ವಿದೇಶಿಗರ ವಿರುದ್ಧ ಕಾನೂನು ಕ್ರಮ ಜರುಗಿಸುವಲ್ಲಿ ಸಮಸ್ಯೆ: ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಅಲಾಹಾಬಾದ್‌ ಹೈಕೋರ್ಟ್‌ ಕರೆ

ನಿರ್ದಿಷ್ಟವಾಗಿ, ಜಾಮೀನು ಪಡೆಯುವ ವಿಚಾರದಲ್ಲಿ ವಿದೇಶಿ ಆರೋಪಿಗಳು ತೊಂದರೆ ಎದುರಿಸುತ್ತಿರುವುದನ್ನು ಮತ್ತು ಕಾನೂನು ಪ್ರಕ್ರಿಯೆ ಅರ್ಥಮಾಡಿಕೊಳ್ಳಲು ಅವರಿಗೆ ವ್ಯಾಖ್ಯಾನಕಾರರ ಕೊರತೆ ಇರುವುದನ್ನು ನ್ಯಾಯಾಲಯ ಎತ್ತಿ ತೋರಿಸಿತು.
ಅಲಾಹಾಬಾದ್ ಹೈಕೋರ್ಟ್
ಅಲಾಹಾಬಾದ್ ಹೈಕೋರ್ಟ್
Published on

ವಿದೇಶಿ ಪ್ರಜೆಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಪ್ಪಂದ ಮಾಡಿಕೊಳ್ಳುವಂತೆ ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ ಕೇಂದ್ರ ಸರ್ಕಾರಕ್ಕೆ ಕಿವಿಮಾತು ಹೇಳಿದೆ [ಜೊಂಗ್ ಹಾವೊ ಝೆ ಅಲಿಯಾಸ್‌ ಜಾನ್ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಹಳೆಯ ಕಾನೂನುಗಳು ಮತ್ತು ಈಗಿನ ನ್ಯಾಯಶಾಸ್ತ್ರಕ್ಕೆ ಹೊಸ ಸವಾಲು ಎಸೆಯುತ್ತಿರುವ ಜಾಗತೀಕರಣದ ಹೊಸ ವಿಶ್ವ ಕ್ರಮವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು ಎಂದು ನ್ಯಾಯಮೂರ್ತಿ ಅಜಯ್ ಭಾನೋಟ್ ತಿಳಿಸಿದರು.

ವಿದೇಶಿ ಪ್ರಜೆಗಳು ಮಾಡಿದ ಕೆಲವು ಅಪರಾಧಗಳು ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕತೆಯ ಮೇಲೆ ಪರಿಣಾಮ ಬೀರುವುರಿಂದ, ಅಂತಹ ಸಮಸ್ಯೆಗಳನ್ನು ಎದುರಿಸಲು ವಿಶಾಲ ಕಾನೂನು ಚೌಕಟ್ಟಿನ ಅವಶ್ಯಕತೆಯಿದೆ ಎಂದು ಅವರು ಹೇಳಿದರು. 

 ನ್ಯಾಯಮೂರ್ತಿ ಅಜಯ್ ಭಾನೋಟ್
ನ್ಯಾಯಮೂರ್ತಿ ಅಜಯ್ ಭಾನೋಟ್

ಆದ್ದರಿಂದ, ಈ ಸಮಸ್ಯೆ ಬಗೆಹರಿಸಲು ನೀತಿ ಅಥವಾ ಕಾಯಿದೆ ರೂಪಿಸುವ ಸಾಧ್ಯತೆಯ ಬಗ್ಗೆ ವಿವಿಧ ಸಚಿವಾಲಯಗಳು ತಳೆಯುವ ನಿಲುವೇನು ಎಂಬುದನ್ನು ತಿಳಿಸುವಂತಹ ಸಂಯೋಜಿತ ಅಫಿಡವಿಟ್‌ ಸಲ್ಲಿಸುವಂತೆ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಬೇರೆ ದೇಶಗಳ ಸಮ್ಮತಿ ಪಡೆದು ಅಂತರರಾಷ್ಟ್ರಿಯ ಒಡಂಬಡಿಕೆ ಪ್ರಕ್ರಿಯೆ ಆರಂಭಿಸುವ ಸಾಧ್ಯತೆಯನ್ನು ಕೇಂದ್ರ ಪರಿಶೀಲಿಸಬಹುದು ಎಂದು ಅದು ಹೇಳಿದೆ.

ವಿವಿಧ ಅಪರಾಧಗಳಿಗಾಗಿ ಉತ್ತರ ಪ್ರದೇಶದಲ್ಲಿ ವಿಚಾರಣೆ ಎದುರಿಸುತ್ತಿರುವ ಕೆಲವು ಚೀನೀ ಪ್ರಜೆಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ನಿರ್ದಿಷ್ಟವಾಗಿ, ಜಾಮೀನು ಪ್ರಕರಣಗಳಲ್ಲಿ ಜಾಮೀನಿಗೆ ಶೂರಿಟಿ ಹಾಕುವ ವ್ಯಕ್ತಿಗಳನ್ನು ಹಾಜರುಪಡಿಸುವಲ್ಲಿ ವಿದೇಶಿ ಆರೋಪಿಗಳು ತೊಂದರೆ ಎದುರಿಸುತ್ತಿರುವ ವಿಚಾರವನ್ನು ನ್ಯಾಯಾಲಯ ಎತ್ತಿ ತೋರಿಸಿತು. 

ಈ ದೇಶದಲ್ಲಿ ಯಾವುದೇ ನಂಟು ಇಲ್ಲದೇ ಇರುವುದರಿಂದ ಜಾಮೀನಿಗೆ ಬೇಕಾದ ಅಗತ್ಯತೆಗಳನ್ನು ಈಡೇರಿಸಲು ಸಾಧ್ಯವಾಗದೆ ವಿದೇಶಿ ಪ್ರಜೆಗಳಿಗೆ ಸಂಬಂಧಿಸಿದ ಬಹುತೇಕ ಪ್ರಕರಣಗಳಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಡಿಯ ಜಾಮೀನು ಪರಿಕಲ್ಪನೆ ಅಪ್ರಸ್ತುತವಾಗಬಹುದು ಎಂದು ಅದು ಹೇಳಿದೆ.  

ಕಾನೂನು ಪ್ರಕ್ರಿಯೆ ಅರ್ಥಮಾಡಿಕೊಳ್ಳಲು ಅವರಿಗೆ ವ್ಯಾಖ್ಯಾನಕಾರರ ಕೊರತೆ ಇರುವುದನ್ನು ಮತ್ತು ರಾಯಭಾರ ಕಚೇರಿಯೊಡನೆ ಸಂಪರ್ಕ ಸಾಧಿಸಲು ಅವರಿಗೆ ಇರುವ ಸಮಸ್ಯೆಯನ್ನು ನ್ಯಾಯಾಲಯ ವಿವರಿಸಿದೆ.

"ವಕೀಲರ ನೇಮಕ, ಕಾನೂನು ನೆರವು, ತಮ್ಮ ದೇಶದಲ್ಲಿರುವ ಕುಟುಂಬಗಳೊಡನೆ ಸಂವಹನಕ್ಕೆ ಅವಕಾಶ ಕಲ್ಪಿಸುವುದು ವಿದೇಶಗರ ಕ್ರಿಮಿನಲ್‌ ವಿಚಾರಣೆಗಳಲ್ಲಿ ಇರಬೇಕಾದ ನ್ಯಾಯಸಮ್ಮತ ಅಗತ್ಯತೆಗಳಾಗಿವೆ" ಎಂದು ಅದು ಹೇಳಿದೆ.

ಇದಲ್ಲದೆ, ಜಾಮೀನು ನೀಡಿದ್ದ ಸಮಯದಲ್ಲಿ ಭಾರತದಿಂದ ತಪ್ಪಿಸಿಕೊಳ್ಳುವ ವಿದೇಶಿ ಪ್ರಜೆಗಳನ್ನು ಹಾಜರುಪಡಿಸುವಂತೆ ಒತ್ತಾಯಿಸಲು ಕಾನೂನು ಸುರಕ್ಷತಾ ಕ್ರಮ ಇಲ್ಕೊಲದಿರುವುದನ್ನು ಕೂಡ ನ್ಯಾಯಾಲಯ ಉಲ್ಲೇಖಿಸಿದೆ.

"ಭಾರತದಲ್ಲಿ ಕಾನೂನು ಮತ್ತು ನ್ಯಾಯ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ಕಾನೂನು ಒಡಂಬಡಿಕೆಗಳು ಇಲ್ಲದಿರುವುದರಿಂದ ಇಂತಹ ವಿಷಯಗಳನ್ನು ನಿರ್ಲಕ್ಷಿಸಿದರೆ ವಿದೇಶಿ ಅಪರಾಧಿಗಳಿಗೆ ಕಾನೂನು ಮುಕ್ತ ವಲಯ ಸೃಷ್ಟಿಯಾಗಬಹುದು" ಎಂದು ಅದು ಹೇಳಿದೆ.

ಭಾರತದ ಕಾನೂನಿನ ಪ್ರಕಾರ ವಿದೇಶಿ ಪ್ರಜೆಗಳನ್ನು ನ್ಯಾಯಯುತ ಮತ್ತು ಸಮಾನವಾಗಿ ನಡೆಸಿಕೊಳ್ಳುವ ವಿಧಾನದಿಂದ ಹೊರಗಿಡಲಾಗಿಲ್ಲ ಎಂದು ಗಮನಿಸಿದ ನ್ಯಾಯಾಲಯ, ಅಂತಹ ಆರೋಪಿಗಳಿಗೆ ಪ್ರಮಾಣೀಕೃತ ವ್ಯಾಖ್ಯಾನಕಾರರು ಅಥವಾ ಅನುವಾದಕರನ್ನು ಒದಗಿಸುವಂತೆ ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿತು. 

ಎಲ್ಲಾ ಆರೋಪಿಗಳು ತಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ಒತ್ತೆಯಿಟ್ಟು ಜೈಲಿನಲ್ಲಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುರ್ತಾಗಿ ಪ್ರಕರಣದತ್ತ ಗಮನ ಹರಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿತು. ಪ್ರಕರಣವನ್ನು ಏಪ್ರಿಲ್ 18ಕ್ಕೆ ಮುಂದೂಡಲಾಗಿದೆ.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Zong Hao Zhe @ Jon vs. State of UP.pdf
Preview
Kannada Bar & Bench
kannada.barandbench.com