ಸರ್ಕಾರಿ ಉದ್ಯೋಗಗಳಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ: ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿದ ಕೇರಳ ಹೈಕೋರ್ಟ್

ನಾಲ್ಸಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಸೂಕ್ತ ರೀತಿಯಲ್ಲಿ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಕೇಂದ್ರ ಸರ್ಕಾರವನ್ನು ಹೆಚ್ಚುವರಿ ಪ್ರತಿವಾದಿಯಾಗಿ ಸೇರ್ಪಡೆ ಮಾಡಿದೆ.
ತೃತೀಯ ಲಿಂಗಿಗಳ ಹೆಮ್ಮೆಯ ಧ್ವಜ ಮತ್ತು ಕೇರಳ ಹೈಕೋರ್ಟ್
ತೃತೀಯ ಲಿಂಗಿಗಳ ಹೆಮ್ಮೆಯ ಧ್ವಜ ಮತ್ತು ಕೇರಳ ಹೈಕೋರ್ಟ್

ಶಿಕ್ಷಣ ಮತ್ತು ಸಾರ್ವಜನಿಕ ಉದ್ಯೋಗದಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಬಗ್ಗೆ ಕೇರಳ ಹೈಕೋರ್ಟ್ ಬುಧವಾರ ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಕೇಳಿದೆ.

ನಾಲ್ಸಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಸೂಕ್ತ ರೀತಿಯಲ್ಲಿ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು, ಕೇಂದ್ರ ಸರ್ಕಾರವನ್ನು ಹೆಚ್ಚುವರಿ ಪ್ರತಿವಾದಿಯಾಗಿ ಸೇರ್ಪಡೆ ಮಾಡಿದ್ದಾರೆ.

"ಮಂಗಳಮುಖಿಯರು ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನೂ ಅಮೂಲ್ಯ. ಆ ಸಾಂವಿಧಾನಿಕ ಆಜ್ಞಾಪನೆಯನ್ನು ನಾನು ನಂಬುವೆ" ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ಹೇಳಿದರು.

ನ್ಯಾಯಮೂರ್ತಿ ದೇವನ್ ರಾಮಚಂದ್ರನ್
ನ್ಯಾಯಮೂರ್ತಿ ದೇವನ್ ರಾಮಚಂದ್ರನ್

ಕೇರಳ ಲೋಕಸೇವಾ ಆಯೋಗ (ಪಿಎಸ್‌ಸಿ) ಯಾವೊಬ್ಬ ತೃತೀಯ ಲಿಂಗಿ ವ್ಯಕ್ತಿಯನ್ನೂ ನೇಮಿಸಿಕೊಂಡಿಲ್ಲ ಅಥವಾ ಸಮುದಾಯಕ್ಕೆ ಯಾವುದೇ ಮೀಸಲಾತಿಯನ್ನೂ ಒದಗಿಸಿಲ್ಲ ಎಂದು ಅರ್ಜಿದಾರರ ಪರ ವಕೀಲರು ಮಾಹಿತಿ ನೀಡಿದರು ಆಗ ಸಂವಿಧಾನದ 141ನೇ ವಿಧಿಗೆ ನೀವು ಬದ್ಧರಾಗಿರಬೇಕಿದ್ದು, ಸುಪ್ರೀಂ ಕೋರ್ಟ್‌ ತೀರ್ಪನ್ನು ಏಕೆ ಪಾಲಿಸಿಲ್ಲ ಎಂದು ನ್ಯಾಯಾಲಯ ಪ್ರಶ್ನಿಸಿತು.

ಕೇರಳ ಪಿಎಸ್ಸಿ ಪರೀಕ್ಷೆಯನ್ನು ಬರೆಯುವ ಮೂಲಕ ಹಿರಿಯ ಪ್ರಾಥಮಿಕ ಶಾಲಾ ಸಹಾಯಕ ಶಿಕ್ಷಕ ಅಥವಾ ಅಥವಾ ಹೈಸ್ಕೂಲ್ ಶಿಕ್ಷಕ (ಸಮಾಜ ವಿಜ್ಞಾನ) ಹುದ್ದೆಯ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಯತ್ನಿಸಿದ ತೃತೀಯ ಲಿಂಗಿ (ಹುಟ್ಟಿನಿಂದ ಪುರುಷ, ಗುರುತಿನಿಂದ ಮಹಿಳೆ) ಅನೀರಾ ಕಬೀರ್ ಈ ಅರ್ಜಿಯನ್ನು ಸಲ್ಲಿಸಿದ್ದರು.

Related Stories

No stories found.
Kannada Bar & Bench
kannada.barandbench.com