ತಂದೆಯ ವ್ಯವಹಾರ ಪಾಲುದಾರನಿಂದ ಅಪಹರಣದ ಬೆದರಿಕೆ: ಮದುಮಗಳ ರಕ್ಷಣೆ ಕೋರಿಕೆಗೆ ಹೈಕೋರ್ಟ್‌ ಅಸ್ತು

ಮದುವೆ ಸಂದರ್ಭದಲ್ಲಿ ಸೂಕ್ತ ಭದ್ರತೆ ಒದಗಿಸುವುದಾಗಿ ಕೆಂಗೇರಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಭರವಸೆ ನೀಡಿದ್ದಾರೆ. ಅದರಂತೆ ಇನ್ಸ್‌ಪೆಕ್ಟರ್ ತಮ್ಮ ಭರವಸೆಗೆ ಬದ್ಧವಾಗಿರಬೇಕು ಎಂದು ನಿರ್ದೇಶಿಸಿರುವ ನ್ಯಾಯಾಲಯ.
Karntaka HC and Justice N S Sanjay Gowda
Karntaka HC and Justice N S Sanjay Gowda

ವ್ಯಕ್ತಿಯೊಬ್ಬರು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮೇ 9 ಮತ್ತು 10ರಂದು ನಡೆಯುಲಿರುವ ಯುವತಿಯೊಬ್ಬರ ಮದುವೆಗೆ ಭದ್ರತೆ ಕಲ್ಪಿಸುವಂತೆ ಕೆಂಗೇರಿ ಠಾಣೆ ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರ್ದೇಶಿಸಿದೆ.

ತನ್ನ ಮದುವೆಗೆ ಭದ್ರತೆ ಕಲ್ಪಿಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ನಗರದ ಯುವತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎನ್ ಎಸ್ ಸಂಜಯ ಗೌಡ ಅವರ ನೇತೃತ್ವದ ರಜಾಕಾಲೀನ ಏಕಸದಸ್ಯ ಪೀಠ ನಡೆಸಿತು.

ಅರ್ಜಿದಾರೆಯ ಮದುವೆ ನಗರದ ಹೋಟೆಲ್‌ವೊಂದರಲ್ಲಿ ಮೇ 9 ಮತ್ತು 10ರಂದು ನಡೆಯಲಿದೆ. ತಂದೆಯ ವ್ಯಾಪಾರದಲ್ಲಿ ಪಾಲುದಾರನಾದ ಕೆ ಶಿವರಾಜ್ ಗೌಡ ಎಂಬುವರು ಹಣಕಾಸು ವಿವಾದವನ್ನು ಮುಂದಿಟ್ಟುಕೊಂಡು ತನ್ನ ಮದುವೆ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅರ್ಜಿದಾರೆ ಆತಂಕ ವ್ಯಕ್ತಪಡಿಸಿದ್ದರು. ಮದುವೆ ಸಂದರ್ಭದಲ್ಲಿ ಸೂಕ್ತ ಭದ್ರತೆ ಒದಗಿಸುವುದಾಗಿ ಕೆಂಗೇರಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಭರವಸೆ ನೀಡಿದ್ದಾರೆ. ಅದರಂತೆ ಇನ್ಸ್‌ಪೆಕ್ಟರ್ ತಮ್ಮ ಭರವಸೆಗೆ ಬದ್ಧವಾಗಿರಬೇಕು ಎಂದು ನಿರ್ದೇಶಿಸಿದ ನ್ಯಾಯಾಲಯವು ಅರ್ಜಿ ಇತ್ಯರ್ಥಪಡಿಸಿದೆ.

ವಿಚಾರಣೆ ವೇಳೆ ಅರ್ಜಿದಾರೆಯ ಪರ ವಕೀಲ ಡಿ ಮೋಹನ್ ಕುಮಾರ್ ಅವರು ಶಿವರಾಜ್ ಗೌಡ ಅವರು 2014ರಿಂದ ಅರ್ಜಿದಾರೆಯ ತಂದೆ ಜೊತೆಗೆ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಹಣಕಾಸು ವಿಚಾರವಾಗಿ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದರಿಂದ ಶಿವರಾಜ್ ಗೌಡ, ಅರ್ಜಿದಾರೆಯ ಮನೆಗೆ ಬಂದು ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಅರ್ಜಿದಾರೆಯ ನಕಲಿ ಪೋಟೊಗಳನ್ನು ವರನ ಕಡೆಯವರಿಗೆ ತೋರಿಸಿ ಮದುವೆ ನಿಲ್ಲಿಸಲಾಗುವುದು ಮತ್ತು ಕಲ್ಯಾಣ ಮಂಟಪದಿಂದಲೇ ಅರ್ಜಿದಾರೆಯನ್ನು ಅಪಹರಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಶಿವರಾಜ್ ಗೌಡ ಉದ್ದೇಶವನ್ನು ತಿಳಿದು ಅರ್ಜಿದಾರೆಯು ಮೇ 9 ಮತ್ತು 10ರಂದು ಮದುವೆ ನಡೆಯುವಾಗ ಭದ್ರತೆ ಕಲ್ಪಿಸುವಂತೆ ಕೋರಿ ಮೇ 1ರಂದು ಕೆಂಗೇರಿ ಠಾಣಾ ಪೊಲೀಸರಿಗೆ ಕೋರಿದ್ದರು. ಆ ಮನವಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.

ಸರ್ಕಾರಿ ವಕೀಲರು ಪ್ರಕರಣದ ಕುರಿತು ಕೆಂಗೇರಿ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಮೇ 4ರಂದು ಬರೆದ ಪತ್ರವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಮೇ 9 ಮತ್ತು 10ರಂದು ಠಾಣಾ ವ್ಯಾಪ್ತಿಯಲ್ಲಿ ಎರಡು ಹೊಯ್ಸಳ ವಾಹನವನ್ನು ಗಸ್ತಿಗೆ ನಿಯೋಜಿಸಲಾಗಿರುತ್ತದೆ. ಒಂದು ವೇಳೆ ವಿವಾಹ ನಡೆಯುವಾಗ ಯಾವುದೇ ವ್ಯಕ್ತಿಯಿಂದ ತೊಂದರೆಯಾದರೆ ತಕ್ಷಣವೇ 112 ಸಂಖ್ಯೆಗೆ ಕರೆ ಮಾಡಬಹುದು. ಆಗ ಹೊಯ್ಸಳ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಸೂಕ್ತ ಕ್ರಮ ಜರುಗಿಸುತ್ತಾರೆ ಎಂಬುದಾಗಿ ಪತ್ರದಲ್ಲಿ ತಿಳಿಸಲಾಗಿದೆ ಎಂದು ವಿವರಿಸಿದರು.

ವಾದ-ಪ್ರತಿವಾದ ಪರಿಗಣಿಸಿದ ಪೀಠವು ಪೊಲೀಸ್ ಇನ್ಸ್‌ಪೆಕ್ಟರ್ ತಮ್ಮ ಭರವಸೆಯಂತೆ ಅರ್ಜಿದಾರೆಯ ಮದುವೆಗೆ ಭದ್ರತೆ ಕೊಡಬೇಕು ಎಂದು ನಿರ್ದೇಶಿಸಿತು.

Kannada Bar & Bench
kannada.barandbench.com