Kantara
Kantara

ಕಾಂತಾರದ 'ವರಾಹರೂಪಂ' ವಿವಾದ: ಥೈಕ್ಕುಡಂ ಬ್ರಿಜ್‌ ದಾವೆ ತಿರಸ್ಕರಿಸಿದ ನ್ಯಾಯಾಲಯದ ಆದೇಶಕ್ಕೆ ಕೇರಳ ಹೈಕೋರ್ಟ್‌ ತಡೆ

ನ್ಯಾಯಮೂರ್ತಿ ಪಿ ಸೋಮರಾಜನ್‌ ನೇತೃತ್ವದ ಏಕಸದಸ್ಯ ಪೀಠವು ಹೊಂಬಾಳೆ ಫಿಲ್ಮ್ಸ್‌, ರಿಷಬ್‌ ಶೆಟ್ಟಿ, ಪೃಥ್ವಿರಾಜ್‌ ಫಿಲ್ಮ್ಸ್‌ ಮತ್ತಿತರರಿಗೆ ನೋಟಿಸ್‌ ಜಾರಿ ಮಾಡಿದೆ.
Published on

ʼವರಾಹ ರೂಪಂʼ ಹಾಡನ್ನು ಕಾಂತಾರ ಸಿನಿಮಾದಲ್ಲಿ ಹಕ್ಕುಸ್ವಾಮ್ಯ ಉಲ್ಲಂಘಿಸಿ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಹೊಂಬಾಳೆ ಫಿಲ್ಮ್ಸ್‌ ವಿರುದ್ಧ ಥೈಕ್ಕುಡಂ ಬ್ರಿಜ್‌ ಸಂಗೀತ ತಂಡ ಹೂಡಿದ್ದ ದಾವೆಯನ್ನು ತಿರಸ್ಕರಿಸಿದ್ದ ಕೋರಿಕ್ಕೋಡ್‌ ಜಿಲ್ಲಾ ನ್ಯಾಯಾಲಯ ಆದೇಶಕ್ಕೆ ಗುರುವಾರ ಕೇರಳ ಹೈಕೋರ್ಟ್‌ ತಡೆ ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ಸೋಮರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಹೊಂಬಾಳೆ ಫಿಲ್ಮ್ಸ್‌. ರಿಷಬ್‌ ಶೆಟ್ಟಿ, ಪೃಥ್ವಿರಾಜ್‌ ಫಿಲ್ಮ್ಸ್‌, ಅಮೆಜಾನ್‌ ಸೆಲ್ಲರ್‌ ಸರ್ವೀಸ್‌ ಪ್ರೈವೇಟ್‌ ಲಿಮಿಟೆಡ್‌, ಗೂಗಲ್‌ ಇಂಡಿಯಾ ಪ್ರಧಾನ ಕಚೇರಿ, ಸ್ಪಾಟಿಫೈ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌, ಪೃಥ್ವಿರಾಜ್‌ ಸುಕುಮಾರನ್‌ ಮತ್ತು ಇತರರಿಗೆ ನೋಟಿಸ್‌ ಜಾರಿ ಮಾಡಿದೆ.

ಐದು ವರ್ಷಗಳ ಹಿಂದೆ ಬಿಡುಗಡೆ ಮಾಡಿರುವ ʼನವರಸಂʼ ಗೀತೆಗಳಿಂದ ʼವರಾಹ ರೂಪಂʼ ಗೀತೆಯನ್ನು ಹೆಕ್ಕಿ ತೆಗೆದುಕೊಳ್ಳಲಾಗಿದೆ ಎನ್ನುವುದು ಥೈಕ್ಕುಡಂ ಬ್ರಿಜ್‌ ಆರೋಪ. ಸೆಪ್ಟೆಂಬರ್‌ 30ರಂದು ಬಿಡುಗಡೆಯಾದ ಕನ್ನಡದ ಯಶಸ್ವಿ ಚಲನಚಿತ್ರವಾದ ಕಾಂತಾರ ಮತ್ತು ಅದರ ಸಂಗೀತ ನಿರ್ದೇಶಕ ಬಿ ಅಜನೀಶ್‌ ಲೋಕನಾಥ್‌ ಅವರು ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪಕ್ಕೆ ಗುರಿಯಾಗಿದ್ದಾರೆ.

ಕಾಂತಾರ ಸಿನಿಮಾ ತಂಡದ ಜೊತೆ ಗುರುತಿಸಿಕೊಂಡಿಲ್ಲ ಮತ್ತು ಈ ಸಂಬಂಧ ಕಾನೂನು ಸಮರ ನಡೆಸುವುದಾಗಿ ಥೈಕ್ಕುಡಂ ಬ್ರಿಜ್ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿತ್ತು. ಆನಂತರ ಕೋರಿಕ್ಕೋಡ್‌ ಜಿಲ್ಲಾ ನ್ಯಾಯಾಲಯದಲ್ಲಿ ಥೈಕ್ಕುಡಂ ಬ್ರಿಜ್‌ ದಾವೆ ಹೂಡಿತ್ತು.

Also Read
ʼತೈಕ್ಕುಡಂ ಬ್ರಿಜ್‌ʼ ಮೊಕದ್ದಮೆ: ʼಕಾಂತಾರʼ ಚಲನಚಿತ್ರದ 'ವರಾಹರೂಪಂ' ಹಾಡಿಗೆ ಕೇರಳ ನ್ಯಾಯಾಲಯದ ನಿರ್ಬಂಧ

ಇದರ ಬೆನ್ನಿಗೇ, ʼನವರಸಂʼನ ಹಕ್ಕುಸ್ವಾಮ್ಯ ಹೊಂದಿರುವ ಮಾತೃಭೂಮಿ ಪ್ರಿಂಟಿಂಗ್‌ ಮತ್ತು ಪಬ್ಲಿಷಿಂಗ್‌ ಕಂಪೆನಿ ಲಿಮಿಟೆಡ್‌ ಪಲಕ್ಕಾಡ್‌ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಆರಂಭದಲ್ಲಿ ʼವರಾಹ ರೂಪಂʼ ಗೀತೆಯನ್ನು ಸಿನಿಮಾ, ಚಿತ್ರಮಂದಿರ ಮತ್ತು ಸ್ಟ್ರೀಮಿಂಗ್‌ ವೇದಿಕೆಯಲ್ಲಿ ಬಳಸಕೂಡದಂತೆ ಪಲಕ್ಕಾಡ್‌ ಮತ್ತು ಕೋರಿಕ್ಕೋಡ್‌ ಜಿಲ್ಲಾ ನ್ಯಾಯಾಲಯಗಳು ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದ್ದವು.

ಗೀತೆಯ ಬಳಕೆಗೆ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದ್ದನ್ನು ಪ್ರಶ್ನಿಸಿ ಹೊಂಬಾಳೆ ಫಿಲ್ಮ್ಸ್‌ ಸಲ್ಲಿಸಿದ್ದ ಅರ್ಜಿಯನ್ನು ನವೆಂಬರ್‌ 24ರಂದು ಕೇರಳ ಹೈಕೋರ್ಟ್‌ ವಜಾ ಮಾಡಿತ್ತು. ನಂತರದ ವಿಚಾರಣೆ ವೇಳೆ ಕೋರಿಕ್ಕೋಡ್‌ ಜಿಲ್ಲಾ ನ್ಯಾಯಾಲಯವು ಥೈಕ್ಕುಡಂ ಬ್ರಿಜ್‌ ಹೂಡಿರುವ ದಾವೆಯು ಮಾನ್ಯವಾಗುವುದಿಲ್ಲ ಎಂದಿತ್ತು. ಇದನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್‌ನಲ್ಲಿ ಥೈಕ್ಕುಡಂ ಬ್ರಿಜ್‌ ಮೇಲ್ಮನವಿ ಸಲ್ಲಿಸಿದೆ.

Kannada Bar & Bench
kannada.barandbench.com