ತನ್ನ ತಾಯಿಯನ್ನು ಬರ್ಬರವಾಗಿ ಕೊಂದು, ದೇಹ ತುಂಡರಿಸಿ ಬೇಯಿಸಿದ್ದ ಅಪರಾಧಿ ಕೊಲ್ಲಾಪುರದ ಸುನಿಲ್ ರಾಮ ಕುಚಕೊರವಿಗೆ ವಿಧಿಸಿದ್ದ ಮರಣದಂಡನೆಯನ್ನು ಬಾಂಬೆ ಹೈಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ [ಮಹಾರಾಷ್ಟ್ರ ಸರ್ಕಾರ ಮತ್ತು ಸುನಿಲ್ ರಾಮ ಕುಚಕೊರವಿ ನಡುವಣ ಪ್ರಕರಣ].
ಜುಲೈ 2021ರಲ್ಲಿ ಕೊಲ್ಲಾಪುರದ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಮರಣದಂಡನೆಯನ್ನು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರಿದ್ದ ಪೀಠ ಎತ್ತಿ ಹಿಡಿಯಿತು.
ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ನ್ಯಾಯಾಲಯ ಕುಚಕೊರವಿಯನ್ನು ತಪ್ಪಿತಸ್ಥ ಎಂದು ಘೋಷಿಸಿತು. ಆತನ ಕೃತ್ಯ ನರಭಕ್ಷಣೆಯನ್ನು ಹೋಲುತ್ತಿದ್ದು ಆತ ತನ್ನ ಬದುಕಿನಲ್ಲಿ ಸುಧಾರಣೆ ಕಂಡುಕೊಳ್ಳುವುದು ಅಸಾಧ್ಯ ಎಂದು ತಿಳಿಸಿ ₹ 25,000 ದಂಡದೊಂದಿಗೆ ಗಲ್ಲು ಶಿಕ್ಷೆ ವಿಧಿಸಿತು.
ಹಂದಿ ಮತ್ತು ಬೆಕ್ಕುಗಳನ್ನು ತಿನ್ನುವ ಅಭ್ಯಾಸವಿದ್ದ ಅಪರಾಧಿ ತನ್ನ ತಾಯಿಯ ಮಾಂಸ ತಿನ್ನಲೆಂದೇ ಆಕೆಯನ್ನು ಕೊಂದಿರಬೇಕು. ಇದು ದಾಖಲೆಗಳಿಂದ ಸ್ಪಷ್ಟವಾಗಿದೆ. ಆತನಿಗೆ ನರಭಕ್ಷಣೆಯ ರೋಗಲಕ್ಷಣ ಇರುವ ಬಲವಾದ ಸಾಧ್ಯತೆಗಳಿವೆ ಎಂದಿರುವ ನ್ಯಾಯಾಲಯ ಅಪರಾಧವನ್ನು "ಅತ್ಯಂತ ಕ್ರೂರ, ಅನಾಗರಿಕ ಮತ್ತು ಭೀಕರ" ಎಂದು ವಿವರಿಸಿದೆ.
ಅಲ್ಲದೆ ನ್ಯಾಯಾಲಯವು ಅಪರಾಧಿಯು ಮುಗ್ಧತೆಯ ಸೋಗನ್ನು ಸಹ ಕಟುವಾಗಿ ಟೀಕಿಸಿತು. ಕೊಲೆಯು ಪೂರ್ವಯೋಜಿತವಾಗಿರುವ ಅಂಶಗಳ ಬಗ್ಗೆ ಬೆಳಕು ಚೆಲ್ಲಿತು.
"ಸಾವಿಗೀಡಾದ ಸಂತ್ರಸ್ತೆಯು ಅನುಭವಿಸಿರುವ ಯಾತನೆಯು ಊಹಿಸಲು ಅಸಾಧ್ಯವಾಗಿದ್ದು, ಅರಗಿಸಿಕೊಳ್ಳದ್ದಾಗಿದೆ. ಆಕೆಯ ದೇಹದ ಬಲಭಾಗವನ್ನು ಆರೋಪಿಯು ಸೀಳಿದ್ದು ಆನಂತರ ಆರೋಪಿಯು ಮೆದುವಾದ ಅಂಗಾಂಗಗಳನ್ನು ಹೊರತೆಗೆದಿದ್ದಾನೆ. ಅಲ್ಲದೆ, ಮೃತಳ ಕುತ್ತಿಗೆಯನ್ನೂ ಕತ್ತರಿಸಿದ್ದಾನೆ," ಎಂದು ಕೃತ್ಯದ ಭೀಭತ್ಸತೆಯನ್ನು ನ್ಯಾಯಾಲಯವು ವಿವರಿಸಿತು.
ಕೃಶಳಾದ, ಹಿರಿಯ ವೃದ್ಧೆಗೆ ತನ್ನ ಕಷ್ಟದ ನಡುವೆಯೂ ತಾನೇ ದಿನವೂ ಎರಡು ಹೊತ್ತು ಊಟ ಹಾಕಿ ಸಾಕಿ ಬೆಳೆಸಿದ್ದ ಬಲಿಷ್ಠ ಮಗನಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇರಲಿಲ್ಲ ಎಂದು ವಿಷಾದಿಸಿತು.
ಮನುಷ್ಯರನ್ನು ಭಕ್ಷಿಸಲು ಆತನಿಗೆ ಇರುವ ಒಲವಿನಿಂದಾಗಿ ಜೈಲಿನ ಉಳಿದ ಕೈದಿಗಳಿಗೆ ಸಂಭಾವ್ಯ ಆಪತ್ತು ಇರುವುದರಿಂದ ಜೀವಾವಧಿ ಶಿಕ್ಷೆ ನೀಡುವುದು ಅಪಾಯಕಾರಿ ಎಂದು ನ್ಯಾಯಾಲಯ ಹೇಳಿದೆ. ಆದ್ದರಿಂದ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿಯುವಂತಹ ಅಪರೂಪದಲ್ಲೇ ಅಪರೂಪದ ಪ್ರಕರಣ ಇದು ಎಂದು ನ್ಯಾಯಾಲಯವು ತೀರ್ಮಾನಿಸಿತು.
ಆಗಸ್ಟ್ 28, 2017ರಂದು ಕುಚಕೊರವಿ ತನ್ನ 60 ವರ್ಷದ ತಾಯಿ ಯಲ್ಲವ್ವ ಕುಚಕೊರವಿಯನ್ನು ಕೊಲೆ ಮಾಡಿದ್ದ. ಜೊತೆಗೆ ಆಕೆಯ ದೇಹದ ಭಾಗಗಳನ್ನು ಹೊರತೆಗೆದು ಉಪ್ಪು ಮತ್ತು ಮೆಣಸಿನ ಪುಡಿಯೊಂದಿಗೆ ಬೇಯಿಸಿದ್ದ.
ಅತ್ಯಲ್ಪ ಪಿಂಚಣಿಯಿಂದ ಜೀವನ ಸಾಗಿಸುತ್ತಿದ್ದ ವಿಧವೆ ಯಲ್ಲವ್ವ, ಹಿಂಸಾತ್ಮಕ ವರ್ತನೆಯ ಹೊರತಾಗಿಯೂ ತನ್ನ ಮಗನನ್ನು ಸಲಹಿದ್ದಳು. ಆಗಾಗ್ಗೆ ಪಿಂಚಣಿ ಹಣದ ವಿಚಾರವಾಗಿ ಅವರಿಬ್ಬರ ನಡುವೆ ಕಲಹ ಉಂಟಾಗುತ್ತಿತ್ತು.
ಕೊಲೆಯ ನಂತರ ಕುಚಕೊರವಿ ಯಲ್ಲವ್ವನ, ದೇಹದ ಅಂಗಗಳನ್ನು ತೆಗೆದು, ಕತ್ತರಿಸಿ ಉಪ್ಪು ಹಾಗೂ ಖಾರದ ಪುಡಿ ಹಾಕಿ ಬೇಯಿಸಲು ಮುಂದಾಗಿದ್ದ. ಆತ ತನ್ನ ತಾಯಿಯ ರಕ್ತಸಿಕ್ತ ಶರೀರದ ಬಳಿ ಇದ್ದುದನ್ನು ಎಂಟು ವರ್ಷದ ನೆರೆಯ ಬಾಲಕಿ ಕಂಡಿದ್ದಳು. ಆತನ ಕೈಗಳು ಹಾಗೂ ಬಟ್ಟೆ ರಕ್ತಮಯವಾಗಿದ್ದವು ಎನ್ನುವುದು ಪ್ರತ್ಯಕ್ಷದರ್ಶಿಯ ವಿವರಣೆಯಾಗಿತ್ತು.
ಈ ಬರ್ಬರ ಕೃತ್ಯ ಸಂತ್ರಸ್ತೆಗೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಆಗಿರುವ ಆಘಾತ ಎಂದು ನ್ಯಾಯಾಲಯ ಹೇಳಿದೆ.