ವಂಚನೆ ಪ್ರಕರಣ: ʼಮಂಜುಮ್ಮೆಲ್ ಬಾಯ್ಸ್ʼ ನಿರ್ಮಾಪಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗೆ ಕೇರಳ ಹೈಕೋರ್ಟ್ ತಡೆ

ನ್ಯಾಯಮೂರ್ತಿ ವಿಜು ಅಬ್ರಹಾಂ ಅವರು ವಿರುದ್ಧದ ಕ್ರಿಮಿನಲ್ ವಿಚಾರಣೆಗೆ 1 ತಿಂಗಳ ಕಾಲ ತಡೆ ನೀಡಿ ಮಧ್ಯಂತರ ಆದೇಶ ಪ್ರಕಟಿಸಿದರು.
ವಂಚನೆ ಪ್ರಕರಣ: ʼಮಂಜುಮ್ಮೆಲ್ ಬಾಯ್ಸ್ʼ ನಿರ್ಮಾಪಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗೆ ಕೇರಳ ಹೈಕೋರ್ಟ್ ತಡೆ

ಈಚೆಗೆ ಸದ್ದು ಮಾಡಿದ ಮಲಯಾಳಂ ಸಸ್ಪೆನ್ಸ್‌ ಥ್ರಿಲ್ಲರ್‌ ಚಲನಚಿತ್ರ ʼಮಂಜುಮ್ಮೆಲ್‌ ಬಾಯ್ಸ್‌ʼ ನಿರ್ಮಾಪಕರ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ವಂಚನೆ ಪ್ರಕರಣದ ವಿಚಾರಣೆಗೆ ಕೇರಳ ಹೈಕೋರ್ಟ್‌ ಶುಕ್ರವಾರ ತಡೆ ನೀಡಿದೆ [ಬಾಬು ಶಾಹಿರ್ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಎರ್ನಾಕುಲಂನ ಮರಡು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕರಾದ ಬಾಬು ಶಾಹಿರ್, ಶಾನ್ ಆಂಟೋನಿ  ಹಾಗೂ ನಟ-ನಿರ್ಮಾಪಕ ಸೌಬಿನ್ ಶಾಹಿರ್ ವಿರುದ್ಧ ಕ್ರಿಮಿನಲ್ ಪಿತೂರಿ, ಕ್ರಿಮಿನಲ್ ನಂಬಿಕೆ ಉಲ್ಲಂಘನೆ, ವಂಚನೆ ಹಾಗೂ ಫೋರ್ಜರಿ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಆರೋಪಿಗಳಾಗಿದ್ದಾರೆ.

ನ್ಯಾಯಮೂರ್ತಿ ವಿಜು ಅಬ್ರಹಾಂ ಅವರು ವಿರುದ್ಧದ ಕ್ರಿಮಿನಲ್ ವಿಚಾರಣೆಗೆ 1 ತಿಂಗಳ ಕಾಲ ತಡೆ ನೀಡಿ ಮಧ್ಯಂತರ ಆದೇಶ ಪ್ರಕಟಿಸಿದರು.

ಪರವ ಫಿಲ್ಮ್ಸ್ ಸಂಸ್ಥೆಯ ಮೂವರು ಪಾಲುದಾರರಲ್ಲಿ ಒಬ್ಬರಾಗಿರುವ ಬಾಬು ಶಾಹಿರ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಆದೇಶ ನೀಡಲಾಗಿದೆ.

ನವೆಂಬರ್ 2022ರಲ್ಲಿ, ಈ ಮೂವರೂ ಸಿರಾಜ್ ವಲಿಯತಾರ ಹಮೀದ್ ಅವರೊಂದಿಗೆ ಹೂಡಿಕೆ ಒಪ್ಪಂದ  ಮಾಡಿಕೊಂಡಿದ್ದರು. ತಮಗೆ ಶೇ 40ರಷ್ಟು ನಿವ್ವಳ ಲಾಭ ನೀಡಬೇಕು ಎಂಬ ಒಪ್ಪಂದದಂತೆ ʼಮಂಜುಮ್ಮೆಲ್‌ ಬಾಯ್ಸ್‌ʼ ಚಿತ್ರಕ್ಕೆ ₹ 7 ಕೋಟಿ ಹೂಡಿಕೆ ಮಾಡಲು ಹಮೀದ್‌ ಸಮ್ಮತಿಸಿದರು.

ಆದರೆ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡ ಬಳಿಕ ತಮಗೆ ಒಪ್ಪಂದದ ಪ್ರಕಾರ ಲಾಭದ ಮೊತ್ತ ನೀಡಿಲ್ಲ ಎಂದು ಮೂಲ ದೂರುದಾರ ಹಮೀದ್‌ ಆರೋಪಿಸಿ ವಾಣಿಜ್ಯ ನ್ಯಾಯಾಲಯದ ಮೊರೆ ಹೋದರು. ವಿಚಾರಣೆ ನಡೆಸಿದ ನ್ಯಾಯಾಲಯ ಪರವ ಫಿಲ್ಮ್ಸ್‌ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿ ಏಕಪಕ್ಷೀಯ ಆದೇಶ ನೀಡಿತ್ತು.

ಬಳಿಕ ಹಮೀದ್‌ ನಿರ್ಮಾಪಕರ ವಿರುದ್ಧ ಕ್ರಿಮಿನಲ್‌ ದೂರು ದಾಖಲಿಸಿದ್ದರು. ಮೊಕದ್ದಮೆಯ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ, ಶಾಹಿರ್ ಹೈಕೋರ್ಟ್‌ಗೆ ಪ್ರಸ್ತುತ ಅರ್ಜಿ ಸಲ್ಲಿಸಿದ್ದರು.

ನ್ಯಾಯಾಲಯ ಪ್ರಸ್ತುತ ಕೇರಳ ಸರ್ಕಾರ ಮತ್ತು ಹಮೀದ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, 10 ದಿನಗಳ ಬಳಿಕ ಮುಂದಿನ ವಿಚಾರಣೆ ನಡೆಸಲು ನಿರ್ಧರಿಸಿದೆ.

Kannada Bar & Bench
kannada.barandbench.com