ಕೆ ಜೆ ಥಾಮಸ್‌ ಕೊಲೆ ಪ್ರಕರಣ: ವಿಶೇಷ ಅಭಿಯೋಜಕ ಸದಾಶಿವಮೂರ್ತಿ ನೇಮಕ ಆದೇಶ ವಜಾಗೊಳಿಸಿದ ಹೈಕೋರ್ಟ್‌

ನಿರ್ದಿಷ್ಟ ಪ್ರಕರಣಗಳಲ್ಲಿ ವಿಶೇಷ ಪ್ರಾಸಿಕ್ಯೂಟರ್‌ ನೇಮಕ ಮಾಡುವಾಗ ಈ ಬಗ್ಗೆ ಆರೋಪಿಗೆ ತಿಳಿಸಬೇಕು. ಇಂತಹ ಚಿಂತನೆ ಅಥವಾ ಪರಿಶೀಲನೆಯ ಬಗ್ಗೆ ಸರ್ಕಾರವು ಸಂಬಂಧಪಟ್ಟ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು ಎಂದಿರುವ ಹೈಕೋರ್ಟ್‌.
Karnataka High Court
Karnataka High Court
Published on

ಬೆಂಗಳೂರು ಮಲ್ಲೇಶ್ವರದಲ್ಲಿ ನಡೆದಿದ್ದ ಸೇಂಟ್‌ ಪೀಟರ್‌ ಪಾಂಟಿಫಿಕಲ್ ಸೆಮಿನರಿಯ ರೆಕ್ಟರ್‌ ಕೆ ಜೆ ಥಾಮಸ್‌ ಕೊಲೆ ಪ್ರಕರಣದಲ್ಲಿ ರಾಜ್ಯ ಪ್ರಾಸಿಕ್ಯೂಷನ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಸದಾಶಿವಮೂರ್ತಿ ಅವರನ್ನು ವಿಶೇಷ ಪ್ರಾಸಿಕ್ಯೂಟರ್‌ ಆಗಿ ನೇಮಕ ಮಾಡಿದ್ದ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ರದ್ದುಗೊಳಿಸಿದೆ.

ನೇಮಕಾತಿ ಪ್ರಶ್ನಿಸಿ ಫಾದರ್‌ ಇಲಿಯಾಸ್ ಡೇನಿಯಲ್‌, ಫಾದರ್‌ ವಿಲಿಯಂ ಪ್ಯಾಟ್ರಿಕ್‌ ಮತ್ತು ಕಾರ್ಮೆಲ್‌ ಪೀಟರ್‌ ಅಲಿಯಾಸ್‌ ಪೀಟರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್ ಅವರ ಏಕಸದಸ್ಯ ಪೀಠವು ಬುಧವಾರ ಪ್ರಕಟಿಸಿದರು.

Justice Suraj Govindraj
Justice Suraj Govindraj

ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ಪೀಠವು ಸದಾಶಿವಮೂರ್ತಿ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಕ ಮಾಡಿ 2023ರ ಸೆಪ್ಟೆಂಬರ್ 15ರಂದು ಸರ್ಕಾರ ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಿದೆ. ಇದೇ ವೇಳೆ, ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 24(8)ರ ಅಡಿಯಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರ ನೇಮಕಕ್ಕೆ ಮುನ್ನ ಆರೋಪಿಗೆ ನೋಟಿಸ್ ನೀಡಲು ಅಥವಾ ಅವರ ವಾದ ಆಲಿಸಲು ನಿರ್ದೇಶಿಸಬೇಕೆಂಬ ಮನವಿಯನ್ನು ಪೀಠ ತಿರಸ್ಕರಿಸಿದೆ.

​ಮುಕುಲ್ ದಲಾಲ್ ಹಾಗೂ ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್, ಕೆ.ವಿ. ಶಿವಾರೆಡ್ಡಿ ಹಾಗೂ ಕರ್ನಾಟಕ ರಾಜ್ಯ ನಡುವಿನ ಪ್ರಕರಣದಲ್ಲಿ ಈ ನ್ಯಾಯಾಲಯದ ಸಮನ್ವಯ ನ್ಯಾಯಪೀಠ ಹಾಗೂ ಹಾಲಿ ಪ್ರಕರಣದಲ್ಲಿ ಈ ನ್ಯಾಯಾಲಯ ಸೂಚಿಸಿರುವ ಪ್ರಕ್ರಿಯೆಗಳನ್ನು ಅನುಸರಿಸಿ ಪ್ರಾಸಿಕ್ಯೂಷನ್ ಅನ್ನು ನಿಯಮಿತ ಸರ್ಕಾರಿ ಅಭಿಯೋಜಕರಿಂದಲೇ ಮುಂದುವರಿಸಬೇಕೇ ಅಥವಾ ಹೊಸದಾಗಿ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಬೇಕೇ ಎಂಬುದನ್ನು ರಾಜ್ಯ ಸರ್ಕಾರದ ವಿವೇಚನೆಗೆ ಬಿಡಲಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ಒಂದು ವೇಳೆ, ಯಾವುದೇ ಹೊಸ ನೇಮಕಾತಿ ನಡೆಸಿದರೆ ಕಾರಣಗಳನ್ನು ದಾಖಲಿಸಿದ ನಂತರವೇ ಮಾಡಬೇಕು. ಸಂಭಾವನೆಯನ್ನು ದೂರುದಾರರೇ ಭರಿಸಬೇಕಾದಲ್ಲಿ, ಅದನ್ನು ನಿಗದಿತ ರಾಜ್ಯ ಪ್ರಾಧಿಕಾರದ ಬಳಿ ಮುಂಗಡ ಠೇವಣಿಯಾಗಿ ಇರಿಸಬೇಕು ಹಾಗೂ ಆ ಪ್ರಾಧಿಕಾರದ ಮೂಲಕವೇ ವಿಶೇಷ ಸರ್ಕಾರಿ ಅಭಿಯೋಜಕರಿಗೆ ಸಂಭಾವನೆ ಪಾವತಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ. ವಿಸ್ತೃತ ತೀರ್ಪು ಇನ್ನಷ್ಟೇ ಲಭ್ಯವಾಗಬೇಕಿದೆ.

ಕೃತ್ಯ ನಡೆದ ಒಂದು ವರ್ಷದ ನಂತರ ಕನ್ನಡ ಕ್ರಿಶ್ಚಿಯನ್ ಹೋರಾಟಗಾರರಾದ ಅರ್ಜಿದಾರ ಪಾದ್ರಿಗಳನ್ನು ಆರೋಪಿಗಳು ಎಂದು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದರು. ಇದನ್ನು ವಿರೋಧಿಸಿ ಕನ್ನಡ ಕ್ರಿಶ್ಚಿಯನ್ ಹಾಗೂ ಇತರೆ ಸಂಘಗಳು ಹೋರಾಟ ನಡೆಸಿದ್ದವು. ವಿರೋಧದ ನಡುವೆಯೂ ತನಿಖೆಯನ್ನು ಪೂರ್ಣಗೊಳಿಸಿದ್ದ ಪೊಲೀಸರು ಮೂವರು ಆರೋಪಿಗಳ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಹೋರಾಟಗಾರರೂ ಆದ ಪತ್ರಕರ್ತೆ ರೀಟಾ ರಾಣಿ ಸೇರಿದಂತೆ ಐವರನ್ನು ಹೆಚ್ಚುವರಿ ಆರೋಪ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಇದನ್ನು ಪ್ರಶ್ನಿಸಲಾದ ಅರ್ಜಿಯಲ್ಲಿ ಹಿರಿಯ ವಕೀಲ ಸಿ ಎಚ್‌ ಹನುಮಂತರಾಯ ಅವರ ವಾದವನ್ನು ಪುರಸ್ಕರಿಸಿದ್ದ ಹೈಕೋರ್ಟ್‌; ಹೆಚ್ಚುವರಿ ಆರೋಪ ಪಟ್ಟಿಯಲ್ಲಿದ್ದ ರೀಟಾ ರಾಣಿ ಫಾದರ್ ಆನ್ಬು ಜಾನ್, ಫಾದರ್ ಎ ಥಾಮಸ್, ರಫೇಲ್ ರಾಜ್, ಬಿ ಎ ಅಂತೋಣಿ ಪ್ರಸಾದ್ ಮತ್ತು ಫಾದರ್ ಐ. ಅಂತಪ್ಪ ವಿರುದ್ಧದ ಆಪಾದನೆಗಳನ್ನು ವಜಾಗೊಳಿಸಿತ್ತು.

ಸದಾಶಿವಮೂರ್ತಿ ನೇಮಕಾತಿ ಆದೇಶವು ಸೆಮಿನರಿ ಕಾರ್ಯದರ್ಶಿ ಮನವಿಯ ಮೇರೆಗೆ ಮಾಡಲಾಗಿದೆ. ವಿಚಾರಣೆಯ ಸಂದರ್ಭದಲ್ಲಿ ಸದಾಶಿವಮೂರ್ತಿ ಆರೋಪಿಗಳಿಗೆ ಭಯದ ವಾತಾವರಣ ಸೃಷ್ಟಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಹಲವು ದೂರುಗಳು ದಾಖಲಾದ ನಂತರ ಸರ್ಕಾರ 2020ರ ಸೆಪ್ಟೆಂಬರ್ 8ರಂದು ನೇಮಕಾತಿ ಹಿಂಪಡೆಯಲಾಗಿತ್ತು.

ತದನಂತರ ಚನ್ನಪ್ಪ ಹರಸೂರು ಅವರನ್ನು ವಿಶೇಷ ಪ್ರಾಸಿಕ್ಯೂಟರ್‌ ಎಂದು ನೇಮಿಸಲಾಗಿತ್ತು. ಚನ್ನಪ್ಪ ವಿಚಾರಣೆ ಮುಂದುವರೆಸುವ ತಯಾರಿಯಲ್ಲಿದ್ದಾಗಲೇ ಸೆಮಿನರಿಯ ಕಾರ್ಯದರ್ಶಿ, ಸದಾಶಿವಮೂರ್ತಿ ಅವರನ್ನೇ ವಿಶೇಷ ಪ್ರಾಸಿಕ್ಯೂಟರ್‌ ಆಗಿ ನೇಮಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರು. ಇದರನ್ವಯ ಸದಾಶಿವಮೂರ್ತಿ ಅವರನ್ನು 2023ರ ಸೆಪ್ಟೆಂಬರ್ 15ರಂದು ಪುನಾ ನೇಮಕ ಮಾಡಿ ಆದೇಶಿಸಲಾಗಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು.

2013ರ ಮಾರ್ಚ್ 31ರ ಈಸ್ಟರ್ ಹಬ್ಬದ ರಾತ್ರಿ (ಏಪ್ರಿಲ್ 1ರ ಮುಂಜಾನೆ) ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸೆಮಿನರಿ ಆವರಣದಲ್ಲಿ ಕೆ ಜೆ ಥಾಮಸ್ ಅವರನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಸೆಮಿನರಿಯ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳ ಮೇಲಿನ ನಿಯಂತ್ರಣ ಮತ್ತು ಆಡಳಿತಾತ್ಮಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಈ ಹತ್ಯೆ ನಡೆಸಲಾಗಿದೆ ಎಂದು ಪೊಲೀಸರು ತನಿಖೆಯಲ್ಲಿ ವಿಶದಪಡಿಸಿದ್ದರು.

Kannada Bar & Bench
kannada.barandbench.com