

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಜಾರಿಗೊಳಿಸಲಾಗಿರುವ ನೂರು ಕಾಯಿದೆಗಳ ವಿಶ್ಲೇಷಣೆ, ಮೌಲ್ಯಮಾಪನ ಒಳಗೊಂಡ “ನೂರು ಕಾನೂನು: ನೂರು ಅಭಿಮತಗಳು” ಎಂಬ ಮೂರು ಸಂಪುಟಗಳನ್ನು ರಾಜ್ಯ ಕಾನೂನು ಇಲಾಖೆಯ ನೆರವಿನೊಂದಿಗೆ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯು (ಕೆಐಎಲ್‌ಪಿಎಆರ್-ಕಿಲ್ಪಾರ್) ಈಚೆಗೆ ಹೊರತಂದಿದೆ. ದೇಶದಲ್ಲಿ ಇಂಥದ್ದೊಂದು ಮಹತ್ವ ಪೂರ್ಣ ಪ್ರಯತ್ನ ಕರ್ನಾಟಕದಲ್ಲಿ ನಡೆದಿದೆ.
ಕರ್ನಾಟಕ ವಿಧಾನಸಭೆಯು 20.5.2023ರಿಂದ ಇಲ್ಲಿಯವರೆಗೆ ನೂರಕ್ಕೂ ಹೆಚ್ಚು ಕಾನೂನುಗಳನ್ನು ಜಾರಿಗೊಳಿಸಿದ್ದು, 2024ರಲ್ಲಿ ರಾಜ್ಯ ವಿಧಾನಸಭೆಯು 49 ಕಾನೂನುಗಳನ್ನು ರೂಪಿಸಿದೆ. ಈ ವಿಚಾರದಲ್ಲಿ ದೇಶದ ಸರಾಸರಿಯು 17 ಮಾತ್ರ ಎಂದು ಪಿಆರ್‌ಎಸ್ ಇಂಡಿಯಾ ತನ್ನ ವರದಿಯಲ್ಲಿ ಹೇಳಿದೆ.
ʼನೂರು ಕಾನೂನು: ನೂರು ಅಭಿಮತʼ ರೂಪಿಸಲು ಕಿಲ್ಪಾರ್ ವಕೀಲರು, ಶಿಕ್ಷಣ ತಜ್ಞರ ನೆರವು ಪಡೆದಿದ್ದು, ಅವರಿಂದ 100 ಕಾಯಿದೆಗಳ ಮೇಲೆ ವಿಶ್ಲೇಷಣೆ, ಮೌಲ್ಯಮಾಪನ ಬರೆಸಲಾಗಿದೆ. 50 ವಕೀಲರು, ಶಿಕ್ಷಣ ತಜ್ಞರು 100 ಕಾಯಿದೆಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಸಂಪೂರ್ಣ ಸಾರವೇ ʼನೂರು ಕಾನೂನು: ನೂರು ಅಭಿಮತʼ ಸಂಪುಟವಾಗಿದೆ. ಈಚೆಗೆ ಮೂರು ಸಂಪುಟುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದ್ದರು.
ಸಕಾಲಕ್ಕೆ ನ್ಯಾಯದಾನ, ಅಭಿವೃದ್ಧಿಯ ಕಡೆಗೆ ನಡೆ, ಸಾಮಾಜಿಕ ನ್ಯಾಯ ಮತ್ತು ಭದ್ರತೆಯೆಡಗಿನ ಬದ್ಧತೆ, ಕಲ್ಯಾಣ ಕ್ರಮ, ಆಡಳಿತದಲ್ಲಿ ಸಾಮರ್ಥ್ಯಕ್ಕೆ ಆದ್ಯತೆ, ವೃತ್ತಿಗೆ ಸಜ್ಜುಗೊಳಿಸುವಿಕೆ, ಶಿಕ್ಷಣ, ಕಂದಾಯ ಸುಧಾರಣೆ, ಸಂಸ್ಕೃತಿ, ಪರಂಪರೆ ಮತ್ತು ತೀರ್ಥಯಾತ್ರೆ ಹಾಗೂ ಇತರೆ ಎಂಬ 10 ವಿಭಾಗಗಳನ್ನಾಗಿಸಿ, 100 ಅಭಿಪ್ರಾಯಗಳನ್ನು ಕ್ರೋಢೀಕರಿಸಲಾಗಿದೆ. ತಜ್ಞರ ಅಭಿಪ್ರಾಯದ ಕೆಳಗೆ ಕಾಯಿದೆಯ ವಿವರಣೆ ನೀಡಲಾಗಿದೆ.
“ಮೂರು ಸಂಪುಟಗಳಲ್ಲಿ ನೂತನ ಕಾಯಿದೆಗಳ ವಿವರಣೆ ಮತ್ತು ಅದಕ್ಕೆ ಮಾಡಲಾಗಿರುವ ತಿದ್ದುಪಡಿಯ ಉದ್ದೇಶವನ್ನು ವಿವರಿಸಲಾಗಿದೆ. ಇದು ಕಾನೂನು ಸುಧಾರಣೆಗೂ ಅವಕಾಶ ಮಾಡಿಕೊಡಲಿದ್ದು, ಇದರಿಂದ ಶಾಸಕರು, ಸರ್ಕಾರಿ ಅಧಿಕಾರಿಗಳು, ಕಾನೂನು ವೃತ್ತಿಪರರು, ಕಾನೂನು ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ” ಎನ್ನುತ್ತಾರೆ ಕಿಲ್ಪಾರ್ ನಿರ್ದೇಶಕರಾದ ಸಿ ಎಸ್ ಪಾಟೀಲ್.
2003ರಲ್ಲಿ ಕಿಲ್ಪಾರ್ ಅಸ್ತಿತ್ವಕ್ಕೆ ಬಂದಿದ್ದು, ಕಾನೂನು ಇಲಾಖೆಯಡಿ ಕೆಲಸ ಮಾಡುವ ಸ್ವಾಯತ್ತ ಸಂಸ್ಥೆಯಾಗಿದೆ. ಕಾನೂನು ಮತ್ತು ಸಂಸದೀಯ ಸುಧಾರಣೆ ಕುರಿತು ಕಿಲ್ಪಾರ್ ಸಂಶೋಧನೆ ನಡೆಸಲಿದೆ. ಇದು ಹೊಸ ಕಾನೂನು ರಚನೆ, ತಿದ್ದುಪಡಿ ಅಗತ್ಯತೆಯ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಕಾನೂನು ಕಾಲೇಜುಗಳಿಗೆ ಮಾದರಿ ವಿಧಾನಸಭೆಗಳನ್ನು ನಡೆಸಿ, ನಿಯಮಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಕಾನೂನು ವಿಷಯಗಳ ಕುರಿತು ಸಮ್ಮೇಳನ, ಕಮ್ಮಟ, ದುಂಡು ಮೇಜಿನ ಸಭೆಗಳನ್ನು ನಡೆಸುತ್ತದೆ.
“ಕಿಲ್ಪಾರ್ ಆಡಳಿತ ಪರಿಷತ್‌ಗೆ ಮುಖ್ಯಮಂತ್ರಿ ಅಧ್ಯಕ್ಷರಾಗಿದ್ದು, ಕಾನೂನು ಸಚಿವರು, ಮುಖ್ಯ ಕಾರ್ಯದರ್ಶಿ, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಏನೆಲ್ಲಾ ಮಾಡಬೇಕು ಎಂದು ನಿರ್ಧರಿಸುತ್ತಾರೆ. ವಿಧಾನಸಭೆಯು ಎರಡು ವರ್ಷಗಳಲ್ಲಿ ಜಾರಿಗೊಳಿಸಿರುವ ಕಾನೂನುಗಳ ಕುರಿತು ನೂರು ಅಭಿಪ್ರಾಯ ಬರೆಸಬೇಕು ಎಂಬ ನಿರ್ದೇಶನದ ಹಿನ್ನೆಲೆಯಲ್ಲಿ ಕಿಲ್ಪಾರ್ ಈ ಕೆಲಸ ಮಾಡಿದೆ” ಎಂದು ನಿರ್ದೇಶಕ ಸಿ ಎಸ್ ಪಾಟೀಲ್ ಅವರು ʼಬಾರ್ ಅಂಡ್ ಬೆಂಚ್ʼಗೆ ತಿಳಿಸಿದರು.