ವಂಚನೆ ಪ್ರಕರಣ: ನಟಿ ಸನ್ನಿ ಲಿಯೋನ್ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಗೆ ಕೇರಳ ಹೈಕೋರ್ಟ್ ತಡೆ

ಪ್ರಕರಣ ರದ್ದುಗೊಳಿಸುವಂತೆ ಲಿಯೋನ್ ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ ಎ ಜಿಯಾದ್ ರೆಹಮಾನ್ ಆದೇಶ ಜಾರಿಗೊಳಿಸಿದರು.
ವಂಚನೆ ಪ್ರಕರಣ: ನಟಿ ಸನ್ನಿ ಲಿಯೋನ್ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಗೆ ಕೇರಳ ಹೈಕೋರ್ಟ್ ತಡೆ
Published on

ನಟಿ ಸನ್ನಿ ಲಿಯೋನ್ (ಕರಣ್‌ಜಿತ್‌ ಕೌರ್ ವೋಹ್ರಾ), ಆಕೆಯ ಪತಿ ಡೇನಿಯಲ್ ವೆಬರ್ ಹಾಗೂ ಅವರ ಉದ್ಯೋಗಿಯೊಬ್ಬರ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣದ ಕ್ರಿಮಿನಲ್‌ ಪ್ರಕ್ರಿಯೆಗೆ ಕೇರಳ ಹೈಕೋರ್ಟ್‌ ಬುಧವಾರ ತಡೆ ನೀಡಿದೆ [ಕರಣ್‌ಜಿತ್‌ ಕೌರ್ ವೋಹ್ರಾ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

ಪ್ರಕರಣ ರದ್ದುಗೊಳಿಸುವಂತೆ ಲಿಯೋನ್ ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ ಎ ಜಿಯಾದ್ ರೆಹಮಾನ್  ಆದೇಶ  ನೀಡಿದರು. ಅರ್ಜಿಯ ಮುಂದಿನ ವಿಚಾರಣೆಯವರೆಗೆ ಕ್ರಿಮಿನಲ್ ಪ್ರಕ್ರಿಯೆ ನಡೆಸದಂತೆ ನ್ಯಾಯಾಲಯ ತಡೆ ನೀಡಿದೆ.

ಕೇರಳ ಮೂಲದ ಕಾರ್ಯಕ್ರಮ ವ್ಯವಸ್ಥಾಪಕರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ತಮ್ಮ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲು ಮತ್ತು ಪ್ರದರ್ಶನ ನೀಡಲು ಸನ್ನಿ ಲಿಯೋನ್‌ ಅವರಿಗೆ ಲಕ್ಷಾಂತರ ರೂಪಾಯಿ ಪಾವತಿಸಿದ್ದರೂ ಅವರು ಪಾಲ್ಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಐಪಿಸಿಯ 406 (ನಂಬಿಕೆ ದ್ರೋಹ), 420 (ವಂಚನೆ) ಮತ್ತು 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಎಸಗಿದ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಆದರೆ ತಾವು ಮೂವರೂ ನಿರಪರಾಧಿಗಳಾಗಿದ್ದು, ಈ ಆರೋಪಗಳನ್ನು ಮೇಲುನೋಟಕ್ಕೆ ಗಣನೆಗೆ ತೆಗೆದುಕೊಂಡರೂ ಕೂಡ ಅವು ಆರೋಪಿಸಲಾದ ಅಪರಾಧಗಳಡಿ ಬರುವುದಿಲ್ಲ. ತಮ್ಮಿಂದ ದೂರುದಾರರಿಗೆ ಯಾವುದೇ ನಷ್ಟವಾಗಿಲ್ಲ ಆದರೆ  ತಮ್ಮ ಜೀವನದ ಮೇಲೆ ಅವರ ದೂರಿನಿಂದ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹೈಕೋರ್ಟ್‌ಗೆ ಸನ್ನಿ ಮತ್ತಿತರರು ಅರ್ಜಿ ಸಲ್ಲಿಸಿದ್ದರು.

ಈ ಹಿಂದೆ ಇದೇ ಆರೋಪಗಳನ್ನಿರಿಸಿಕೊಂಡು ದೂರುದಾರರು ಸಿವಿಲ್‌ ಮೊಕದ್ದಮೆಯನ್ನು ದಾಖಲಿಸಿದ್ದರಾದರೂ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಇದೇ ವರ್ಷದ ಜುಲೈನಲ್ಲಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಪ್ರಕರಣವನ್ನು ವಜಾಗೊಳಿಸಿತ್ತು. ಹೀಗಾಗಿ ತಮ್ಮ ವಿರುದ್ಧದ ಮೊಕದ್ದಮೆ ರದ್ದುಗೊಳಿಸಬೇಕು ಎಂದು ಅವರು ಕೋರಿದ್ದಾರೆ.

Kannada Bar & Bench
kannada.barandbench.com