ಎಸ್ಐಆರ್ ಮುಂದೂಡಿಕೆ ಕೋರಿದ್ದ ಕೇರಳ ಸರ್ಕಾರದ ಮನವಿ ತಿರಸ್ಕರಿಸಿದ ಹೈಕೋರ್ಟ್: ಸುಪ್ರೀಂಗೆ ಅರ್ಜಿ ಸಲ್ಲಿಸಲು ಸಲಹೆ

ಎಸ್ಐಆರ್‌ಗೆ ಸಂಬಂಧಿಸಿದಂತೆ ಬೇರೆ ರಾಜ್ಯಗಳ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ನ್ಯಾಯಾಂಗ ಶಿಷ್ಟತೆಯಂತೆ ಹೈಕೋರ್ಟ್ ಈ ಅರ್ಜಿ ಪರಿಗಣಿಸಲಾಗದು ಎಂದು ನ್ಯಾಯಮೂರ್ತಿ ವಿ ಜಿ ಅರುಣ್ ಹೇಳಿದರು.
election commission and Kerala High court
election commission and Kerala High court
Published on

ಕೇರಳದಲ್ಲಿ ಭಾರತೀಯ ಚುನಾವಣಾ ಆಯೋಗ ಕೈಗೊಳ್ಳಲು ಹೊರಟಿರುವ ಮತದಾರರ ಪಟ್ಟಿಯ ವಿಶೇಷ ಆಮೂಲಾಗ್ರ ಪರಿಷ್ಕರಣೆಯನ್ನು (ಎಸ್‌ಐಆರ್‌) ಮುಂದೂಡಬೇಕೆಂದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ [ಕೇರಳ ಸರ್ಕಾರದ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಭಾರತ ಚುನಾವಣಾ ಆಯೋಗ ನಡುವಣ ಪ್ರಕರಣ].

ಎಸ್‌ಐಆರ್‌ಗೆ ಸಂಬಂಧಿಸಿದಂತೆ ಬೇರೆ ರಾಜ್ಯಗಳ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ನ್ಯಾಯಾಂಗ ಶಿಷ್ಟತೆಯಂತೆ ಹೈಕೋರ್ಟ್ ಈ ಅರ್ಜಿ ಪರಿಗಣಿಸಲಾಗದು ಎಂದು ನ್ಯಾಯಮೂರ್ತಿ ವಿ ಜಿ ಅರುಣ್ ಹೇಳಿದರು. ಅಂತೆಯೇ ಸರ್ಕಾರ ಸುಪ್ರೀಂ ಕೋರ್ಟ್‌ ಸಂಪರ್ಕಿಸಲು ನ್ಯಾಯಾಲಯ ಅವಕಾಶ ನೀಡಿತು.

Also Read
ಎಸ್‌ಐಆರ್‌ ಜಗತ್ತಿನ ಇತಿಹಾಸದಲ್ಲಿಯೇ ಅತಿ ದೊಡ್ಡ ಮತದಾನದ ನಿರಾಕರಣೆ: ಸುಪ್ರೀಂನಲ್ಲಿ ಯೋಗೇಂದ್ರ ಯಾದವ್‌ ವಿಶ್ಲೇಷಣೆ

ರಾಜ್ಯದಲ್ಲಿ ಪಂಚಾಯತ್‌ ಚುನಾವಣೆ ಸಮೀಪಿಸುತ್ತಿರುವುದರಿಂದ ಎಸ್‌ಐಆರ್‌ ನಡೆಸಲು ಹೆಚ್ಚುವರಿ ಮಾನವ ಸಂಪನ್ಮೂಲ ಇಲ್ಲ. ವಿಧಾನಸಭೆ ಚುನಾವಣೆ 2026ರಲ್ಲಿ ನಡೆಯುವುದರಿಂದ ಎಸ್‌ಐಆರ್‌ ಅನ್ನು ಆಗ ಮಾಡಬಹುದು ಎಂದು ಸರ್ಕಾರ ಬಿನ್ನವಿಸಿತು.

ಕೇರಳ ಸರ್ಕಾರದ ಪರವಾಗಿ ಹಾಜರಾದ ಅಡ್ವೊಕೇಟ್ ಜನರಲ್ ಗೋಪಾಲಕೃಷ್ಣ ಕುರುಪ್ ಕೆ , ರಾಜ್ಯ ಸರ್ಕಾರ ಎಸ್‌ಐಆರ್ ನಡೆಸಲು ಅಡ್ಡಿಪಡಿಸುತ್ತಿಲ್ಲ ಬದಲಿಗೆ ಅದನ್ನು ಮುಂದೂಡಲು ಕೋರುತ್ತಿದೆ ಎಂದು ನ್ಯಾಯಾಲಯಕ್ಕೆಸ್ಪಷ್ಟಪಡಿಸಿದರು.

ಮುಂದಿನ ವರ್ಷ ಕೇರಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಸ್‌ಐಆರ್ ನಿಗದಿಪಡಿಸಲಾಗಿದೆ ಎಂದು ಇಸಿಐ ಪರವಾಗಿ ಹಾಜರಾದ ಹಿರಿಯ ವಕೀಲ ರಾಕೇಶ್ ದ್ವಿವೇದಿ ವಾದ ಮಂಡಿಸಿದರು.

ಆಡಳಿತಾತ್ಮಕ ಒತ್ತಡದ ಬಗ್ಗೆ ರಾಜ್ಯ ಸರ್ಕಾರದ ಆತಂಕಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಎಂದು ದ್ವಿವೇದಿ ಹೇಳಿದರು. ರಾಜ್ಯ ಚುನಾವಣಾ ಆಯೋಗ ಅಂತಹ ಯಾವುದೇ ಕಳವಳ ವ್ಯಕ್ತಪಡಿಸುತ್ತಿಲ್ಲ ಎಂದು ಅವರು ಗಮನಸೆಳೆದರು.

ಬಿಹಾರ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ.

Also Read
ಎಸ್ಐಆರ್‌ಗೆ ವಿರೋಧ: ಡಿಎಂಕೆ ಬಳಿಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪ. ಬಂಗಾಳ ಕಾಂಗ್ರೆಸ್

ಇಸಿಐ ಕಳೆದ ಜೂನ್‌ನಲ್ಲಿ ವಿಶೇಷ ಆಮೂಲಾಗ್ರ ಪರಿಷ್ಕರಣೆಗೆ ನಿರ್ದೇಶಿಸಿತ್ತು. ಆದೇಶ ಪ್ರಶ್ನಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ನ್ಯಾಷನಲ್ ಫೆಡರೇಶನ್ ಫಾರ್ ಇಂಡಿಯನ್ ವುಮೆನ್ ಸೇರಿದಂತೆ ಹಲವು ವ್ಯಕ್ತಿಗಳು ಸಂಘ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಎದುರು ನೋಡುತ್ತಿವೆ.

ಆದರೂ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡದ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಎಸ್‌ಐಆರ್‌ಗೆ ಚಾಲನೆ ದೊರೆತಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದ್ದರೂ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌ ನಡೆಸುವಂತೆ ಇಸಿಐ ಅಕ್ಟೋಬರ್ 27, 2025ರಂದು ಆದೇಶಿಸಿತ್ತು.

Kannada Bar & Bench
kannada.barandbench.com