[ಕೊಡಕರ ದರೋಡೆ ಪ್ರಕರಣ] ಪೊಲೀಸರ ಆರೋಪಗಳನ್ನೆಲ್ಲಾ ತನಿಖೆ ಮಾಡಲಾಗದು ಎಂದು ಕೇರಳ ಹೈಕೋರ್ಟ್‌ಗೆ ತಿಳಿಸಿದ ಇ ಡಿ

ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಭಾಗಿಯಾಗಿದ್ದಾರೆ ಎನ್ನಲಾದ ಕೊಡಕರ ಹಣ ದರೋಡೆ ಪ್ರಕರಣದ ತನಿಖೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಎಎಪಿ ಅಧ್ಯಕ್ಷ ವಿನೋದ್ ಮ್ಯಾಥ್ಯೂ ವಿಲ್ಸನ್ ಸಲ್ಲಿಸಿದ್ದ ಪಿಐಎಲ್‌ ಕುರಿತಾದ ತೀರ್ಪನ್ನು ಪೀಠ ಕಾಯ್ದಿರಿಸಿದೆ.
Kerala High court with Enforcement Directorate
Kerala High court with Enforcement Directorate

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ ಸುರೇಂದ್ರನ್ ಭಾಗಿಯಾಗಿದ್ದಾರೆ ಎನ್ನಲಾದ ಕೊಡಕರ ಕಪ್ಪು ಹಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನ ಎಲ್ಲಾ ಅಂಶ ಮತ್ತು ಆರೋಪಗಳನ್ನು ತಾನು ತನಿಖೆ ಮಾಡಲು ಸಾಧ್ಯವಿಲ್ಲ ಎಂದು ಜಾರಿ ನಿರ್ದೇಶನಾಲಯ ಶುಕ್ರವಾರ ಕೇರಳ ಹೈಕೋರ್ಟ್‌ಗೆ ತಿಳಿಸಿದೆ [ವಿನೋದ್‌ ಮ್ಯಾಥ್ಯೂ ವಿಲ್ಸನ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಇ ಡಿ ವಾದಕ್ಕೆ ತಲೆದೂಗಿದ ನ್ಯಾಯಾಲಯ ಉಳಿದ ತನಿಖಾ ಸಂಸ್ಥೆಗಳಂತೆ ಇ ಡಿ  ಅನುಸೂಚಿತ ಅಪರಾಧವೆಂದು ದಾಖಲಿಸಿಕೊಳ್ಳದ ಪ್ರಕರಣಗಳ ಬಗ್ಗೆ ತನಿಖೆ ಮಾಡಲು ಸಾಧ್ಯವಿಲ್ಲ ಎಂದಿತು.

2002ರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಟ್ಟಿ ಮಾಡಲಾದ ಅನುಸೂಚಿತ ಅಪರಾಧಗಳು ವಿವಿದ ಕಾಯಿದೆಗಳಿಂದ ಪಡೆಂತಹವು. ಪ್ರೆಡಿಕೇಟ್‌ ಅಪರಾಧಗಳು ಎಂದೂ ಕರೆಯುವ ಇವು ಅಕ್ರಮ ಹಣ ವರ್ಗಾವಣೆ ಅಪರಾಧಗಳನ್ನು ಅನ್ವಯಿಸಲು ಆಧಾರವಾಗಿವೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ ಸುರೇಂದ್ರನ್ ಭಾಗಿಯಾಗಿದ್ದಾರೆ ಎನ್ನಲಾದ ಕೊಡಕರ ಹಣ ದರೋಡೆ ಪ್ರಕರಣದ ತನಿಖೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಎಎಪಿ ರಾಜ್ಯ ಘಟಕದ ಅಧ್ಯಕ್ಷ ವಿನೋದ್ ಮ್ಯಾಥ್ಯೂ ವಿಲ್ಸನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತೀರ್ಪಿನ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

 ತಾನು ಈಗಾಗಲೇ ದರೋಡೆಗೆ ಸಂಬಂಧಿಸಿದ ಅನುಸೂಚಿತ ಅಪರಾಧದಿಂದ ಉದ್ಭವಿಸಿದ ಅಕ್ರಮ ಹಣ ವರ್ಗಾವಣೆ ಅಪರಾಧವನ್ನು ಪರಿಶೀಲಿಸುತ್ತಿದ್ದು ಅಪರಾಧದ ಆದಾಯ ಪತ್ತೆ ಹಚ್ಚಲು ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ವಿಚಾರಣೆ ನಡೆಸಿರುವುದಾಗಿ ಶುಕ್ರವಾರ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಪಿ ಗೋಪಿನಾಥ್ ಮತ್ತು ಶ್ಯಾಮ್ ಕುಮಾರ್ ವಿಎಂ ಅವರಿದ್ದ ಪೀಠಕ್ಕೆ ಇ ಡಿ ಪರ ವಕೀಲರು ತಿಳಿಸಿದರು.  ಈ ವೇಳೆ ಎಫ್‌ಐಆರ್‌ನಲ್ಲಿ ಪೊಲೀಸರು ಆರೋಪಿಸಿರುವ ಎಲ್ಲ ಅಂಶಗಳನ್ನು ತನಿಖೆ ಮಾಡಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನು ಒಪ್ಪಿದ ಪೀಠ ಪಿಎಂಎಲ್‌ಎ ಅಡಿಯಲ್ಲಿ ಅಕ್ರಮ ಹಣ ವರ್ಗಾವಣೆ ಅಪರಾಧವನ್ನು ತನಿಖೆ ಮಾಡುವ ಹೊಣೆ ಮಾತ್ರ ಇ ಡಿಯದ್ದಾಗಿದೆ ಎಂದುತಿಳಿಸಿದ ನ್ಯಾಯಾಲಯ ಪ್ರಕರಣದ ತೀರ್ಪನ್ನು ಕಾಯ್ದಿರಿಸಿತು.

ಕೆ ಸುರೇಂದ್ರನ್‌ರನ್ನು ಒಳಗೊಂಡಿರುವ 2021ರ ಕೊಡಕರ ಕಪ್ಪುಹಣ ದರೋಡೆ ಪ್ರಕರಣದ ತನಿಖೆಯ ಬಗ್ಗೆ ವಿಲ್ಸನ್ ತಮ್ಮ ಪಿಐಎಲ್‌ನಲ್ಲಿ ಕಳವಳ ವ್ಯಕ್ತಪಡಿಸಿದ್ದರು. ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಹವಾಲಾ ವ್ಯವಹಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಕೈವಾಡದ ವಿರುದ್ಧ ಇ ಡಿ ತನಿಖೆ ನಡೆಸದಿರುವ ಟೀಕೆಗಳಿವೆ ಎಂದು ಅವರು ಪ್ರತಿಪಾದಿಸಿದ್ದರು.

ಒಂದು ಸ್ಥಳದಿಂದ ಇನ್ನೊಂದಕ್ಕೆ ಹಣವನ್ನು ವರ್ಗಾಯಿಸಲು ಅನೌಪಚಾರಿಕ ಮತ್ತು ಕಾನೂನುಬಾಹಿರ ವಾಹಿನಿಯೇ ಹವಾಲಾ ವ್ಯವಸ್ಥೆ.

ಸುರೇಂದ್ರನ್ ವಿರುದ್ಧದ ಅಪರಾಧಗಳು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ಶಿಕ್ಷಾರ್ಹವಾಗಿದ್ದು ಯುಎಪಿಎ ಮತ್ತು ಎನ್‌ಐಎ ಕಾಯಿದೆಯಡಿ ಕೇಂದ್ರ ಸರ್ಕಾರ ಮತ್ತು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕ್ರಮ ಕೈಗೊಳ್ಳಬೇಕೆಂದು ಅವರು ಕೋರಿದ್ದರು.

Kannada Bar & Bench
kannada.barandbench.com