ಕೆಜಿಎಫ್‌-2 ಕೃತಿಸ್ವಾಮ್ಯ ಉಲ್ಲಂಘನೆ: ರಾಹುಲ್‌ ಗಾಂಧಿ ಸೇರಿ ಮೂವರ ವಿರುದ್ಧದ ಎಫ್‌ಐಆರ್‌ ವಜಾ ಮಾಡಲು ಹೈಕೋರ್ಟ್‌ ನಕಾರ

ಬೆಂಗಳೂರಿನ ಯಶವಂತಪುರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 120ಬಿ, 403, 465 ಜೊತೆಗೆ 34ರ ಅಡಿ ಹಾಗೂ ಹಕ್ಕುಸ್ವಾಮ್ಯ ಕಾಯಿದೆ ಸೆಕ್ಷನ್‌ 63 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ 66ರ ಅಡಿ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆ ಮುಂದುವರಿಯಲಿದೆ.
Karnataka HC and Rahul Gandhi, Jairam Ramesh, Supriya Shrinate
Karnataka HC and Rahul Gandhi, Jairam Ramesh, Supriya Shrinate

ಭಾರತ್ ಜೋಡೋ ಯಾತ್ರೆಯ ಪ್ರಚಾರ ವಿಡಿಯೋಗೆ ಕೆಜಿಎಫ್‌-2 ಕನ್ನಡ ಸಿನಿಮಾದ ಮುದ್ರಿತ ಸಂಗೀತವನ್ನು ಬಳಕೆ ಮಾಡುವ ಮೂಲಕ ಕೃತಿಚೌರ್ಯ ಎಸಗಲಾಗಿದೆ ಎಂದು ಆರೋಪಿಸಿ ಎಂಆರ್‌ಟಿ ಮ್ಯೂಸಿಕ್‌ ಸಂಸ್ಥೆಯು ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಜೈರಾಮ್‌ ರಮೇಶ್‌ ಮತ್ತು ಸುಪ್ರಿಯಾ ಶ್ರೀನಾಥೆ ಅವರ ವಿರುದ್ಧ ಬೆಂಗಳೂರಿನ ಯಶವಂತಪುರ ಠಾಣೆಯಲ್ಲಿ ದಾಖಲಿಸಿರುವ ಎಫ್‌ಐಆರ್‌ ವಜಾ ಮಾಡಲು ಕರ್ನಾಟಕ ಹೈಕೋರ್ಟ್‌ ಬುಧವಾರ ನಿರಾಕರಿಸಿದೆ.

ಕಾಂಗ್ರೆಸ್‌ ಮುಖಂಡರು ಸಲ್ಲಿಸಿದ್ದ ಅರ್ಜಿ ವಿಚಾರಣೆಯವನ್ನು ಗುರುವಾರ ನಡೆಸಿ, ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

“ಅರ್ಜಿದಾರರು ಅನುಮತಿ ಪಡೆಯದೇ ಸೋರ್ಸ್‌ ಕೋಡ್‌ ತಿರುಚಿದ್ದು (ಟ್ಯಾಂಪರ್‌), ಅದನ್ನು ಬಳಕೆ ಮಾಡಿರುವುದು ಅನುಮಾನಕ್ಕೆ ಆಸ್ಪದವಿಲ್ಲದೆ ದೂರುದಾರರ ಕೃತಿಸ್ವಾಮ್ಯದ ಉಲ್ಲಂಘನೆಗೆ ಸಮನಾಗಿದೆ. ಅರ್ಜಿದಾರರು ದೂರುದಾರರ ಕೃತಿಸ್ವಾಮ್ಯವನ್ನು ಲಘುವಾದ ರೀತಿಯಲ್ಲಿ ಬಳಕೆ ಮಾಡಿದ್ದು, ಇದು ಮೇಲ್ನೋಟಕ್ಕೆ ಸಾಕ್ಷ್ಯ ಪರಿಶೀಲಿಸಬೇಕಾದ ಪ್ರಕರಣವಾಗಿದ್ದು, ತನಿಖೆಯಿಂದ ಹೊರಬರಬೇಕಿದೆ. ಹೀಗಾಗಿ, ಅರ್ಜಿ ವಜಾ ಮಾಡಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ದೂರುದಾರರ ಪರ ವಕಾಲತ್ತು ಹಾಕಿದ್ದ ವಕೀಲ ಪವನ್‌ ಕುಮಾರ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್‌ ಶ್ರೀರಂಗ ಅವರು “ಅರ್ಜಿದಾರರು ಕೆಜಿಎಫ್‌ 2 ಹಾಡಿನ ಬಳಕೆ ಮಾಡುವ ಮೂಲಕ ಹಕ್ಕುಸ್ವಾಮ್ಯ ಕಾಯಿದೆ ಉಲ್ಲಂಘಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಸಿವಿಲ್‌ ದಾವೆ ಹೂಡಿ, ಪ್ರತಿಬಂಧಕಾದೇಶವನ್ನೂ ಪಡೆದುಕೊಳ್ಳಲಾಗಿದೆ. ಇದು ಕ್ರಿಮಿನಲ್‌ ಅಪರಾಧ ಪ್ರಕರಣವಾಗಿರುವುದರಿಂದ ತನಿಖೆ ನಡೆಯಬೇಕು. ಹಕ್ಕು ಸ್ವಾಮ್ಯ ಕಾಯಿದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಸಿವಿಲ್‌ ಮತ್ತು ಕ್ರಿಮಿನಲ್‌ ಎರಡೂ ರೂಪದಲ್ಲಿ ಪರಿಹಾರ ಪಡೆಯಲು ಅವಕಾಶವಿದೆ” ಎಂದು ವಾದಿಸಿದ್ದರು.

ಅರ್ಜಿದಾರರ ಪರವಾಗಿ ವಕಾಲತ್ತು ಹಾಕಿದ್ದ ವಕೀಲೆ ಲೀಲಾ ದೇವಾಡಿಗ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ವಿಕ್ರಂ ಹುಯಿಲಗೋಳ ಅವರು “ಕೃತಿಸ್ವಾಮ್ಯ ಕಾಯಿದೆ ಸೆಕ್ಷನ್‌ 63ರ ಅಡಿ ಅಪರಾಧ ಎನಿಸಲು ಆರೋಪಿಯು ಉದ್ದೇಶಪೂರ್ವಕವಾಗಿ ಹಕ್ಕುಸ್ವಾಮ್ಯ ಉಲ್ಲಂಘಿಸಬೇಕು. ಆದರೆ, ಹಾಲಿ ಪ್ರಕರಣದಲ್ಲಿ ಆ ಉದ್ದೇಶವಿಲ್ಲ. ಇದಲ್ಲದೇ ಅರ್ಜಿದಾರರು ಯಾವುದೇ ರೀತಿಯಲ್ಲಿ ಹಕ್ಕುಸ್ವಾಮ್ಯ ಉಲ್ಲಂಘನೆಯಿಂದ ಆರ್ಥಿಕ ಲಾಭ ಪಡೆದಿಲ್ಲ” ಎಂದು ವಾದಿಸಿದ್ದರು.

“ನಾನು ಹಕ್ಕುಸ್ವಾಮ್ಯ ಉಲ್ಲಂಘಿಸಿ ನಗದು ಸಂಪಾದಿಸಿದ್ದೇನೆ ಎಂಬುದು ಆರೋಪವಲ್ಲ. ಹಕ್ಕುಸ್ವಾಮ್ಯ ಕಾಯಿದೆಯ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಅದರಿಂದ ನನಗೆ ಯಾವುದೇ ಲಾಭವಾಗಿಲ್ಲ” ಎಂದಿದ್ದರು.

2022ರ ಡಿಸೆಂಬರ್‌ 16ರಂದು ಎಫ್‌ಐಆರ್‌ಗೆ ತಡೆ ನೀಡಿ ಕರ್ನಾಟಕ ಹೈಕೋರ್ಟ್‌ ಆದೇಶಿಸಿತ್ತು.

Also Read
ಕೆಜಿಎಫ್‌-2 ಕೃತಿಸ್ವಾಮ್ಯ ಉಲ್ಲಂಘನೆ: ಕಾಂಗ್ರೆಸ್‌ ನಾಯಕರ ವಿರುದ್ಧದ ಎಫ್‌ಐಆರ್‌; ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಕೆಜಿಎಫ್‌-2 ಸಿನಿಮಾದ ಮುದ್ರಿತ ಗೀತೆಯನ್ನು ಭಾರತ್‌ ಜೋಡೊ ಯಾತ್ರೆಯಲ್ಲಿ ಬಳಕೆ ಮಾಡುವ ಮೂಲಕ ಕೃತಿಸ್ವಾಮ್ಯ ಮಾಡಲಾಗಿದೆ ಎಂದು ಎಂಆರ್‌ಟಿ ಮ್ಯೂಸಿಕ್‌ ಬೆಂಗಳೂರಿನ ವಿಚಾರಣಾಧೀನ ನ್ಯಾಯಾಲಯದಲ್ಲಿ ಮೂಲ ವಾಣಿಜ್ಯ ದಾವೆ ಹೂಡಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣಾಧೀನ ನ್ಯಾಯಾಲಯವು ಕಾಂಗ್ರೆಸ್‌ ಅದನ್ನು ಬಳಕೆ ಮಾಡದಂತೆ ನಿರ್ಬಂಧ ಹೇರಿತ್ತು. ಇದರ ಆಧಾರದ ಮೇಲೆ ಯಶವಂತಪುರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 120ಬಿ, 403, 465 ಜೊತೆಗೆ 34ರ ಅಡಿ ಹಾಗೂ ಹಕ್ಕುಸ್ವಾಮ್ಯ ಕಾಯಿದೆ ಸೆಕ್ಷನ್‌ 63 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ 66ರ ಅಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನು ವಜಾ ಮಾಡಬೇಕು ಎಂದು ಕಾಂಗ್ರೆಸ್‌ ನಾಯಕರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದನ್ನು ಈಗ ಹೈಕೋರ್ಟ್‌ ವಜಾ ಮಾಡಿದೆ.

Related Stories

No stories found.
Kannada Bar & Bench
kannada.barandbench.com