ಕಳೆದ ವರ್ಷ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಉಲ್ಲೇಖಿಸಿದ ಏಳು ಮಸೂದೆಗಳಲ್ಲಿ ನಾಲ್ಕಕ್ಕೆ ತನ್ನ ಒಪ್ಪಿಗೆ ತಡೆ ಹಿಡಿದಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ನಿರ್ಧಾರ ಪ್ರಶ್ನಿಸಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ರಾಜ್ಯ ಸರ್ಕಾರದ ಪ್ರಕಾರ, ಏಳು ಮಸೂದೆಗಳನ್ನು ರಾಜ್ಯಪಾಲರ ಒಪ್ಪಿಗೆಗಾಗಿ 2021 ಮತ್ತು 2022ರಲ್ಲಿ ಸಲ್ಲಿಸಲಾಗಿತ್ತು. ಆದರೆ ಅವರು ಅವುಗಳನ್ನು ಕಳೆದ ವರ್ಷವಷ್ಟೇ ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಿದರು. ರಾಷ್ಟ್ರಪತಿಗಳು ಈ ತಿಂಗಳು ಕೇವಲ ಒಂದು ಮಸೂದೆಗೆ ಮಾತ್ರ ಒಪ್ಪಿಗೆ ನೀಡಿದ್ದು ನಾಲ್ಕು ಮಸೂದೆಗಳ ಒಪ್ಪಿಗೆ ತಡೆಹಿಡಿದಿದ್ದಾರೆ ಎಂದು ಹೇಳಲಾಗಿದೆ. ಒಟ್ಟು ಏಳು ಮಸೂದೆಗಳಲ್ಲಿ ಇನ್ನೂ ಎರಡರ ಬಗ್ಗೆ ಅವರು ನಿರ್ಧಾರ ಕೈಗೊಳ್ಳುವುದು ಬಾಕಿ ಇದೆ.
ಏಳು ಮಸೂದೆಗಳು ಹೀಗಿವೆ:
1. ವಿಶ್ವವಿದ್ಯಾಲಯ ಕಾನೂನುಗಳು (ತಿದ್ದುಪಡಿ) (ಸಂಖ್ಯೆ 2) ಮಸೂದೆ, 2021 - ಮಸೂದೆ ಸಂಖ್ಯೆ 50
2. ವಿಶ್ವವಿದ್ಯಾಲಯ ಕಾನೂನುಗಳು (ತಿದ್ದುಪಡಿ) ಮಸೂದೆ, 2021- ಮಸೂದೆ ಸಂಖ್ಯೆ 54
3. ಕೇರಳ ಸಹಕಾರಿ ಸಂಘಗಳ (ತಿದ್ದುಪಡಿ) ಮಸೂದೆ, 2022 - ಮಸೂದೆ ಸಂಖ್ಯೆ 110
4. ವಿಶ್ವವಿದ್ಯಾಲಯ ಕಾನೂನುಗಳು (ತಿದ್ದುಪಡಿ) ಮಸೂದೆ, 2022 - ಮಸೂದೆ ಸಂಖ್ಯೆ 132
5. ಕೇರಳ ಲೋಕಾಯುಕ್ತ ತಿದ್ದುಪಡಿ ಮಸೂದೆ, 2022 - ಮಸೂದೆ ಸಂಖ್ಯೆ 133
6. ವಿಶ್ವವಿದ್ಯಾಲಯ ಕಾನೂನುಗಳು (ತಿದ್ದುಪಡಿ) (ಸಂಖ್ಯೆ 2) ಮಸೂದೆ, 2022 - ಮಸೂದೆ ಸಂಖ್ಯೆ 149
7. ವಿಶ್ವವಿದ್ಯಾಲಯ ಕಾನೂನುಗಳು (ತಿದ್ದುಪಡಿ) (ಸಂಖ್ಯೆ 3) ಮಸೂದೆ, 2022 - ಮಸೂದೆ 150
ಅರ್ಜಿಯ ಪ್ರಕಾರ, ಎರಡು ಮಸೂದೆಗಳು ಸುಮಾರು 24 ತಿಂಗಳುಗಳಿಂದ ರಾಜ್ಯಪಾಲರ ಬಳಿ ಬಾಕಿ ಉಳಿದಿದ್ದವು. ಉಳಿದ ಏಳು ಮಸೂದೆಗಳು 16 ತಿಂಗಳುಗಳಿಂದ ರಾಜ್ಯಪಾಲರ ನಿರ್ಧಾರ ಎದುರು ನೋಡುತ್ತಿದ್ದವು.
ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಮತ್ತು ರಾಜ್ಯಪಾಲರ ಕ್ರಮ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.
ರಾಷ್ಟ್ರಪತಿಗಳು ತಮ್ಮ ಒಪ್ಪಿಗೆ ನೀಡದೆ ಇರುವುದಕ್ಕೆ ಸಂಬಂಧಿಸಿದಂತೆ ಅವರಿಗೆ ಸಲಹೆ ನೀಡುವ ಕೇಂದ್ರದ ಕ್ರಮಗಳು ಸಂವಿಧಾನದ ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾವಂತಿವೆ. ಕಾನೂನಿನ ಪ್ರಕಾರ ರಾಜ್ಯಕ್ಕೆ ವಹಿಸಲಾದ ವಿಷಯವನ್ನು ಗಂಭೀರವಾಗಿ ಅತಿಕ್ರಮಿಸಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ದೂರಿದೆ.
ಇದಲ್ಲದೆ, ನಾಲ್ಕು ಮಸೂದೆಗಳಿಗೆ ಒಪ್ಪಿಗೆ ತಡೆಹಿಡಿದಿದ್ದಕ್ಕೆ ಕಾರಣ ಏನೆಂಬುದನ್ನು ರಾಷ್ಟ್ರಪತಿಗಳು ತಿಳಿಸಿಲ್ಲ ಎಂದು ಸರ್ಕಾರ ಆರೋಪಿಸಿದೆ.
ವಿಧಾನಸಭೆ ಅಂಗೀಕರಿಸಿದ ಮಸೂದೆಗಳನ್ನು ಹಲವು ತಿಂಗಳುಗಳಿಂದ ತಮ್ಮ ಬಳಿ ಬಾಕಿ ಇರಿಸಿಕೊಂಡು ನಂತರ ರಾಷ್ಟ್ರಪತಿಗಳಿಗೆ ಕಳುಹಿಸಿದ್ದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ನಿರ್ಧಾರವನ್ನೂ ಅದು ಪ್ರಶ್ನಿಸಿದೆ.
ಖಾನ್ ಅವರ ನಿಷ್ಕ್ರಿಯತೆ "ರಾಜ್ಯ ಶಾಸಕಾಂಗದ ಕಾರ್ಯಚಟುವಟಿಕೆಯನ್ನು ಬುಡಮೇಲು ಮಾಡಿದ್ದು ತನ್ನ ಅಸ್ತಿತ್ವವನ್ನು ನಿರುಪಯುಕ್ತಗೊಳಿಸಿದೆ" ಎಂದು ಸರ್ಕಾರ ದೂರಿದೆ.
ಮಸೂದೆಗಳನ್ನು ಹಲವು ತಿಂಗಳುಗಳ ಬಳಿಕ ತಾನು ಶಿಫಾರಸು ಮಾಡಿರುವ ವಿಚಾರವನ್ನು ರಾಜ್ಯಪಾಲರು ರಾಷ್ಟ್ರಪತಿಗಳಿಗೆ ತಿಳಿಸಿಲ್ಲ. ಇದು ಸಂವಿಧಾನದ 200ನೇ ವಿಧಿಯ ಉಲ್ಲಂಘನೆ ಎಂದು ಸರ್ಕಾರ ಹೇಳಿದೆ.
ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡಲು ರಾಜ್ಯಪಾಲ ಖಾನ್ ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ಕೇರಳ ಸರ್ಕಾರ ಕಳೆದ ವರ್ಷ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಈ ಹಿಂದೆ ಪಂಜಾಬ್, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯ ಸರ್ಕಾರಗಳು ಕೂಡ ಇದೇ ರೀತಿಯ ಅರ್ಜಿ ಸಲ್ಲಿಸಿದ್ದವು.