ಮಲಯಾಳಂ ಸುದ್ದಿವಾಹಿನಿ ಮೀಡಿಯಾಒನ್‌ನ ಪರವಾನಗಿಯನ್ನು ರದ್ದುಪಡಿಸಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿರ್ಧಾರವನ್ನು ಕೇರಳ ಹೈಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ [ಮಾಧ್ಯಮಂ ಬ್ರಾಡ್‌ಕಾಸ್ಟಿಂಗ್ ಲಿ. ವರ್ಸಸ್ ಭಾರತ ಸರ್ಕಾರ ಮತ್ತಿತರರು]. ನ್ಯಾ. ಎನ್ ನಗರೇಶ್ ಅವರ ಏಕಸದಸ್ಯ ಪೀಠ ಈ ಕುರಿತ ತೀರ್ಪು ನೀಡಿತು.
ಆದೇಶದ ವೇಳೆ ನ್ಯಾಯಮೂರ್ತಿಗಳು, "ನಾನು ಕಡತಗಳನ್ನು ಪರಿಶೀಲಿಸಿದ್ದೇನೆ. ಸಚಿವಾಲಯವು ವಿವಿಧ ಬೇಹುಗಾರಿಕಾ ಸಂಸ್ಥೆಗಳಿಂದ ವರದಿಯನ್ನು ಪಡೆದಿದೆ. ಆ ವರದಿಗಳ ಆಧಾರದಲ್ಲಿ ಭದ್ರತಾ ಅನುಮತಿ ನವೀಕರಿಸಬಾರದು ಎಂದು ನಿರ್ಧರಿಸಲಾಗಿದೆ. ಈ ನಿರ್ಧಾರವನ್ನು ಸಮರ್ಥಿಸುವಂತಹ ಅಂಶಗಳಿವೆ. ಹಾಗಾಗಿ ನಾನು ಈ ಮನವಿಯನ್ನು ವಜಾಗೊಳಿಸುತ್ತೇನೆ," ಎಂದು ಹೇಳಿದರು.
ಹಿನ್ನೆಲೆ:
ಜನವರಿ 31 ರಂದು ಸುದ್ದಿವಾಹಿನಿಯ ಪ್ರಸರಣವನ್ನು ಕೇಂದ್ರವು ನಿರ್ಬಂಧಿಸಿತು. ಇದನ್ನು ಪ್ರಶ್ನಿಸಿ ಸುದ್ದಿವಾಹಿನಿಯು ಹೈಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ಕೇಂದ್ರದ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಆನಂತರ ಕೇಂದ್ರ ಸರ್ಕಾರವು ವಾಹಿನಿಯ ಪರವಾನಗಿಯನ್ನು ರದ್ದುಪಡಿಸಲು ಕಾರಣವಾಗಿರುವ ಗೃಹಸಚಿವಾಲಯದಿಂದ ತಿಳಿದು ಬಂದ ರಾಷ್ಟ್ರೀಯ ಭದ್ರತೆಗೆ ಎರವಾಗುವಂತಹ ಖಚಿತ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು.
ಗೃಹಸಚಿವಾಲಯದ ಮಾಹಿತಿ ಏನು ಎನ್ನುವುದನ್ನು ಅರ್ಜಿದಾರರಿಗೆ ತಿಳಿಸಲು ನಿರಾಕರಿಸಿದ ಕೇಂದ್ರವು ರಾಷ್ಟ್ರೀಯ ಭದ್ರತೆಗೆ ಕಾರಣವಾಗುವ ಈ ರೀತಿಯ ಪ್ರಕರಣಗಳಲ್ಲಿ ಪಕ್ಷಕಾರರು ಸಹಜ ನ್ಯಾಯದ ತತ್ವಗಳನ್ನು ಒತ್ತಾಯಿಸಲಾಗದು ಎಂದಿತ್ತು.