ಕೇರಳದ ಪೊಲೀಸರು ದಾಖಲಿಸಿರುವ ಅತ್ಯಾಚಾರ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರಿಗೆ ಕೇರಳ ಹೈಕೋರ್ಟ್ ಶನಿವಾರ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.
ಮಾಂಕೂಟತ್ತಿಲ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಕೆ. ಬಾಬು ಈ ಆದೇಶವನ್ನು ಹೊರಡಿಸಿದ್ದಾರೆ.
ಪ್ರಕರಣದ ಮುಂದಿನ ವಿಚಾರಣಾ ದಿನಾಂಕದವರೆಗೆ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ನ್ಯಾಯಾಲಯವು ಮಾಂಕೂಟತ್ತಿಲ್ ಅವರಿಗೆ ನೀಡಿತು.
ತಿರುವನಂತಪುರಂ ಸೆಷನ್ಸ್ ನ್ಯಾಯಾಲಯವು ಡಿಸೆಂಬರ್ 4 ರಂದು ಮಾಂಕೂಟತ್ತಿಲ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸಗುವ ಮೂಲಕ ಗರ್ಭಿಣಿಯಾಗಿಸಿ ನಂತರ ಬಲವಂತದ ಗರ್ಭಪಾತ ಮಾಡಿಸಿದ್ದಾರೆ ಎಂದು ಆರೋಪಿಸಿ ಮಾಂಕೂಟತ್ತಿಲ್ ಅವರ ವಿರುದ್ಧ ಸಂತ್ರಸ್ತ ಮಹಿಳೆ ಮತ್ತು ಆಕೆಯ ಕುಟುಂಬಸ್ಥರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನ.27ರಂದು ದೂರು ನೀಡಿದ್ದರು. ಇದನ್ನು ಆಧರಿಸಿ ಮಾಂಕೂಟತ್ತಿಲ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ತಮ್ಮ ಆತ್ಮೀಯ ಕ್ಷಣಗಳನ್ನು ವೀಡಿಯೊ ರೆಕಾರ್ಡ್ ಮಾಡುವ ಮೂಲಕ ಮಾಂಕೂಟತ್ತಿಲ್ ತನಗೆ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರೆ ಆರೋಪಿಸಿದ್ದರು.
ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳಡಿ ಮಾಂಕೂಟತ್ತಿಲ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಗೌಪ್ಯತೆಯ ಉಲ್ಲಂಘನೆಗಾಗಿ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66ಇ ಅಡಿಯಲ್ಲಿಯೂ ಅವರ ವಿರುದ್ಧ ಆರೋಪ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದ ಮಾಂಕೂಟತ್ತಿಲ್ ತಮ್ಮ ವಿರುದ್ಧದ ಆರೋಪ ಸುಳ್ಳು, ರಾಜಕೀಯ ಪ್ರೇರಿತ ಹಾಗೂ ತಮ್ಮ ಸಾರ್ವಜನಿಕ ವರ್ಚಸ್ಸಿಗೆ ಧಕ್ಕೆ ತರುವ ಯತ್ನ ಎಂದಿದ್ದರು. ವಿರೋಧ ಪಕ್ಷದ ಶಾಸಕರಾಗುವ ಮುನ್ನ ತಮ್ಮ ವಿರುದ್ಧ ಯಾವುದೇ ದೂರು ಕೇಳಿ ಬಂದಿರಲಿಲ್ಲ. ದೂರುದಾರೆ ಬಿಜೆಪಿ ಕಾರ್ಯಕರ್ತನ ಪತ್ನಿಯಾಗಿದ್ದು, ಇದು ರಾಜಕೀಯ ಸಂಚು ಎಂದಿದ್ದರು.