ಗುರುತು ಬಹಿರಂಗ: ಮ್ಯಾಜಿಸ್ಟ್ರೇಟ್ ವಿರುದ್ಧ ಕ್ರಮಕ್ಕೆ ನಿರಾಕರಿಸಿದ್ದ ಆದೇಶ ಎತ್ತಿಹಿಡಿದ ಕೇರಳ ಹೈಕೋರ್ಟ್

ಅತ್ಯಾಚಾರ ಸಂತ್ರಸ್ತೆಯ ಗುರುತು ಸಿಗದಂತೆ ದಾಖಲೆಗಳಲ್ಲಿರುವ ಆಕೆಯ ಹೆಸರನ್ನು ತಕ್ಷಣವೇ ತೆಗೆಯಲು ಏಕ ಸದಸ್ಯ ಪೀಠ ನಿರ್ದೇಶನ ನೀಡಿತ್ತಾದರೂ ಮ್ಯಾಜಿಸ್ಟ್ರೇಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಮನವಿಯನ್ನು ವಜಾಗೊಳಿಸಿತ್ತು.
ಕೇರಳ ಹೈಕೋರ್ಟ್
ಕೇರಳ ಹೈಕೋರ್ಟ್

ಅತ್ಯಾಚಾರ ಸಂತ್ರಸ್ತೆಯ ಹೆಸರನ್ನು ಆಕಸ್ಮಿಕವಾಗಿ ತನ್ನ ಆದೇಶದಲ್ಲಿ ಬಹಿರಂಗಪಡಿಸಿದ ಮ್ಯಾಜಿಸ್ಟ್ರೇಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಮನವಿಯನ್ನು ವಜಾಗೊಳಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಕೇರಳ ಹೈಕೋರ್ಟ್ ಇತ್ತೀಚೆಗೆ ಎತ್ತಿಹಿಡಿದಿದೆ.

ಅತ್ಯಾಚಾರ ಸಂತ್ರಸ್ತೆಯ ಗುರುತು ಸಿಗದಂತೆ ದಾಖಲೆಗಳಲ್ಲಿರುವ ಆಕೆಯ ಹೆಸರನ್ನು ತಕ್ಷಣವೇ ತೆಗೆಯುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ಮುಖ್ಯ ನ್ಯಾಯಮೂರ್ತಿ ಎ ಜೆ ದೇಸಾಯಿ ಮತ್ತು ನ್ಯಾಯಮೂರ್ತಿ ವಿ ಜಿ ಅರುಣ್ ಅವರಿದ್ದ ವಿಭಾಗೀಯ ಪೀಠ ಸಹಮತ ಸೂಚಿಸಿತು.

ಆರೋಪಿ ಸೈಜು ಎ ವಿ ಎಂಬುವರಿಗೆ ನೀಡಲಾದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಸಂತ್ರಸ್ತೆ ಕಟ್ಟಕ್ಕಡದ ಜುಡಿಷಿಯಲ್‌ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮೆಟ್ಟಿಲೇರಿದ್ದರು. ಜಾಮೀನನ್ನು ರದ್ದುಗೊಳಿಸಲು ನಿರಾಕರಿಸಿದ್ದ ಮ್ಯಾಜಿಸ್ಟ್ರೇಟ್ ಅವರು ತಮ್ಮ ಆದೇಶದಲ್ಲಿ ಸಂತ್ರಸ್ತೆಯ ಗುರುತನ್ನು ಕೂಡ ಬಹಿರಂಗಪಡಿಸಿದ್ದರು.

ಅತ್ಯಾಚಾರಕ್ಕೊಳಗಾದವರ ಗುರುತು ಮರೆಮಾಚಲು ಮಾರ್ಗಸೂಚಿಗಳನ್ನು ರೂಪಿಸಿ ನಿಪುಣ್‌ ಸಕ್ಸೇನಾ ಮತ್ತಿತರರು ಹಾಗೂ ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಈ ಆದೇಶ ಉಲ್ಲಂಘಿಸಿದ್ದು ಮಾಜಿಸ್ಟ್ರೇಟ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಸಂತ್ರಸ್ತೆ ಬಳಿಕ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಅತ್ಯಾಚಾರ ಸಂತ್ರಸ್ತೆಯ ಗುರುತು ಸಿಗದಂತೆ ದಾಖಲೆಗಳಲ್ಲಿರುವ ಆಕೆಯ ಹೆಸರನ್ನು ತಕ್ಷಣವೇ ತೆಗೆಯಲು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರಿದ್ದ ಏಕ ಸದಸ್ಯ ಪೀಠ ನಿರ್ದೇಶನ ನೀಡಿತ್ತಾದರೂ ಮ್ಯಾಜಿಸ್ಟ್ರೇಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಮನವಿಯನ್ನು ವಜಾಗೊಳಿಸಿತ್ತು.

ಅತ್ಯಾಚಾರದಂತಹ ಕೆಲವು ಅಪರಾಧಗಳಿಗೆ ಬಲಿಯಾದವರ ಗುರುತು ಬಹಿರಂಗಪಡಿಸುವುದನ್ನು ಅಪರಾಧವೆಂದು ಪರಿಗಣಿಸುವ ಐಪಿಸಿ ಸೆಕ್ಷನ್ 228 ಎ, ಸಂತ್ರಸ್ತೆಯ ಗುರುತನ್ನು ಮುದ್ರಿಸುವ ಅಥವಾ ಪ್ರಕಟಿಸುವವರಿಗೆ ಮಾತ್ರ ಅನ್ವಯಿಸುತ್ತದೆ. ನ್ಯಾಯಾಲಯ ತನ್ನ ವಿಚಾರಣೆಯ ಸಮಯದಲ್ಲಿ ಅಜಾಗರೂಕತೆಯಿಂದ ಅಂತಹ ಮಾಹಿತಿ ಬಹಿರಂಗಪಡಿಸುವ ಸಂದರ್ಭಗಳನ್ನು ಸೆಕ್ಷನ್‌ ಒಳಗೊಳ್ಳುವುದಿಲ್ಲ ಎಂದು ಏಕ ಸದಸ್ಯ ಪೀಠ ತೀರ್ಪು ನೀಡಿತ್ತು. ನ್ಯಾಯಾಧೀಶರ (ಸಂರಕ್ಷಣಾ) ಕಾಯಿದೆಯಡಿ ನ್ಯಾಯಾಧೀಶರಿಗೆ ನೀಡಲಾದ ಸಂಪೂರ್ಣ ರಕ್ಷಣೆಯನ್ನು ತೀರ್ಪು ಎತ್ತಿ ತೋರಿಸಿತ್ತು.

ಲೈಂಗಿಕ ಅಪರಾಧ ಸಂತ್ರಸ್ತರ ಅನಾಮಧೇಯತೆಯನ್ನು ಕಾಪಾಡಿಕೊಳ್ಳುವ ತುರ್ತು ಅಗತ್ಯದ ಬಗ್ಗೆ ನ್ಯಾಯಾಧೀಶರು ಮತ್ತು ನ್ಯಾಯಾಂಗ ಅಧಿಕಾರಿಗಳು ಜಾಗೃತರಾಗಿರಬೇಕು ಎಂದು ಏಕ ಸದಸ್ಯ ಪೀಠ ಸೂಚಿಸಿತ್ತು. ಅಂತಹ ಸಂತ್ರಸ್ತರನ್ನು ಒಳಗೊಂಡ ಪ್ರಕರಣಗಳಲ್ಲಿ ವಿವರಗಳನ್ನು ಮುಚ್ಚಿಡಲು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದರು. ಈ ಆದೇಶ ಪ್ರಶ್ನಿಸಿ ಅತ್ಯಾಚಾರ ಸಂತ್ರಸ್ತೆ ವಿಭಾಗೀಯ ಪೀಠಕ್ಕೆ ಪ್ರಸ್ತುತ ಅರ್ಜಿ ಸಲ್ಲಿಸಿದ್ದರು.

Related Stories

No stories found.
Kannada Bar & Bench
kannada.barandbench.com