ಮುಲ್ಲಪೆರಿಯಾರ್ ಅಣೆಕಟ್ಟನ್ನು ಬಲಪಡಿಸುವ ತನ್ನ ಪ್ರಯತ್ನಗಳನ್ನು ಕೇರಳ ರಾಜ್ಯವು ವಿಫಲಗೊಳಿಸುತ್ತಿದೆ ಎಂದು ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ಡಾ. ಜೋ ಜೋಸೆಫ್ ವರ್ಸಸ್ ತಮಿಳುನಾಡು ಸರ್ಕಾರ].
ಬಹುಮುಖ್ಯವಾಗಿ ತಮಿಳುನಾಡು ಸರ್ಕಾರವು, "ಮುಲ್ಲಪೆರಿಯಾರ್ ಅಣೆಕಟ್ಟು ಸುರಕ್ಷಿತವಾಗಿದ್ದು ಕೇಂದ್ರ ಜಲ ಆಯೋಗವು ಹೇಳಿರುವಂತೆ ಅದನ್ನು ಹೊಸದಾಗಿ ಪರಿಶೀಲಿಸಬೇಕಾದ ಅಗತ್ಯವಿಲ್ಲ ಎಂದಿದೆ. ಅಣೆಕಟ್ಟಿನಲ್ಲಿ ಯಾವುದೇ ನ್ಯೂನತೆಯಾಗಲಿ, ಅಸಹಜತೆಯಾಗಲಿ ಇಲ್ಲ. ಇನ್ನು ಅಣೆಕಟ್ಟಿನಲ್ಲಿ ತುಂಬಿರುವ ಹೂಳು ಸಹ ಮಿತಪ್ರಮಾಣದಲ್ಲಿಯೇ ಇದೆ. ಈ ಜಲವರ್ಷದಲ್ಲಿ +142 ಅಡಿ ನೀರನ್ನು ಸುಮಾರು 18 ದಿನಗಳ ಕಾಲ ಶೇಖರಿಸಲಾಗಿತ್ತು. ಅಣೆಕಟ್ಟಿನ ಎಲ್ಲ ಮಾನದಂಡಗಳು ನಿಗದಿತ ಪರಿಮಿತಿಯಲ್ಲಿವೆ" ಎಂದು ತನ್ನ ಪ್ರತಿಕ್ರಿಯೆಯಲ್ಲಿ ತಮಿಳುನಾಡು ತಿಳಿಸಿದೆ.
ಹಾಗಾಗಿ, ಕೇಂದ್ರ ಜಲ ಆಯೋಗ/ಮೇಲುಸ್ತವಾರಿ ಸಮಿತಿ ಅಥವಾ ಅದರ ಅಂಗಗಳು ಅಣೆಕಟ್ಟಿನ ಸುರಕ್ಷತೆಯ ತಪಾಸಣೆಯನ್ನು ಸುಪ್ರೀಂ ಕೋರ್ಟ್ ಈ ಹಿಂದೆ 2006 ಹಾಗೂ 2014ರಲ್ಲಿ ಅಣೆಕಟ್ಟಿನ ಸುರಕ್ಷತೆಗಾಗಿ ಸೂಚಿಸಿದ್ದ ಬಾಕಿ ಕೆಲಸಗಳು ಪೂರ್ಣಗೊಂಡ ನಂತರವಷ್ಟೇ ನಡೆಸಲು ಸೂಚಿಸಬೇಕು ಎಂದು ಕೋರಿದೆ.
ಹೆಚ್ಚಿನ ವಿವರಗಳಿಗೆ 'ಬಾರ್ ಅಂಡ್ ಬೆಂಚ್' ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.