[ಅಪಹರಣ ಪ್ರಕರಣ] ರೇವಣ್ಣಗೆ ಜಾಮೀನು ನೀಡಿದರೆ ಸಂತ್ರಸ್ತರಿಗೆ ಬೆದರಿಕೆ ಸಾಧ್ಯತೆ: ಪ್ರಾಸಿಕ್ಯೂಷನ್‌ ಪ್ರಬಲ ವಾದ

ಸುಮಾರು ಎರಡೂವರೆ ತಾಸು ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಪ್ರಾಸಿಕ್ಯೂಷನ್‌ ಕೋರಿಕೆಯ ಮೇರೆಗೆ ಮೇ 13ಕ್ಕೆ ವಿಚಾರಣೆ ಮುಂದೂಡಿದೆ. ಅಂದು ಎಎಸ್‌ಪಿಪಿ ಜಯ್ನಾ ಅವರು ವಾದ ಮುಂದುವರಿಸಲಿದ್ದಾರೆ.
H D Revanna
H D Revanna

“ಅಪಹರಣದ ಆರೋಪ ಹೊತ್ತಿರುವ ಶಾಸಕ ರೇವಣ್ಣನವರ ಕುಟುಂಬ ರಾಜಕೀಯವಾಗಿ ಪ್ರಭಾವಿಯಾಗಿದೆ. ಅವರಿಗೆ ಜಾಮೀನು ದೊರೆತರೆ ‍ಪ್ರಕರಣದಲ್ಲಿನ ಸಂತ್ರಸ್ತೆಯರಿಗೆ ಬೆದರಿಕೆಯೊಡ್ಡುವ ಸಾಧ್ಯತೆ ಇದೆ” ಎಂದು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕಿ ಜಯ್ನಾ ಕೊಠಾರಿ ಗುರುವಾರ ರೇವಣ್ಣ ಜಾಮೀನಿಗೆ ವಿರೋಧಿಸಿದರು.

ಜೆಡಿಎಸ್‌ ಮಾಜಿ ಸಚಿವ ಎಚ್‌ ಡಿ ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ನಡೆಸಿದರು.

ಪ್ರಾಸಿಕ್ಯೂಷನ್‌ ಪರ ವಾದಿಸಿದ ಜಯ್ನಾ ಕೊಠಾರಿ ಅವರು “ಆರೋಪಿ ರೇವಣ್ಣ ನೀಡಿದ್ದ ಸೂಚನೆಯ ಪ್ರಕಾರವೇ ಮಹಿಳೆಯನ್ನು ಒತ್ತಾಯಪೂರ್ವಕವಾಗಿ ಒತ್ತೆಯಾಳಾಗಿ ಇರಿಸಲಾಗಿತ್ತು. ಸಾಕ್ಷಿಗಳ ಹೇಳಿಕೆಯಲ್ಲಿಯೂ ರೇವಣ್ಣ ಹೆಸರು ಉಲ್ಲೇಖವಾಗಿದೆ. ಇದು ಸ್ಪಷ್ಟವಾಗಿ ಅಪಹರಣದ ಪ್ರಕರಣವಾಗಿದ್ದು, ಐಪಿಸಿ ಸೆಕ್ಷನ್‌ 364ಎ ಅನ್ವಯ ಆಗುತ್ತದೆ” ಎಂದರು. 

“ರೇವಣ್ಣ ಅವರ ಪುತ್ರ ಪ್ರಜ್ವಲ್ ಹಲವು ಪ್ರಕರಣಗಳಲ್ಲಿ ಆರೋಪಿ ಆಗಿದ್ದಾರೆ. ಈಗಾಗಲೇ ಆತ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಅವರ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ. ಪ್ರಕರಣದಲ್ಲಿ ಇನ್ನೂ ಸಾಕಷ್ಟು ಸಂತ್ರಸ್ತ ಮಹಿಳೆಯರಿದ್ದು, ರೇವಣ್ಣಗೆ ಜಾಮೀನು ನೀಡಿದರೆ ಇವರ ಮೇಲೆ‌ ಪ್ರಭಾವ ಬೀರುವ ಸಾಧ್ಯತೆ ಇದೆ. ಇದರಿಂದ ಅವರೆಲ್ಲರೂ ಮುಕ್ತವಾಗಿ ಸಾಕ್ಷ್ಯ ನುಡಿಯಲು ಸಾಧ್ಯವಿಲ್ಲ. ಹೀಗಾಗಿ, ಈ ಪ್ರಕರಣದಿಂದ ಲೈಂಗಿಕ ದೌರ್ಜನ್ಯ ಎಸಗುವವರಿಗೆ ಸ್ಪಷ್ಟ ಸಂದೇಶ ರವಾನಿಸಬೇಕಿದೆ” ಎಂದು ಮನವಿ ಮಾಡಿದರು.

ಇದಕ್ಕೂ ಮುನ್ನ ವಾದಿಸಿದ್ದ ರೇವಣ್ಣ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ರೇವಣ್ಣ ವಿರುದ್ಧ ದಾಖಲಿಸಿರುವ ಪ್ರಕರಣ ಸಂಪೂರ್ಣ ರಾಜಕೀಯ ದುರುದ್ದೇಶದಿಂದ ಕೂಡಿದೆ. ಅವರ ವಿರುದ್ಧ ಈತನಕ ಒಂದೇ ಒಂದು ಸಾಕ್ಷಿಯೂ ದೊರೆತಿಲ್ಲ. ಚುನಾವಣೆ ವೇಳೆ ಎಫ್ಐಆರ್ ದಾಖಲಿಸಲಾಗಿದೆ. ಇದು ಕೇವಲ ರಾಜಕೀಯ ದುರುದ್ದೇಶದಿಂದ ಕೂಡಿದ ಪ್ರಕರಣ. ಎಫ್ಐಆರ್ ಕೂಡಾ ಸರಿಯಾದ ಕ್ರಮದಲ್ಲಿ ಇಲ್ಲ. ಅಷ್ಟಕ್ಕೂ ಎಸ್ಐಟಿ ತನಿಖೆಯಲ್ಲಿ ಯಾವ ಪ್ರಗತಿ ಸಾಧಿಸಲಾಗಿದೆ” ಎಂದು ಪ್ರಶ್ನಿಸಿದರು.

Also Read
ಪ್ರಜ್ವಲ್‌ ಲೈಂಗಿಕ ಹಗರಣ: ಕಾರ್ತಿಕ್‌ ಸೇರಿ ನಾಲ್ವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಹಾಸನ ನ್ಯಾಯಾಲಯ

“ರೇವಣ್ಣ ಅವರು ನಿರೀಕ್ಷಣಾ ಜಾಮೀನು ಅರ್ಜಿಯನ್ನು ಅಪಹರಣಕ್ಕೆ ಒಳಗಾಗಿದ್ದಾಳೆ ಎನ್ನಲಾದ ಮಹಿಳೆಯ ಸುರಕ್ಷತೆ ಬಗ್ಗೆ ಪ್ರಸ್ತಾಪಿಸಿ ನಿರಾಕರಿಸಲಾಗಿತ್ತು. ಆದರೆ, ನಿರೀಕ್ಷಣಾ ಜಾಮೀನು ನಿರಾಕರಿಸಿದ ದಿನವೇ ಸಂತ್ರಸ್ತ ಮಹಿಳೆ‌ ಪತ್ತೆಯಾಗಿದ್ದಾರೆ. ಅಪಹರಣ ಎಂದರೆ, ಬಲವಂತದಿಂದ ಮೋಸ‌ ಮಾಡಿ ಕರೆದೊಯ್ಯುವುದು. ಆದರೆ, ಇಲ್ಲಿ ಅಂಥ ಕೆಲಸ ನಡೆದಿಲ್ಲ” ಎಂದು ವಿವರಿಸಿದರು. 

ಸುಮಾರು ಎರಡೂವರೆ ತಾಸು-ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು ಪ್ರಾಸಿಕ್ಯೂಷನ್‌ ಕೋರಿಕೆಯ ಮೇರೆಗೆ ಮೇ 13ಕ್ಕೆ ವಿಚಾರಣೆ ಮುಂದೂಡಿದೆ. ಅಂದು ಜಯ್ನಾ ಅವರು ವಾದ ಮುಂದುವರಿಸಲಿದ್ದಾರೆ.

Related Stories

No stories found.
Kannada Bar & Bench
kannada.barandbench.com