ವಧು ಹುಡುಕಿಕೊಡಲು ವಿಫಲ: ₹25 ಸಾವಿರ ಪರಿಹಾರ ನೀಡುವಂತೆ ‘ಕೇರಳ ಮ್ಯಾಟ್ರಿಮೋನಿ’ಗೆ ಗ್ರಾಹಕ ನ್ಯಾಯಾಲಯ ಆದೇಶ

ವಧು ಪಡೆಯುವ ನಿರೀಕ್ಷೆಯಲ್ಲಿ ಜಾಲತಾಣದಲ್ಲಿ ನೋಂದಾಯಿಸಿಕೊಂಡಿದ್ದ ಗ್ರಾಹಕನಿಗೆ ಅಗತ್ಯ ಸೇವೆ ಒದಗಿಸಲು ಕೇರಳ ಮ್ಯಾಟ್ರಿಮೋನಿ ವಿಫಲವಾಗಿದ್ದು ಆಕರ್ಷಕ ಜಾಹೀರಾತುಗಳಿಂದ ಅವರ ಹಾದಿತಪ್ಪಿಸಿದೆ ಎಂದು ಜಿಲ್ಲಾ ವೇದಿಕೆ ಹೇಳಿದೆ.
Kerala State Consumer Disputes Redressal Commission Ernakulam, Kerala Matrimony
Kerala State Consumer Disputes Redressal Commission Ernakulam, Kerala Matrimony

ವಧು- ವರಾನ್ವೇಷಣೆ ಸೇವೆ ಒದಗಿಸುವ ಜಾಲತಾಣವಾದ ಕೇರಳ ಮ್ಯಾಟ್ರಿಮೊನಿ ತನಗೆ ವಧು ಹುಡುಕಿಕೊಡುವ ಭರವಸೆ ಈಡೇರಿಸಲು ವಿಫಲವಾಗಿದೆ ಎಂದು ಆರೋಪಿಸಿದ್ದ ವ್ಯಕ್ತಿಯೊಬ್ಬರಿಗೆ ₹25,000 ಪರಿಹಾರ ನೀಡುವಂತೆ ಕೇರಳದ ಎರ್ನಾಕುಲಂನಲ್ಲಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ (ಡಿಸಿಡಿಆರ್‌ಸಿ) ಆದೇಶಿಸಿದೆ.

ಕೇರಳ ಮ್ಯಾಟ್ರಿಮೋನಿಯಲ್ಲಿ ಸೇವಾ ನ್ಯೂನತೆ ಇದೆ ಎಂದು ತೀರ್ಮಾನಿಸಿದ ಜಿಲ್ಲಾ ವೇದಿಕೆ ಅಧ್ಯಕ್ಷರಾದ  ಡಿ ಬಿ ಬಿನು ಸದಸ್ಯರಾದ ರಾಮಚಂದ್ರನ್ ವಿ ಹಾಗೂ ಶ್ರೀವಿಧಿಯಾ ಟಿ.ಎನ್ ಅವರು ಈಚೆಗೆ ಈ ಆದೇಶ ಹೊರಡಿಸಿದರು.

ದೂರುದಾರರು ಜಾಲತಾಣದ ಹಲವಾರು 'ಸಂತ್ರಸ್ತರಲ್ಲಿ' ಒಬ್ಬರಾಗಿದ್ದು ತಮ್ಮ ವಾದವನ್ನು ಬೆಂಬಲಿಸುವುದಕ್ಕಾಗಿ ದೂರುದಾರ ಸಾಮಾಜಿಕ ಮಾಧ್ಯಮಗಳಲ್ಲಿ ಮ್ಯಾಟ್ರಿಮೋನಿಯಲ್‌ ಕುರಿತು ಸಂಗ್ರಹವಾಗಿರುವ ಸಾರ್ವಜನಿಕ ಅಭಿಪ್ರಾಯಗಳನ್ನು ಕೂಡ ಸಲ್ಲಿಸಿದ್ದಾರೆ ಎಂದು ನ್ಯಾಯಾಲಯ ವಿವರಿಸಿತು.

ಜಾಲತಾಣ ಅನ್ವೇಷಣಾರ್ಥಿಗಳ ಗಮನ ಸೆಳೆಯಲು ಆಕರ್ಷಕ ಜಾಹೀರಾತುಗಳನ್ನು ನೀಡಿದ್ದು ಅವರಿಗೆ ಅಗತ್ಯ ಸೇವೆ ಒದಗಿಸಿಲ್ಲ. ದೂರುದಾರರಿಗೆ ತಾವು ಸೇವೆ ಒದಗಿಸಿದ್ದನ್ನು ಸಾಬೀತುಪಡಿಸುವಂತಹ ಯಾವುದೇ ಪುರಾವೆಗಳನ್ನೂ ಅದು ಒದಗಿಸಿಲ್ಲ. ತಮ್ಮ ವಾದವನ್ನು ಬೆಂಬಲಿಸುವುದಕ್ಕಾಗಿ ದೂರುದಾರ ಸಾಮಾಜಿಕ ಮಾಧ್ಯಮಗಳಲ್ಲಿ ಮ್ಯಾಟ್ರಿಮೋನಿಯಲ್‌ ಕುರಿತು ಸಂಗ್ರಹವಾಗಿರುವ ಸಾರ್ವಜನಿಕ ಅಭಿಪ್ರಾಯಗಳನ್ನು ಕೂಡ ಸಲ್ಲಿಸಿದ್ದಾರೆ. ಆದ್ದರಿಂದ ಜಾಲತಾಣದ ಸಂತ್ರಸ್ತರಲ್ಲಿ ದೂರುದಾರರೂ ಒಬ್ಬರು ಎಂದು ತೀರ್ಮಾನಿಸಬಹುದು ಎಂದು ನ್ಯಾಯಾಲಯ ನುಡಿದಿದೆ.

 ವಧುವಿನ ಅನ್ವೇಷಣೆಗೆ ಮುಂದಾಗಿದ್ದ ಚೇರ್ತಾಲದ ವ್ಯಕ್ತಿಯೊಬ್ಬರಿಗೆ ಮೂರು ತಿಂಗಳ ಚಂದಾದಾರಿಕೆಗೆ ₹ 4,100 ಪಾವತಿಸುವಂತೆ ಜಾಲತಾಣದ ಅಧಿಕಾರಿಗಳು ಸೂಚಿಸಿದ್ದರು. ಹಣ ಪಾವತಿಸಿದ ಬಳಿಕ ಜಾಲತಾಣದ ಸಿಬ್ಬಂದಿಯನ್ನು ಸಂಪರ್ಕಿಸಲು ಯತ್ನಿಸಿದಾಗ ಅವರು ಪ್ರತಿಕ್ರಿಯೆ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ವ್ಯಕ್ತಿ ಶುಲ್ಕ ಮರುಪಾವತಿಸಬೇಕು ಹಾಗೂ ತನಗೆ ಪರಿಹಾರ ನೀಡಬೇಕು ಎಂದು ಕೋರಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ಅವರ ವಾದಕ್ಕೆ ಕೇರಳ ಮ್ಯಾಟ್ರಿಮೊನಿ ಆಕ್ಷೇಪ ವ್ಯಕ್ತಪಡಿಸಿತ್ತು. ತಾನು ಸೇವೆ ಒದಗಿಸಿರುವುದಾಗಿ ಸಮರ್ಥಿಸಿಕೊಂಡಿತ್ತು.

ವಾದ ಆಲಿಸಿದ ಡಿಆರ್‌ಸಿಡಿಸಿ ಕೇರಳ  ಮ್ಯಾಟ್ರಿಮೋನಿ ಸೇವೆ ಒದಗಿಸಿದೆ ಎನ್ನುವುದನ್ನು ಸಾಬೀತುಪಡಿಸುವಂತಹ ಯಾವುದೇ ಪುರಾವೆಗಳಿಲ್ಲ ಎಂದಿತು. ಹಾಗಾಗಿ, ₹25,000 ಪರಿಹಾರ ಮತ್ತು ವ್ಯಾಜ್ಯ ವೆಚ್ಚವಾಗಿ ₹3,000 ಪಾವತಿಸುವುದಲ್ಲದೆ, ₹4,100 ಶುಲ್ಕವನ್ನು ದೂರುದಾರರಿಗೆ ಬಡ್ಡಿ ಸಹಿತ ಹಿಂದಿರುಗಿಸುವಂತೆ ಆದೇಶಿಸಿತು.

Kannada Bar & Bench
kannada.barandbench.com