ತನ್ನ ಅರೆನಗ್ನ ದೇಹದ ಮೇಲೆ ಮಕ್ಕಳಿಂದ ಚಿತ್ರರಚನೆ: ಹೋರಾಟಗಾರ್ತಿ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಕೇರಳ ಹೈಕೋರ್ಟ್

ತಮ್ಮ ದೇಹ ಮತ್ತು ಬದುಕಿನ ಬಗ್ಗೆ ಆಯ್ಕೆ ಮಾಡಿಕೊಳ್ಳುವ ಮಹಿಳೆಯರು ಹೆಚ್ಚು ದಬ್ಬಾಳಿಕೆ ಮತ್ತು ತಾರತಮ್ಯಕ್ಕೆ ತುತ್ತಾಗುವ ಬಗ್ಗೆ ವಿಷಾದಿಸಿದ ನ್ಯಾಯಾಲಯ.
Kerala High Court
Kerala High Court

ತನ್ನ ಅರೆ ನಗ್ನದೇಹದ ಮೇಲೆ ಹೆತ್ತ ಮಕ್ಕಳು ಚಿತ್ರ ಬಿಡಿಸುತ್ತಿರುವ ವೀಡಿಯೊ ಪ್ರಸಾರ ಮಾಡಿದ್ದ ಸಾಮಾಜಿಕ ಕಾರ್ಯಕರ್ತೆಯೊಬ್ಬರ ವಿರುದ್ಧ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಡಿ ದಾಖಲಿಸಿದ್ದ ಪ್ರಕರಣವನ್ನು ಕೇರಳ ಹೈಕೋರ್ಟ್‌ ಸೋಮವಾರ ರದ್ದುಗೊಳಿಸಿದೆ [ಎಕ್ಸ್‌ಎಕ್ಸ್‌ಎಕ್ಸ್‌ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

ತನ್ನ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳಾದ 14 ವರ್ಷದ ಬಾಲಕ ಮತ್ತು 8 ವರ್ಷದ ಬಾಲಕಿ ತನ್ನ ಅರೆ-ನಗ್ನ ದೇಹದ ಮೇಲೆ ಚಿತ್ರ ಬಿಡಿಸುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ 33 ವರ್ಷದ ಕೇರಳ ಮೂಲದ ಸಾಮಾಜಿಕ ಹೋರಾಟಗಾರ್ತಿ ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ನಗ್ನತೆ ಮತ್ತು ಅಶ್ಲೀಲತೆ ಸದಾ ಸಮಾನಾರ್ಥಕವಲ್ಲ. ಅರ್ಜಿದಾರರ ವಿರುದ್ಧ ಅಪರಾಧ ನಡೆದಿದೆ ಎನ್ನಲು ಆಕೆಗೆ ಲೈಂಗಿಕ ಉದ್ದೇಶ ಇತ್ತು ಎಂಬುದು ಅಗತ್ಯ ಅಂಶವಾಗುತ್ತದೆ ಎಂದು ನ್ಯಾ. ಕೌಸರ್ ಎಡಪ್ಪಗತ್ ತೀರ್ಪು ನೀಡಿದ್ದಾರೆ.

Kerala High Court with Justice Kauser Edappagath
Kerala High Court with Justice Kauser Edappagath

ತೆರೆದ ನ್ಯಾಯಾಲಯದಲ್ಲಿ ವೀಡಿಯೊ ವೀಕ್ಷಿಸಿದ ಪೀಠ, ಅರ್ಜಿದಾರೆ ತಮ್ಮ ವೀಡಿಯೊದ ಕೆಳಭಾಗದಲ್ಲಿ ವಿವರವಾದ ಸಂದೇಶ ನೀಡಿರುವುದನ್ನು ಗಮನಿಸಿತು. ಲೈಂಗಿಕವಾಗಿ ಹತಾಶೆಗೊಂಡ, ನಿಯಂತ್ರಿಸಲು ಬಯಸುವ ಸಮಾಜಕ್ಕೆ ಪ್ರತಿಕ್ರಿಯೆಯಾಗಿ ಬೆತ್ತಲೆ ದೇಹವನ್ನು ನೀಡಲಾಗಿದೆ ಎಂದು ಆಕೆ ತಿಳಿಸಿದ್ದಾರೆ. ತನ್ನ ತಾಯಿಯ ನಗ್ನತೆಯನ್ನು ನೋಡಿ ಬೆಳೆದ ಯಾವುದೇ ಮಗು ಮತ್ತೊಂದು ಸ್ತ್ರೀ ದೇಹವನ್ನು ನಿಂದಿಸದು ಎಂದು ಕೂಡ ವೀಡಿಯೊದ ಒಕ್ಕಣೆ ತಿಳಿಸಿದೆ.

ಪುರುಷ ಪ್ರಧಾನ ವ್ಯವಸ್ಥೆ ಮತ್ತು ಸಮಾಜದಲ್ಲಿ ಮಹಿಳೆಯನ್ನು ಅತಿಯಾಗಿ ಲೈಂಗಿಕವಾಗಿ ಬಿಂಬಿಸಿರುವುದರ ವಿರುದ್ಧ ಹೋರಾಡಿರುವ ಸುದೀರ್ಘ ಇತಿಹಾಸ ಅರ್ಜಿದಾರರಿಗೆ ಇದೆ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿತು. ಆಕೆ 2014ರಲ್ಲಿ 'ಕಿಸ್ ಆಫ್ ಲವ್' ಆಂದೋಲನದ ಭಾಗವಾಗಿದ್ದರು. ಇದು ʼಅನೈತಿಕʼ ಪೊಲೀಸ್‌ಗಿರಿ ವಿರುದ್ಧ ಕೊಚ್ಚಿಯಲ್ಲಿ ನಡೆದ ಚಳವಳಿಯಾಗಿತ್ತು. (ಅಲ್ಲದೆ ಆಕೆ ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಹೋರಾಟ ನಡೆಸಿದ್ದರು.)  

ಮಕ್ಕಳ ಹೇಳಿಕೆಗಳು ಮತ್ತು ಕಾರ್ಯಕತೆಗೆ ಇರುವ ಸುದೀರ್ಘ ಹೋರಾಟದ ಇತಿಹಾಸದ ಮೂಸೆಯಲ್ಲಿ ವೀಡಿಯೊವನ್ನು ವಿಶ್ಲೇಷಿಸಿದ ನ್ಯಾಯಾಲಯ, ಅರ್ಜಿದಾರರು ಲೈಂಗಿಕ ಉದ್ದೇಶದಿಂದ ಕೃತ್ಯ ನಡೆಸಿದ್ದಾರೆ ಎನ್ನುವುದನ್ನು ಮೇಲ್ನೋಟಕ್ಕೆ ಸೂಚಿಸುವಂತಹ ದಾಖಲೆ ಇಲ್ಲ ಎಂದು ತೀರ್ಪು ನೀಡಿತು.

ಅರ್ಜಿದಾರರ ವಿರುದ್ಧ ಆರೋಪಿಸಿದ ಯಾವುದೇ ಅಪರಾಧಗಳು ಆಕೆಯ ವಿರುದ್ಧ ಇಲ್ಲ ಎಂದು ಕಂಡುಕೊಂಡ ನ್ಯಾಯಾಲಯ ವಿಚಾರಣಾ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಿ ಅರ್ಜಿದಾರರನ್ನು ಆರೋಪಮುಕ್ತಗೊಳಿಸಿತು.  

ಅರ್ಜಿದಾರರ ಪರವಾಗಿ ನ್ಯಾಯವಾದಿ ರೆಂಜಿತ್ ಬಿ ಮಾರಾರ್ ವಾದ ಮಂಡಿಸಿದ್ದರು. ಸರ್ಕಾರವನ್ನು ಹಿರಿಯ ಸರಕಾರಿ ಅಭಿಯೋಜಕಿ ಟಿ.ವಿ.ನೀಮಾ ಪ್ರತಿನಿಧಿಸಿದ್ದರು.

ನ್ಯಾಯಾಲಯದ ಪ್ರಮುಖ ಅವಲೋಕನಗಳು

 • ಪುರುಷರ ಅರೆನಗ್ನ ದೇಹವನ್ನು ಸಹಜ ಎನ್ನಲಾಗಿದೆ ಆದರೆ ಹೆಣ್ಣಿನ ದೇಹವನ್ನು ಅತಿಯಾಗಿ ಲೈಂಗಿಕವಾಗಿಸಲಾಗಿದೆ.

 • ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಜೀವನದ ಬಗ್ಗೆ ಎಲ್ಲವನ್ನೂ ಕಲಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ. ಪ್ರತಿಯೊಬ್ಬ ಪೋಷಕರಿಗೆ ತಮ್ಮ ಮಕ್ಕಳನ್ನು ಅವರು ಬಯಸಿದ ರೀತಿಯಲ್ಲಿ ಬೆಳೆಸುವ ಹಕ್ಕಿದೆ.

 • ಯಾವುದೇ ಕ್ರಿಯೆ ಸರಿ ಅಥವಾ ತಪ್ಪು ಎಂದು ಅಂತರ್ಗತವಾಗಿ ಭಾವಿಸುವ ರೀತಿಯಲ್ಲಿ ಮಕ್ಕಳು ಬೆಳೆಯುವುದಿಲ್ಲ, ಆದರೆ ಅವರನ್ನು ಹಾಗೆ ನಂಬಿಸಲಾಗುತ್ತದೆ.

 • ನಗ್ನ ದೇಹಗಳನ್ನು ಸಾಮಾನ್ಯ ಎಂದು ನೋಡುವ ಮತ್ತು ಅದು ಕೇವಲ ಲೈಂಗಿಕ ವಸ್ತುವಲ್ಲ ಎಂಬ ಆಲೋಚನೆಗೆ ಸಂವೇದನಾಶೀಲರಾಗಲು ತಾಯಿ ತನ್ನ ದೇಹವನ್ನು ಕ್ಯಾನ್‌ವಾಸ್‌ ರೀತಿ ಬಳಸಲು ಅನುಮತಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಇದನ್ನು ಲೈಂಗಿಕ ಉದ್ದೇಶದಿಂದ ಮಾಡಲಾಗಿದೆ ಎನ್ನಲಾಗದು.

 • ನಗ್ನತೆಯನ್ನು ತನ್ನಿಂತಾನೇ ಅಶ್ಲೀಲತೆಯೊಂದಿಗೆ ತಳಕು ಹಾಕಬಾರದು. ಬದಲಿಗೆ ಸಂದರ್ಭಾನುಸಾರ ನೋಡಬೇಕಾಗುತ್ತದೆ.

 • ದೇಗುಲ ಅಥವಾ ಇತರೆ ಸಾರ್ವಜನಿಕ ಸ್ಥಳಗಳಲ್ಲಿನ ನಗ್ನ ಸ್ತ್ರೀ ಶಿಲ್ಪಗಳನ್ನು ಕಲೆ ಅಥವಾ ಪವಿತ್ರವೆಂದು ಪರಿಗಣಿಸಲಾಗುತ್ತದೆ.

 • ಬ್ರಿಟಿಷರ ಯುಗದಲ್ಲಿ ತಾರತಮ್ಯದಿಂದ ಕೂಡಿದ ಸ್ತನ ತೆರಿಗೆ ಅಥವಾ ಮೊಲಕ್ಕರಂ ವಿರುದ್ಧ ಕೇರಳದ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ನಂಗೇಲಿ ಎಂಬ ಮಹಿಳೆ ಪ್ರತಿಭಟನೆಯ ರೂಪದಲ್ಲಿ ತನ್ನ ಸ್ತನಗಳನ್ನೇ ಕತ್ತರಿಸಿ ನೀಡಿದ್ದ ಇತಿಹಾಸವನ್ನು ನೆನೆದ ನ್ಯಾಯಾಲಯ.

 • ಆಕ್ಷೇಪಾರ್ಹ ವೀಡಿಯೊವನ್ನು ನೈಜ ಇಲ್ಲವೇ ಸಿಮ್ಯುಲೇಟೆಡ್‌ (ತಂತ್ರಜ್ಞಾನ ಬಳಸಿ ಅಣಕ ಮಾಡಲಾದ) ಲೈಂಗಿಕ ಕ್ರಿಯೆ ಎಂದು ವಿಭಾಗಿಸಲು ಸಾಧ್ಯವಿಲ್ಲ ಅಥವಾ ಲೈಂಗಿಕ ತೃಪ್ತಿಯ ಉದ್ದೇಶಕ್ಕಾಗಿ ಹೀಗೆ ಮಾಡಲಾಗಿದೆ ಎನ್ನಲು ಸಾಧ್ಯವಿಲ್ಲ.

 • ತನ್ನ ದೇಹದ ಬಗ್ಗೆ ಸ್ವಾಯತ್ತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಹಿಳೆಯ ಹಕ್ಕು ಸಮಾನತೆ ಮತ್ತು ಮೂಲಭೂತ ಹಕ್ಕಿನ ಅತ್ಯಂತ ಪ್ರಮುಖ ತಿರುಳಾಗಿದೆ.  

 • ತಮ್ಮ ದೇಹ ಮತ್ತು ಬದುಕಿನ ಬಗ್ಗೆ ಆಯ್ಕೆ ಮಾಡಿಕೊಳ್ಳುವ ಮಹಿಳೆಯರು ಹೆಚ್ಚು ದಬ್ಬಾಳಿಕೆ ಮತ್ತು ತಾರತಮ್ಯಕ್ಕೆ ತುತ್ತಾಗುವ ಬಗ್ಗೆ ನ್ಯಾಯಾಲಯ ವಿಷಾದಿಸಿತು.

 •  ದೈಹಿಕ ಸ್ವಾಯತ್ತತೆ ಮತ್ತು ಲಿಂಗ ಸಮಾನತೆಯನ್ನು ಪ್ರತಿನಿಧಿಸಲು 70ರ ದಶಕದ ಆರಂಭದಲ್ಲಿ 'ಮೈ ಬಾಡಿ, ಮೈ ಚಾಯ್ಸ್'  ಹೆಸರಿನಲ್ಲಿ ನಡೆದ ಚಳವಳಿ ಮಹಿಳೆಯರಿಗೆ ಬೇಕಾದ ಹಕ್ಕುಗಳ ಅಭಿವ್ಯಕ್ತಿಯಾಗಿ ಮುಂದುವರೆದಿದೆ ಮತ್ತು ಕಾಮುಕತೆಯ ಸಾಮಾಜಿಕ ಕಲ್ಪನೆಗಳು ಹಾಗೂ ಪುರಾತನ ಪುರುಷ ಪ್ರಧಾನತೆಗೆ ಪ್ರಬಲ ಪ್ರತೀಕಾರವಾಗಿ ಜಗತ್ತಿನಾದ್ಯಂತ ಈಗಲೂ ಮಹಿಳಾ ಹಕ್ಕುಗಳ ಕಾರ್ಯಕರ್ತರು ನಿರಂತರವಾಗಿ ಆ ಚಳವಳಿಯ ಅಭಿವ್ಯಕ್ತಿಯನ್ನು ಬಳಸುತ್ತಿದ್ದಾರೆ.

 • ಅಪರಾಧವನ್ನು ಸಾಬೀತುಪಡಿಸುವುದಕ್ಕೆ ಮತ್ತು ವ್ಯಕ್ತಿಯನ್ನು ವಿಚಾರಣೆ ನಡೆಸುವುದಕ್ಕೆ ಸಮಾಜದ ನೈತಿಕತೆ , ಕೆಲ ಮಂದಿಯ ಭಾವನೆಗಳು ಕಾರಣವಾಗಬಾರದು.

 • ಪ್ರತಿಯೊಬ್ಬ ವ್ಯಕ್ತಿಯು ಅವನ/ಅವಳ ದೇಹದ ಸ್ವಾಯತ್ತತೆಗೆ ಅರ್ಹನಾಗಿರುತ್ತಾನೆ - ಇದು ಲಿಂಗಕ್ಕೆ ಸಂಬಂಧಿಸಿದ ಆಯ್ಕೆಯಲ್ಲ. ಆದರೆ ಈ ಹಕ್ಕನ್ನು ನ್ಯಾಯಸಮ್ಮತ ಲೈಂಗಿಕತೆ ಎಂದು ದುರ್ಬಲಗೊಳಿಸಿರುವುದನ್ನು ಅಥವಾ ತಿರಸ್ಕರಿಸಿರುವುದನ್ನು ನಾವು ಸಾಮಾನ್ಯವಾಗಿ ಕಾಣಬಹುದು.

 • ಸೌಂದರ್ಯ ನೋಡುಗರ ಕಣ್ಣಲ್ಲಿರುವಂತೆ ಅಶ್ಲೀಲತೆಯೂ ನೋಡುಗರ ಕಣ್ಣಿನಲ್ಲಿರುತ್ತದೆ.

 • ಪುರುಷ ದೇಹದ ಸ್ವಾಯತ್ತತೆ ಪ್ರಶ್ನೆಗೀಡಾಗಿರುವುದು ವಿರಳ. ಆದರೆ ದೈಹಿಕ ಪ್ರಾತಿನಿಧ್ಯ ಮತ್ತು ಮಹಿಳಾ ಸ್ವಾಯತ್ತತೆ ಎಂಬುದು ಪುರುಷಪ್ರಧಾನ ವ್ಯವಸ್ಥೆಯಲ್ಲಿ ನಿರಂತರ ಬೆದರಿಕೆಗೆ ಒಳಗಾಗಿದೆ. ತಮ್ಮ ದೇಹ ಮತ್ತು ಬದುಕನ್ನು ಆಯ್ಕೆ ಮಾಡಿಕೊಂಡ ಮಹಿಳೆಯರನ್ನು ಬೆದರಿಸಲಾಗಿದೆ, ತಾರತಮ್ಯಕ್ಕೆ ಒಳಪಡಿಸಲಾಗಿದೆ, ಒಂಟಿಗೊಳಿಸಲಾಗಿದೆ ಮತ್ತು ವಿಚಾರಣೆಗೊಳಪಡಿಸಲಾಗಿದೆ.  

 • ಕೇರಳದ  ಪುಲಿಕಲಿ ಉತ್ಸವ, ʼತೆಯ್ಯಂʼ ಆಚರಣೆಯಲ್ಲಿ ಪುರುಷರ ದೇಹದ ಮೇಲೆ ಚಿತ್ರಬಿಡಿಸುವ ಪರಿಪಾಠವಿದೆ. ಪುರುಷ ದೇಹವನ್ನು ಸಿಕ್ಸ್‌ಪ್ಯಾಕ್‌ ಆಬ್ಸ್, ಬೈಸೆಪ್ಸ್‌ನಂತಹ ರೂಪಗಳಲ್ಲಿ ಪ್ರದರ್ಶಿಸಲಾಗತ್ತದೆ. ಪುರುಷರು ಅಂಗಿ ತೊಡದೆ ತಿರುಗಾಡುತ್ತಾರೆ. ಆದರೆ ಇಂತಹ ಕೃತ್ಯವನ್ನು ಎಂದಿಗೂ ಅಶ್ಲೀಲ ಅಥವಾ ಅಸಭ್ಯ ಎಂದು ಪರಿಗಣಿಸುವುದಿಲ್ಲ.

 • ಬೆತ್ತಲೆ ಪುರುಷ ದೇಹವನ್ನು ಹೆಣ್ಣಿನ ದೇಹಕ್ಕಿಂತ ಭಿನ್ನವಾದ ಮಾನದಂಡದಿಂದ ನೋಡಲಾಗುತ್ತದೆ. ಮಹಿಳೆಯರ ದೇಹವನ್ನು ಸ್ವಾಭಾವಿಕವಾಗಿ ಅಶ್ಲೀಲವೆಂದು ಪರಿಗಣಿಸುವ ಜನ ಹೀಗೆ ಮಾಡುತ್ತಾರೆ. ಏಕೆಂದರೆ ಅವರು ಮಹಿಳೆಯರ ದೇಹವನ್ನು ಕೇವಲ ಅಭೀಪ್ಸೆಯ ವಸ್ತುವಾಗಿ ನೋಡುತ್ತಾರೆ.

 • ನೈತಿಕತೆಯ  ಬಗ್ಗೆ ಒಬ್ಬರಿಗೆ ಇರುವ ಗ್ರಹಿಕೆಯನ್ನು ಏನೇ ಇದ್ದರೂ ಯಾವುದು ನೈತಿಕತೆ, ಯಾವುದು ಕಾನೂನು ಎಂಬುದು ಸದಾ ತಳಕು ಹಾಕಿಕೊಳ್ಳುವ ಅಗತ್ಯವಿಲ್ಲ ಅಗತ್ಯವಿಲ್ಲ.

 •  … ಅರ್ಜಿದಾರರು ಪ್ರಸಾರ ಮಾಡಿದ ವೀಡಿಯೊ ಅಶ್ಲೀಲ ಅಥವಾ ಅಸಭ್ಯವಲ್ಲ. ಅರ್ಜಿದಾರರು ಸ್ತ್ರೀ ಬೆತ್ತಲೆ ದೇಹದ ಬಗ್ಗೆ ಇರುವ ಪೂರ್ವ ನಿಯೋಜಿತ ಕಾಮುಕತೆಯ ಬಗೆಗಿನ ತಮ್ಮ ಅಭಿಪ್ರಾಯಗಳನ್ನು ಪ್ರಚಾರ ಮಾಡಿದ್ದಾರೆ.

Related Stories

No stories found.
Kannada Bar & Bench
kannada.barandbench.com