ್ಟಿನಲ್ಲಿ ಸಾಗುತ್ತದಾದರೂ ಅರ್ಜಿದಾರೆ ಮತ್ತು ಆಕೆಯ ತಂದೆ ಅದನ್ನು ಸ್ವೀಕರಿಸದಿರಲು ನಿರ್ಧರಿಸಿದ್ದಾರೆ. ಅವರ ಕಾನೂನು ಪರಿಹಾರ ಪಡೆಯಲು ನಿರ್ಧರಿಸಿದ್ದಾರೆ ಎಂದು ತಿಳಿದಿದೆ" ಎಂಬುದಾಗಿ ನ್ಯಾಯಾಲಯ ಹೇಳಿದೆ.

ಪೊಲೀಸ್ ಅಧಿಕಾರಿ ಕೇವಲ ಜವಾಬ್ದಾರಿಯುತವಾಗಿ ಮತ್ತು ಸಹಾನುಭೂತಿಯಿಂದ ವರ್ತಿಸಿದ್ದರೂ, ಇಡೀ ಪರಿಸ್ಥಿತಿಯನ್ನು ತಪ್ಪಿಸಬಹುದಿತ್ತು ಎಂದು ನ್ಯಾಯಮೂರ್ತಿ ರಾಮಚಂದ್ರನ್ ಇದೇ ವೇಳೆ ತಿಳಿಸಿದರು. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲೆ ಎ ಕೆ ಪ್ರೀತಾ ಅವರು ಸಾಂವಿಧಾನಿಕ ದೌರ್ಜನ್ಯಗಳ ಅಡಿಯಲ್ಲಿ ವಿತ್ತೀಯ ಪರಿಹಾರಕ್ಕಾಗಿ ಒತ್ತಾಯಿಸಿದ್ದರು. ಆದರೆ ಈ ಹಿಂದಿನ ವಿಚಾರಣೆ ವೇಳೆ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ ನಾರಾಯಣನ್ ಅವರು “ವಾಸ್ತವಾಂಶಗಳು ವಿವಾದಾಸ್ಪದವಾಗಿದ್ದಾಗ ಮಾತ್ರ ಸಾರ್ವಜನಿಕ ಕಾನೂನು ಪರಿಹಾರ ಪಡೆಯಬಹುದಾಗಿದ್ದು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯನ್ನು ನಿರಾಕರಿಸಲಾಗದು. ಈ ಸಂದರ್ಭದಲ್ಲಿ ಹಾಗಾಗಿಲ್ಲ” ಎಂದು ವಾದಿಸಿದ್ದರು.

ಪೊಲೀಸ್‌ ಅಧಿಕಾರಿ ಸ್ಪಷ್ಟವಾಗಿ ಕ್ಷಮೆ ಕೇಳುವ ಅಫಿಡವಿಟ್‌ ಸಲ್ಲಿಸಿದ್ದರೂ ಪರಿಹಾರ ಕೋರಲಾಗುತ್ತಿದೆ ಎಂದು ಸರ್ಕಾರ ಆಕ್ಷೇಪಿಸಿದಾಗ ನ್ಯಾಯಾಲಯ ಕೂಡ ಆಕ್ರೋಶ ವ್ಯಕ್ತಪಡಿಸಿತು. ₹ 50 ಲಕ್ಷ ಮೊತ್ತವನ್ನು ಪರಿಹಾರ ರೂಪದಲ್ಲಿ ಕೋರಿದ್ದನ್ನು ಗಮನಿಸಿದ ನ್ಯಾಯಾಲಯ ಈ ಸನ್ನಿವೇಶಕ್ಕೆ ಅಲ್ಪ ಮೊತ್ತದ ಪರಿಹಾರ ಒದಗಿಸುವುದು ಸೂಕ್ತ ಎನಿಸುತ್ತದೆ ಎಂದು ತೀರ್ಮಾನಿಸಿತು. ಜೊತೆಗೆ ಸಿವಿಲ್‌ ಕಾನೂನು ಪರಿಹಾರದ ಮೂಲಕ ದೊಡ್ಡ ಮೊತ್ತದ ಪರಿಹಾರವನ್ನು ಪಡೆಯಬಹುದೆಂದೂ ಸಲಹೆ ನೀಡಿ ಅರ್ಜಿದಾರರ ಎಲ್ಲಾ ವ್ಯಾಜ್ಯಗಳನ್ನು ಮುಕ್ತಾಯಗೊಳಿಸಿತು.

ಫೋನ್‌ ಕದ್ದಿರಲಿಲ್ಲ ಬಾಲಕಿ!

ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಬೃಹತ್ ಕಾರ್ಗೋ ಟ್ರಕ್ ಒಂದು ಉಪಕರಣಗಳನ್ನು ಸಾಗಿಸುತ್ತಿತ್ತು. ಇದನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರಿಂದ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಇದೇ ವೇಳೆ ತಂದೆ ಮತ್ತು ಮಗಳ ಬಳಿ ಓಡಿದ ಪೊಲೀಸ್‌ ಅಧಿಕಾರಿ ರೆಜಿತಾ ಅವರು ತನ್ನ ಮೊಬೈಲ್‌ ಫೋನನ್ನು ಕದ್ದಿರುವುದಾಗಿ ಆರೋಪಿಸಿದರು. ಆಗ ಜನ ಸುತ್ತಲೂ ಸೇರಿದರು. -

ಅರ್ಜಿದಾರರ ಪ್ರಕಾರ ಪೊಲೀಸ್ ಅಧಿಕಾರಿ ಅವಹೇಳನಕಾರಿ ಪದ ಬಳಸಿದ್ದು ಬೆದರಿಕೆ ಹಾಕಿದ್ದರಿಂದ ಹುಡುಗಿ ಆಘಾತಕ್ಕೆ ಒಳಗಾದಳು. ಆದರೆ ಅಧಿಕಾರಿಯ ಫೋನ್‌ ಆಕೆ ಇದ್ದ ವಾಹನದಲ್ಲಿ ಪತ್ತೆಯಾಯಿತು. ಇಡೀ ಘಟನೆಯನ್ನು ನೋಡುಗರು ಚಿತ್ರೀಕರಿಸಿದ್ದು ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್‌ ಆಗಿತ್ತು. ನೊಂಡ ಹುಡುಗಿಗೆ ಮುಂದೆ ಆಪ್ತಸಮಾಲೋಚನೆ ಅಗತ್ಯವೂ ಬೇಕಾಯಿತು.

ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಾಲಕಿಯ ತಂದೆ ರಾಜ್ಯ ಪೊಲೀಸ್ ಮುಖ್ಯಸ್ಥರನ್ನು ಸಂಪರ್ಕಿಸಿದರೂ ಪ್ರಯೋಜನವಾಗದ ಪರಿಣಾಮ ಅವರು ತ್ವರಿತ ವಿಚಾರಣೆ ಕೋರಿ ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Related Stories

No stories found.
Kannada Bar & Bench
kannada.barandbench.com