ಮಲಬಾರ್ ಪರೋಟಾ ಶೇ. 5ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ಬರಲಿದೆಯೇ ವಿನಾ ಶೇ 18ರ ಜಿಎಸ್‌ಟಿ ವ್ಯಾಪ್ತಿಗೆ ಅಲ್ಲ ಎಂದು ಕೇರಳ ಹೈಕೋರ್ಟ್ ಏಕಸದಸ್ಯ ಪೀಠ ಈ ಹಿಂದೆ ನೀಡಿದ್ದ ತೀರ್ಪಿಗೆ ವಿಭಾಗೀಯ ಪೀಠ ಮಂಗಳವಾರ ತಡೆ ನೀಡಿದೆ [ಮಾಡರ್ನ್ ಫುಡ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಏಕಸದಸ್ಯ ಪೀಠದ ತೀರ್ಪು ಜಾರಿಯನ್ನು ನ್ಯಾಯಮೂರ್ತಿಗಳಾದ ಎ ಮುಹಮ್ಮದ್ ಮುಸ್ತಾಕ್ ಮತ್ತು ಎಸ್ ಮನು ಅವರಿದ್ದ ವಿಭಾಗೀಯ ಪೀಠ ಎರಡು ತಿಂಗಳ ಅವಧಿಗೆ ತಡೆಹಿಡಿಯಿತು.
ಮಾಡರ್ನ್ ಫುಡ್ ಎಂಟರ್‌ಪ್ರೈಸಸ್ ಪ್ರೈ.ಲಿಮಿಟೆಡ್ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್‌ನಲ್ಲಿ ಜಿಎಸ್‌ಟಿ ಮೊತ್ತ ತಗ್ಗಿಸಿ ಏಕಸದಸ್ಯ ಪೀಠ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ತಡೆಯಾಜ್ಞೆ ನೀಡಲಾಗಿದೆ.
ತನ್ನ ಉತ್ಪನ್ನಗಳಾದ ಕ್ಲಾಸಿಕ್ ಮಲಬಾರ್ ಪರೋಟಾ ಮತ್ತು ಸಂಪೂರ್ಣ ಗೋಧಿ ಮಲಬಾರ್ ಪರೋಟಾಗಳಿಗೆ ಕೇಂದ್ರ/ರಾಜ್ಯ ಸರಕು ಮತ್ತು ಸೇವಾ ತೆರಿಗೆ ಕಾಯಿದೆಯಿಂದ ಹೊರಡಿಸಲಾದ ದರ ಅಧಿಸೂಚನೆಗಳ ಪ್ರಕಾರ ಶೇ 18ರಷ್ಟು ಜಿಎಸ್‌ಟಿ ವಿಧಿಸಬೇಕು ಎಂದು ಮೇಲ್ಮನವಿ ಪ್ರಾಧಿಕಾರ ಹೊರಡಿಸಿದ್ದ ಆದೇಶವನ್ನು ಮಾಡರ್ನ್ ಫುಡ್ ಪ್ರಶ್ನಿಸಿತ್ತು.
ಪರೋಟಾ ಸಹಿತ ಭಾರತೀಯ ರೊಟ್ಟಿಗಳು 1975 ರ ಕಸ್ಟಮ್ಸ್ ಟ್ಯಾರಿಫ್ ಕಾಯಿದೆಯ ಟ್ಯಾರಿಫ್ ಐಟಂ ಸಂಖ್ಯೆ.1905 9090 ರ ಅಡಿಯಲ್ಲಿ ʼಬ್ರೆಡ್ʼ ಎಂಬ ವ್ಯಾಪ್ತಿಗೆ ಬರುತ್ತವೆ ಎಂದು ಅರ್ಜಿದಾರರು ವಾದಿಸಿದ್ದರು (1905ರ ಎಚ್‌ಎಸ್‌ಎನ್ ಕೋಡ್ ಆರು-ಅಂಕಿಯ ಪ್ರಮಾಣಿತ ಕೋಡ್ ಆಗಿದ್ದು, ತೆರಿಗೆ ಉದ್ದೇಶಗಳಿಗಾಗಿ ಸರಕುಗಳು ಮತ್ತು ಉತ್ಪನ್ನಗಳನ್ನು ವರ್ಗೀಕರಿಸಲು ಬಳಸಲಾಗುತ್ತದೆ).
1905ರ ಎಚ್‌ಎಸ್‌ಎನ್ ಕೋಡ್ ಹೇಳುವ ಬ್ರೆಡ್, ಪೇಸ್ಟ್ರಿ, ಕೇಕ್‌ಗಳು, ಬಿಸ್ಕೆಟ್ ಹಾಗೂ ಇತರ ಬೇಕರಿ ಉತ್ಪನ್ನಗಳಂತಹ ಪದಾರ್ಥಗಳ ವ್ಯಾಪ್ತಿಗೇ ಪರೋಟಾ ಕೂಡ ಬರುತ್ತದೆ ಮತ್ತು ಅದರ ತಯಾರಿಕೆ ಕೂಡ ಈ ಉತ್ಪನ್ನಗಳ ತಯಾರಿಕೆಯಂತೆಯೇ ಇದೆ ಎಂಬುದು ಅರ್ಜಿದಾರರ ಪ್ರಮುಖ ವಾದವಾಗಿತ್ತು.
ಆದರೆ ಇದನ್ನು ಸರ್ಕಾರಿ ವಕೀಲರು ವಿರೋಧಿಸಿದ್ದರು. ಪದಾರ್ಥಗಳು ಮತ್ತು ತಯಾರಿಕೆ ಪ್ರಕ್ರಿಯೆ ಬೇರೆ ಬೇರೆಯಾಗಿದ್ದು ಪರೋಟಾವನ್ನು ಬ್ರೆಡ್‌ನಂತೆ ಎಂದು ಯಾರೂ ತಪ್ಪಾಗಿ ಭಾವಿಸಲಾಗದು ಎಂದಿದ್ದರು.
ವಾದಗಳನ್ನು ಆಲಿಸಿದ ಏಕಸದಸ್ಯ ಪೀಠ ಮಲಬಾರ್ ಪರೋಟಾ 1905ರ ಎಚ್‌ಎಸ್‌ಎನ್ ಕೋಡ್‌ನಲ್ಲಿರುವ ಉತ್ಪನ್ನಗಳಿಗೆ ಹೋಲಿಕೆಯಾಗುವುದರಿಂದ ಅದರ ವ್ಯಾಪ್ತಿಗೇ ಬರುತ್ತದೆ ಎಂಬ ಮಾಡರ್ನ್ ಫುಡ್ ವಾದವನ್ನು ಪುರಸ್ಕರಿಸಿತ್ತು.
ಇದೀಗ ತೀರ್ಪು ಜಾರಿಯಾಗದಂತೆ ವಿಭಾಗೀಯ ಪೀಠ ನೀಡಿರುವ ಗಡವು ಮುಗಿಯುವ ಮುನ್ನವೇ ರಾಜ್ಯ ಸರ್ಕಾರದ ಮೇಲ್ಮನವಿಯ ವಿಚಾರಣೆ ನಡೆಯುವ ಸಾಧ್ಯತೆಗಳಿವೆ.