ಗಾಳಿಪಟ ನಿಷೇಧಿಸಿ ಆದೇಶ ಹೊರಡಿಸಲಾಗದು, ಅದು ನಮ್ಮ ಸಂಸ್ಕೃತಿ, ಪರಂಪರೆಯ ಭಾಗ: ದೆಹಲಿ ಹೈಕೋರ್ಟ್

ಆದರೂ ಸೂತ್ರವಾಗಿ ಬಳಸುವ ಚೀನಿ ಮಾಂಜಾ ತೀವ್ರ ಕಳವಳಕಾರಿಯಾಗಿದ್ದು ಅದನ್ನು ನಿಷೇಧಿಸಿ ಎನ್‌ಜಿಟಿ ನೀಡಿರುವ ಆದೇಶ ಮತ್ತು ದೆಹಲಿ ಸರ್ಕಾರದ ಅಧಿಸೂಚನೆ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕೆಂದು ಪೀಠ ಅಧಿಕಾರಿಗಳಿಗೆ ನಿರ್ದೇಶಿಸಿದೆ.
ಗಾಳಿಪಟ ನಿಷೇಧಿಸಿ ಆದೇಶ ಹೊರಡಿಸಲಾಗದು, ಅದು ನಮ್ಮ ಸಂಸ್ಕೃತಿ, ಪರಂಪರೆಯ ಭಾಗ: ದೆಹಲಿ ಹೈಕೋರ್ಟ್
Published on

ಗಾಳಿಪಟ ಹಾರಿಸುವುದು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಭಾಗವಾಗಿದ್ದು ಇದನ್ನು ನಿಷೇಧಿಸಿ ಆದೇಶ ಹೊರಡಿಸಲಾಗದು ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಸಂಸೆರ್‌ ಪಾಲ್‌ ಸಿಂಗ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಆದರೂ ಗಾಳಿಪಟ ಹಾರಿಸಲು ಚೀನಾದ ಮಾಂಜಾ (ಸಿಂಥೆಟಿಕ್‌ ದಾರ) ತೀವ್ರ ಕಳವಳಕಾರಿಯಾಗಿದ್ದು ಅದನ್ನು ನಿಷೇಧಿಸಿ ಎನ್‌ಜಿಟಿ ನೀಡಿರುವ ಆದೇಶ ಮತ್ತು ದೆಹಲಿ ಸರ್ಕಾರದ ಅಧಿಸೂಚನೆ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕೆಂದು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಅಧಿಕಾರಿಗಳಿಗೆ ನಿರ್ದೇಶಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಗಾಳಿಪಟ ಹಾರಾಟ ಮತ್ತು ಚೈನೀಸ್ ಮಾಂಜಾ ಬಳಕೆಗೆ ಸಂಪೂರ್ಣ ನಿಷೇಧ ಹೇರುವಂತೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಲಾಗಿತ್ತು. ಮಾಂಜಾ ಬಳಕೆಯಿಂದ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಶು ಪಕ್ಷಿಗಳಿಗೆ ತೊಂದರೆಯಾಗುತ್ತಿದೆ ಎಂದು ನ್ಯಾಯಾಲಯದಲ್ಲಿ ಖುದ್ದು ಹಾಜರಿದ್ದ ಅರ್ಜಿದಾರ ಹಾಗೂ ವಕೀಲ ಸಂಸೆರ್‌ ಪಾಲ್‌ ಸಿಂಗ್‌ ಹೇಳಿದ್ದರು.

Also Read
ಸಂವಿಧಾನ ಸಂಸ್ಕೃತಿ ಪಸರಿಸುವ ವಿಶಿಷ್ಟ ಯತ್ನ: ಜನಮನ ತಲುಪುತ್ತಿರುವ ಪೀಠಿಕೆ ಗೀತೆ

ಹೀಗಾಗಿ ಗಾಳಿಪಟ ತಯಾರಿಕೆ ಸಂಗ್ರಹ ಹಾಗೂ ಅದರ ಸಾಗಾಟ ಹಾಗೂ ಗಾಳಿಪಟ ಹಾರಿಸಲು ಬಳಸುವ ಎಲ್ಲಾ ಬಗೆಯ ಉಳಿದ ಉತ್ಪನ್ನಗಳ ಮೇಲೆ ಸಂಪೂರ್ಣ ನಿಷೇಧ ಹೇರಬೇಕೆಂದು ಅವರು ಕೋರಿದ್ದರು.

2017ರಲ್ಲಿ ಚೀನಾ ಮಾಂಜಾ ಮತ್ತು ಆ ರೀತಿಯ ವಸ್ತುಗಳ ಬಳಕೆಗೆ ಸಂಪೂರ್ಣ ನಿಷೇಧ ಹೇರಿ ಅಧಿಸೂಚನೆ ಹೊರಡಿಸಲಾಗಿದ್ದು, ಈ ಬಗ್ಗೆ ಪರಿಶೀಲಿಸಲು ಮೇಲ್ವಿಚಾರಣಾ ಸಮಿತಿಯನ್ನು ಕೂಡ ರಚಿಸಲಾಗಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ವಕೀಲರು ತಿಳಿಸಿದರು.

ಗಾಳಿಪಟ ತಯಾರಿಕೆಗಾಗಿ ನೈಲಾನ್ ಅಥವಾ ಇತರ ಸಿಂಥೆಟಿಕ್, ಜೈವಿಕ ವಿಘಟನೀಯವಲ್ಲದ ವಸ್ತುಗಳಿರುವ ದಾರದ ತಯಾರಿಕೆ, ಮಾರಾಟ, ಸಂಗ್ರಹಣೆ, ಖರೀದಿ ಮತ್ತು ಬಳಕೆಯನ್ನು ನಿಷೇಧಿಸುವ ಆದೇಶವನ್ನು ಎನ್‌ಜಿಟಿ ಸೆಪ್ಟೆಂಬರ್ 2020ರಲ್ಲಿ ಜಾರಿಗೊಳಿಸಿದೆ ಎಂದು ನ್ಯಾಯಾಲಯಕ್ಕೆ ವಿವರಿಸಲಾಯಿತು. ಎನ್‌ಜಿಟಿ ಆದೇಶ ಮತ್ತು ಸರ್ಕಾರದ ಅಧಿಸೂಚನೆಯನ್ನು ಉಲ್ಲಂಘಿಸುತ್ತಿರುವವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ವಾದ ಆಲಿಸಿದ ನ್ಯಾಯಾಲಯ ಎನ್‌ಜಿಟಿ ನೀಡಿರುವ ಆದೇಶ ಮತ್ತು ದೆಹಲಿ ಸರ್ಕಾರದ ಅಧಿಸೂಚನೆ ಎರಡನ್ನೂ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿ ಅರ್ಜಿ ವಿಲೇವಾರಿ ಮಾಡಿತು.

Kannada Bar & Bench
kannada.barandbench.com