ಹೇಮಾ ಸಮಿತಿ ವರದಿ: ಪ್ರಕರಣಗಳ ವಿಚಾರಣೆಗೆ ವಿಶೇಷ ಪೀಠ ಸ್ಥಾಪಿಸಿದ ಕೇರಳ ಹೈಕೋರ್ಟ್

ವಿಶೇಷ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ಸಿ ಎಸ್‌ ಸುಧಾ ಅವರು ವಿಚಾರಣೆ ನಡೆಸಿಲಿದ್ದಾರೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಅವರು ಮಾಹಿತಿ ನೀಡಿದ್ದಾರೆ.
Kerala High Court, Justice Hema Committee Report
Kerala High Court, Justice Hema Committee Report
Published on

ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ಕೆಲಸದ ಪರಿಸ್ಥಿತಿಗಳ ಕುರಿತು ನ್ಯಾಯಮೂರ್ತಿ ಕೆ ಹೇಮಾ ಸಮಿತಿ ನೀಡಿದ್ದ ವರದಿಯ ಪರಿಣಾಮವಾಗಿ ದಾಖಲಾಗುತ್ತಿರುವ ಪ್ರಕರಣಗಳನ್ನು ಆಲಿಸಲು ಕೇರಳ ಹೈಕೋರ್ಟ್‌ ವಿಶೇಷ ಪೀಠವೊಂದನ್ನು ಸ್ಥಾಪಿಸಲು ಮುಂದಾಗಿದೆ.

ಆಗಸ್ಟ್ 19 ರಂದು ಬಿಡುಗಡೆಯಾದ ವರದಿ ಚಿತ್ರೋದ್ಯಮದಲ್ಲಿ ವ್ಯಾಪಕವಾಗಿರುವ ಲೈಂಗಿಕ ದೌರ್ಜನ್ಯ ಮತ್ತು ʼಪಾತ್ರಕ್ಕಾಗಿ ಪಲ್ಲಂಗʼ ರೂಢಿಯಲ್ಲಿರುವುದನ್ನು ಬಹಿರಂಗಪಡಿಸಿತ್ತು.

Also Read
ಹೇಮಾ ಸಮಿತಿಯ ವರದಿ ಯಥಾವತ್‌ ಸಲ್ಲಿಸುವಂತೆ ಕೇರಳ ಸರ್ಕಾರಕ್ಕೆ ಕೇಂದ್ರ ಮಹಿಳಾ ಆಯೋಗ ಸೂಚನೆ

ಬಳಿಕ ಹಲವು ಮಹಿಳೆಯರು ಚಿತ್ರರಂಗದ ಪ್ರಮುಖ ವ್ಯಕ್ತಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಪರಿಣಾಮ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿರುವುದು ಹಾಗೂ ಜಾಮೀನು ಅರ್ಜಿಗಳನ್ನು ಸಲ್ಲಿಸಿರುವುದು ಜೊತೆಗೆ ಕ್ರಿಮಿನಲ್‌ ಕ್ರಮ ಕೈಗೊಳ್ಳುವಂತೆ ಕೋರಿ ಹಲವು ಅರ್ಜಿಗಳು ಸಲ್ಲಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ.

ಈ ಬಗೆಯ ಎಲ್ಲಾ ಪ್ರಕರಣಗಳ ವಿಚಾರಣೆಗಾಗಿ ಮಹಿಳಾ ನ್ಯಾಯಮೂರ್ತಿ ಇರುವ ವಿಶೇಷ ಪೀಠವನ್ನು ರಚಿಸಲಾಗಿದೆ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎ ಮುಹಮ್ಮದ್ ಮುಸ್ತಾಕ್ ಮತ್ತು ನ್ಯಾಯಮೂರ್ತಿ ಎಸ್ ಮನು ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

ವಿಶೇಷ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ಸಿ ಎಸ್ ಸುಧಾ ಅವರು ವಿಚಾರಣೆ ನಡೆಸಿಲಿದ್ದಾರೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಅವರು ಹೊರಡಿಸಿರುವ ನೋಟಿಸ್‌ನಲ್ಲಿ ಮಾಹಿತಿ ನೀಡಲಾಗಿದೆ.

ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಲು 'ವಿಮೆನ್ ಇನ್ ಸಿನಿಮಾ ಕಲೆಕ್ಟಿವ್' ಸಂಸ್ಥೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ 2017ರಲ್ಲಿ ಕೇರಳ ಸರ್ಕಾರ ನ್ಯಾ. ಹೇಮಾ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.

ಸಮಿತಿ ತನ್ನ ವರದಿಯನ್ನು 2019ರಲ್ಲಿ ಸರ್ಕಾರಕ್ಕೆ ಸಲ್ಲಿಸಿತ್ತು. ವೈಯಕ್ತಿಕ ಮಾಹಿತಿಯನ್ನು ತಿದ್ದುಪಡಿ ಮಾಡಿದ ನಂತರ ವರದಿಯ ಕೆಲ ಭಾಗಗಳನ್ನು ಪತ್ರಕರ್ತರು ಸೇರಿದಂತೆ ಸಾರ್ವಜನಿಕರಿಗೆ ಬಿಡುಗಡೆ ಮಾಡಲು ರಾಜ್ಯ ಮಾಹಿತಿ ಆಯೋಗ ಅವಕಾಶ ಮಾಡಿಕೊಟ್ಟಿತ್ತು.

ಮಾಹಿತಿ ಆಯೋಗದ ಈ ತೀರ್ಪನ್ನು ಎತ್ತಿ ಹಿಡಿದ ಏಕಸದಸ್ಯ ಆದೇಶದ ವಿರುದ್ಧ ಚಲನಚಿತ್ರ ನಿರ್ಮಾಪಕ ಸಜಿಮೋನ್ ಪರಾಯಿಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಇಂದು ವಿಚಾರಣೆ ನಡೆಸಿತು.

Also Read
ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಮತ್ತು ಅಸಮಾನತೆ: ಇಲ್ಲಿವೆ ನ್ಯಾ. ಹೇಮಾ ಸಮಿತಿ ವರದಿಯ ಪ್ರಮುಖ ಅಂಶಗಳು

ವಿಶೇಷ ಪೀಠಕ್ಕೆ ಸಲ್ಲಿಕೆಯಾಗಿರುವ ಒಂದು ಪಿಐಎಲ್‌ ಆರೋಪಿಗಳ ವಿರುದ್ಧ ಕ್ರಿಮಿನಲ್‌ ಕ್ರಮ ಕೈಗೊಳ್ಳಬೇಕು ಎಂದು ಕೋರಿದೆ. ಆರೋಪಗಳ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಮತ್ತೊಂದು ಪಿಐಎಲ್‌ ಕೂಡ ಇದೇ ಪೀಠಕ್ಕೆ ಸಲ್ಲಿಕೆಯಾಗುವ ಸಾಧ್ಯತೆ ಇದೆ.

ಅಲ್ಲದೆ ತಮ್ಮ ವಿರುದ್ಧ ದಾಖಲಾಗಿರುವ ಅತ್ಯಾಚಾರ ಅಥವಾ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ನಟ ಸಿದ್ದಿಕ್, ನಿರ್ದೇಶಕ  ವಿ ಕೆ ಪ್ರಕಾಶ್ ಮತ್ತಿತರರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಗಳನ್ನೂ  ವಿಶೇಷ ಪೀಠ ವಿಚಾರಣೆ ನಡೆಸಲಿದೆ.

Kannada Bar & Bench
kannada.barandbench.com