ನ್ಯಾಯಮೂರ್ತಿ ವಿರುದ್ಧ ಕೇರಳ ಹೈಕೋರ್ಟ್‌ ವಕೀಲರ ಸಂಘ ದೂರು: ನ್ಯಾಯಾಲಯ ಕಲಾಪಗಳ ವಿಡಿಯೋ ರೆಕಾರ್ಡಿಂಗ್‌ಗೆ ಆಗ್ರಹ

ನ್ಯಾಯಾಲಯದ ಎಲ್ಲಾ ವಿಚಾರಣೆಗಳನ್ನು ಅದು ವೀಡಿಯೊ ಚಿತ್ರೀಕರಣ ಮಾಡುವವರೆಗೆ ತಾವೇ ಆ ಕೆಲಸ ಮಾಡುವಂತೆ ತನ್ನ ಸದಸ್ಯರಿಗೆ ಸಂಘ ಸಲಹೆ ನೀಡಿದೆ.
ಕೇರಳ ಹೈಕೋರ್ಟ್ ವಕೀಲರ ಸಂಘ (ಕೆಎಚ್‌ಸಿಎಎ) ಮತ್ತು ಕೇರಳ ಹೈಕೋರ್ಟ್
ಕೇರಳ ಹೈಕೋರ್ಟ್ ವಕೀಲರ ಸಂಘ (ಕೆಎಚ್‌ಸಿಎಎ) ಮತ್ತು ಕೇರಳ ಹೈಕೋರ್ಟ್

ವಕೀಲರ ಅನಾರೋಗ್ಯದ ಹೊರತಾಗಿಯೂ ಪ್ರಕರಣ ಮುಂದೂಡಲು ನಿರಾಕರಿಸಿದ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಎ. ಬದರುದ್ದೀನ್ ಅವರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿ ಕೇರಳ ಉಚ್ಚ ನ್ಯಾಯಾಲಯ ವಕೀಲರ ಸಂಘ (ಕೆಎಚ್‌ಸಿಎಎ) ಶುಕ್ರವಾರ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ ಜೆ ದೇಸಾಯಿ ಅವರಿಗೆ ಪತ್ರ ಬರೆದಿದೆ.

ಬೆನ್ನಿಗೆ ಗಂಭೀರ ಗಾಯವಾಗಿದ್ದರೂ ವಕೀಲ ಜಯಕುಮಾರ್ ನಂಬೂದಿರಿ ಟಿವಿ ಅವರು ವಾದಿಸುತ್ತಿದ್ದ ಪ್ರಕರಣ ಮುಂದೂಡಲು ನ್ಯಾ. ಬದರುದ್ದೀನ್‌ ಅವರು ನಿರಾಕರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವಿವಿಧ ವಕೀಲರು ಇದು ಅಪಮಾನಕರ ಮತ್ತು ಸಂವೇದನಾರಹಿತವಾಗಿದೆ ಎಂದು ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.

ವಕೀಲ ಸಮುದಾಯ ಮತ್ತು ನ್ಯಾಯಿಕ ವರ್ಗಗಳೆರಡರ ಸಭ್ಯತೆ ಮೀರಿದ ವರ್ತನೆಯನ್ನು ನಿಗ್ರಹಿಸುವುದಕ್ಕಾಗಿ ನ್ಯಾಯಾಲಯದ ಎಲ್ಲಾ ಕಲಾಪಗಳನ್ನು ಕಡ್ಡಾಯವಾಗಿ ವೀಡಿಯೊ ರೆಕಾರ್ಡಿಂಗ್‌ ಮಾಡುವಂತೆ ಕೆಎಸ್‌ಸಿಎಎ ಮುಖ್ಯ ನ್ಯಾಯಮೂರ್ತಿಯವರನ್ನು ಒತ್ತಾಯಿಸಿತು.

ಅದು ಸಾಧ್ಯವಾಗುವವರೆಗೆ ತಾವೇ ವೀಡಿಯೊ ಚಿತ್ರೀಕರಣ ಮಾಡುವಂತೆ ತನ್ನ ಸದಸ್ಯರಿಗೆ ಸಂಘ ಸಲಹೆ ನೀಡಿದೆ.

ಗಂಭೀರ ಬೆನ್ನು ನೋವಿಗೆ ತುತ್ತಾಗಿರುವ ತಾವು ವೈದ್ಯರನ್ನು ಭೇಟಿಯಾಗಬೇಕಿದೆ ಎಂದು ವಿನಂತಿಸಿದರೂ ಪ್ರಕರಣ ಮುಂದೂಡಲು ನಿರಾಕರಿಸಿದ್ದಾರೆ ಎಂದು ವಕೀಲ ನಂಬೂದರಿ ಅವರು ನೀಡಿದ ದೂರಿನಿಂದಾಗಿ ಕೆಎಚ್‌ಸಿಎಎ ಸಿಜೆ ಅವರಿಗೆ ಪತ್ರ ಬರೆದಿದೆ.

ಈ ಘಟನೆಯಿಂದ ವಕೀಲ ಸಮುದಾಯ ಕೋಪಗೊಂಡಿದೆ ಎಂದು ಕೆಎಚ್‌ಸಿಎಎ ಹೇಳಿದೆ.

Kannada Bar & Bench
kannada.barandbench.com