ಕೋಗಿಲು ಲೇಔಟ್‌ ತೆರವು: ಸಂತ್ರಸ್ತರ ಪುನರ್ವಸತಿ, ನಿರ್ಗತಿಕರ ಮಾಹಿತಿ ಕುರಿತ ವರದಿ ಸಲ್ಲಿಸಲು ಅಮಿಕಸ್‌ಗೆ ನಿರ್ದೇಶನ

ತೆರವು ಕಾರ್ಯಾಚರಣೆಯಿಂದ ಎಷ್ಟು ಮಂದಿ ನಿರ್ಗತಿಕರಾಗಿದ್ದಾರೆ. ಎಷ್ಟು ಜನರ ಮನೆ ತೆರವು ಮಾಡಲಾಗಿದೆ. ಎಷ್ಟು ಗುಡಿಸಲು ನಾಶಪಡಿಸಲಾಗಿದೆ. ಎಷ್ಟು ಕುಟುಂಬ ನಿರ್ಗತಿಕವಾಗಿವೆ. ಪುನರ್ವಸತಿ ವ್ಯವಸ್ಥೆ ಹೇಗಿದೆ? ಎಂಬ ವರದಿ ಸಲ್ಲಿಸಬೇಕು ಎಂದಿರುವ ಪೀಠ.
Kogilu Layout
Kogilu Layout
Published on

ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿನ ಅಕ್ರಮ ಮನೆಗಳ ತೆರವು ಕಾರ್ಯಾಚರಣೆಯಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿರುವುದು ಮತ್ತು ನಿರ್ಗತಿಕರಾಗಿರುವವರ ಮಾಹಿತಿಯನ್ನು ಒಳಗೊಂಡ ವರದಿ ಸಲ್ಲಿಸಲು ಅಮಿಕಸ್‌ ಕ್ಯೂರಿಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ.

ಅಕ್ರಮವಾಗಿ ತೆರವು ಕಾರ್ಯಾಚರಣೆ ನಡೆಸಿರುವುದರಿಂದ ಅದನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಕೋಗಿಲು ಬಡಾವಣೆ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹನಾ ಮತ್ತು ಆರೀಫ್ ಬೇಗಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಾಲಯವು ಹಾಜರಿದ್ದ ಅಮಿಕಸ್‌ ಕ್ಯೂರಿ ಬಿ ವಿ ವಿದ್ಯುಲ್ಲತಾ ಅವರನ್ನು ಕುರಿತು “ತೆರವು ಕಾರ್ಯಾಚರಣೆಯಿಂದ ಎಷ್ಟು ಮಂದಿ ನಿರ್ಗತಿಕರಾಗಿದ್ದಾರೆ. ಎಷ್ಟು ಜನರ ಮನೆ ತೆರವು ಮಾಡಲಾಗಿದೆ. ಎಷ್ಟು ಗುಡಿಸಲುಗಳನ್ನು ನಾಶಪಡಿಸಲಾಗಿದೆ. ಎಷ್ಟು ಕುಟುಂಬಗಳು ನಿರ್ಗತಿಕವಾಗಿವೆ. ಪುನರ್ವಸತಿಯ ವ್ಯವಸ್ಥೆ ಹೇಗಿದೆ? ಅಂಶಗಳನ್ನು ಒಳಗೊಂಡು ವಿವರವಾದ ವರದಿ ಸಲ್ಲಿಸಬೇಕು" ಎಂದು ಸೂಚಿಸಿತು. ಇದೇ ವೇಳೇ, ಅಮಿಕಸ್‌ ಕ್ಯೂರಿ ಅವರಿಗೆ ಸಂಪೂರ್ಣ ನೆರವು ನೀಡುವಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಕೆಎಸ್‌ಎಲ್‌ಎಸ್‌ಎ) ನಿರ್ದೇಶಿಸಿತು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಫಕೀರ್‌ ಲೇಔಟ್‌ನಲ್ಲಿ 1990ರಿಂದ ನೆಲೆಸಿರುವ 15 ಮಂದಿಯ ನಿವಾಸಗಳನ್ನು ತೆರವು ಮಾಡಲಾಗಿದೆ ಎಂಬ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಪ್ರತ್ಯೇಕವಾಗಿ ನೋಟಿಸ್‌ ಜಾರಿಗೊಳಿಸಿದೆ.

ಕೋಗಿಲು ಬಡಾವಣೆಯ ರಬಿಯಾ, ಮೊಹಮ್ಮದ್‌ ರಫೀಕ್‌ ಸೇರಿದಂತೆ 15 ಮಂದಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಕ್ಲಿಫ್ಟನ್‌ ರೋಜಾರಿಯೊ ಅವರು “ಅರ್ಜಿದಾರರು ಫಕೀರ್‌ ಲೇಔಟ್‌ನಲ್ಲಿ 1990ರಿಂದ ನೆಲೆಸಿದ್ದಾರೆ. ಎಲ್ಲರಿಗೂ ಕರ್ನಾಟಕ ಭೂ ಕಂದಾಯ ಕಾಯಿದೆ ಸೆಕ್ಷನ್‌ 94ಸಿಸಿ ಅಡಿ ಹಕ್ಕು ಪತ್ರ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಗೂಗಲ್‌ ಅರ್ಥ ದಾಖಲೆ ಇದೆ. ಸರ್ಕಾರದ ದಾಖಲೆಯೇ ಇದೆ. ಅದಾಗ್ಯೂ, ಮನೆಗಳನ್ನು ತೆರವು ಮಾಡಲಾಗಿದೆ” ಎಂದರು.

ಇದನ್ನು ಆಲಿಸಿದ ಪೀಠವು ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ. ಅಲ್ಲದೇ, ಈ ಪ್ರಕರಣದಲ್ಲೂ ನೆರವು ನೀಡುವಂತೆ ಅಮಿಕಸ್‌ ಕ್ಯೂರಿಗೆ ನ್ಯಾಯಾಲಯ ನಿರ್ದೇಶಿಸಿದ್ದು, ಮಾರ್ಚ್‌ 12ಕ್ಕೆ ವಿಚಾರಣೆ ಮುಂದೂಡಿದೆ.

Kannada Bar & Bench
kannada.barandbench.com