ಮುಸ್ಲಿಮರ ವಿರುದ್ಧ ಪನೋಲಿ ಹೇಳಿಕೆ: ಭಾವನೆಗಳಿಗೆ ಧಕ್ಕೆ ಎಂದ ಕಲ್ಕತ್ತಾ ಹೈಕೋರ್ಟ್

ಗುರುಗ್ರಾಮದಲ್ಲಿ 22 ವರ್ಷದ ಕಾನೂನು ವಿದ್ಯಾರ್ಥಿನಿ ಪನೋಲಿ ಅವರನ್ನು ಮೇ 30ರ ರಾತ್ರಿ ಬಂಧಿಸಲಾಗಿತ್ತು. ಈಗ ಆಕೆ ಕೊಲ್ಕತ್ತಾದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
Sharmishta Panoli and Calcutta High Court
Sharmishta Panoli and Calcutta High Court Instagram
Published on

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ವಿಡಿಯೋ ಪ್ರಸಾರ ಮಾಡಿದ್ದಕ್ಕಾಗಿ ಕಾನೂನು ವಿದ್ಯಾರ್ಥಿನಿ, ಸಾಮಾಜಿಕ ಮಾಧ್ಯಮ ಇನ್‌ಫ್ಲೂಯೆನ್ಸರ್ ಶರ್ಮಿಷ್ಠಾ ಪನೋಲಿ ಅವರನ್ನು ಕೋಲ್ಕತ್ತಾ ಹೈಕೋರ್ಟ್‌ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ  [ಶಮಿಷ್ಠಾ @ಶರ್ಮಿಷ್ಠಾ ಪನೋಲಿ ರಾಜ್ ಮತ್ತು ಪಶ್ಚಿಮ ಬಂಗಾಳ ಸರ್ಕಾರ ನಡುವಣ ಪ್ರಕರಣ] .

ಆಕೆಯ ಹೇಳಿಕೆಗಳು ಒಂದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿವೆ. ಭಾರತ ವೈವಿಧ್ಯಮಯ ದೇಶವಾಗಿರುವುದರಿಂದ ಬೇರೆಯವರನ್ನು ನೋಯಿಸಲು ವಾಕ್‌ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ನ್ಯಾಯಮೂರ್ತಿ ಪಾರ್ಥ ಸಾರಥಿ ಚಟರ್ಜಿ ಹೇಳಿದ್ದಾರೆ.

Also Read
ಧಾರ್ಮಿಕ ಭಾವನೆಗೆ ಧಕ್ಕೆ: ಕಾನೂನು ವಿದ್ಯಾರ್ಥಿನಿ ಪನೋಲಿಗೆ 14 ದಿನಗಳ ನ್ಯಾಯಾಂಗ ಬಂಧನ

"ನಮ್ಮ ದೇಶದ ಒಂದು ವರ್ಗದ ಜನರ ಭಾವನೆಗಳಿಗೆ ನೋವುಂಟು ಮಾಡಲಾಗಿದೆ. ನಮಗೆ ವಾಕ್ ಸ್ವಾತಂತ್ರ್ಯವಿದೆ. ಆದರೆ ಅದರರ್ಥ ನೀವು ಇತರರ ಭಾವನೆಗಳಿಗೆ ನೋವುಂಟು ಮಾಡಿ ಎಂದಲ್ಲ. ನಮ್ಮ ದೇಶ ವೈವಿಧ್ಯತೆಯಿಂದ ತುಂಬಿದೆ" ಎಂದು ನ್ಯಾಯಾಲಯ ವಿವರಿಸಿದೆ.

ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಮತ್ತು ವಿಡಿಯೋಗೆ ಸಂಬಂಧಿಸಿದಂತೆ ವಿವಿಧ ಪ್ರಥಮ ಮಾಹಿತಿ ವರದಿಗಳನ್ನು (ಎಫ್‌ಐಆರ್) ಕ್ರೋಢೀಕರಿಸಿ ವಿಚಾರಣೆ ನಡೆಸುವಂತೆ ಕೋರಿ ಪನೋಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಪ್ರಕರಣವನ್ನು ಬೇರೊಂದು ರಜಾಕಾಲೀನ ಪೀಠ ಗುರುವಾರ (ಜೂನ್ 5) ವಿಚಾರಣೆ ನಡೆಸಲಿದೆ ಎಂದು ಪೀಠ ಹೇಳಿದೆ. ಪನೋಲಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಪೀಠ ಸೂಚಿಸಿತು. ಆಕೆಯನ್ನು ಬಂಧಿಸಲಾದ ಪ್ರಕರಣವನ್ನು ಪ್ರಧಾನ ಪ್ರಕರಣವೆಂದು ಪರಿಗಣಿಸುವುದಾಗಿ ನ್ಯಾಯಾಲಯ ತಿಳಿಸಿತು.

ಇದಕ್ಕೂ ಮುನ್ನ ಪನೋಲಿ ಪರ ವಾದ ಮಂಡಿಸಿದ ಹಿರಿಯ ವಕೀಲ ಡಿ ಪಿ ಸಿಂಗ್‌, ಜೈಲಿನಲ್ಲಿ ತನ್ನ ಕಕ್ಷಿದಾರರಿಗೆ ಮೂಲಭೂತ ಮಾನವ ಹಕ್ಕುಗಳನ್ನು ನಿರಾಕರಿಸಲಾಗಿದೆ. ಪನೋಲಿ ಅವರಿಗೆ ಗಮನ ಕೊರತೆ/ಹೈಪರ್ ಆಕ್ಟಿವಿಟಿ ಡಿಸಾರ್ಡರ್ (ಎಡಿಎಚ್‌ಡಿ) ಇದ್ದು ಜೈಲಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ವಿರುದ್ಧದ ಎಫ್‌ಐಆರ್‌ನಲ್ಲಿ ಹುರುಳಿಲ್ಲ. ಆಕೆಯ ಮೇಲೆ ದೇಶದ ವಿವಿಧ ಭಾಗಗಳಿಂದ ದಾಳಿ ನಡೆಸಲಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿದರು.

Also Read
ದ್ವೇಷ ಭಾವನೆ ಕೆರಳಿಸದು: ಶಿವಲಿಂಗ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರಾಧ್ಯಾಪಕನಿಗೆ ದೆಹಲಿ ಹೈಕೋರ್ಟ್ ಜಾಮೀನು

ಪಶ್ಚಿಮ ಬಂಗಾಳ ರಾಜ್ಯದ ಪರವಾಗಿ ಹಿರಿಯ ವಕೀಲ ಕಲ್ಯಾಣ್ ಬಂಡೋಪಾಧ್ಯಾಯ ವಾದ ಮಂಡಿಸಿ, ಪನೋಲಿ ಪರ ವಕೀಲರ ಮನವಿಗೆ ವಿರೋಧ ವ್ಯಕ್ತಪಡಿಸಿದರು. ಇತರೆ ಕೈದಿಗಳಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಆಕೆಗೂ ಒದಗಿಸಲಾಗುತ್ತಿದೆ ಎಂದರು.

ಆಪರೇಷನ್ ಸಿಂಧೂರ್ ಕುರಿತಾದ ವಿಡಿಯೋದಲ್ಲಿ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಪನೋಲಿ ಅವರು ಹೇಳಿಕೆ ನೀಡಿದ್ದಕ್ಕಾಗಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಗುರುಗ್ರಾಮದಲ್ಲಿ 22 ವರ್ಷದ ಕಾನೂನು ವಿದ್ಯಾರ್ಥಿನಿ ಪನೋಲಿ ಅವರನ್ನು ಮೇ 30ರ ರಾತ್ರಿ ಬಂಧಿಸಲಾಗಿತ್ತು. ಈಗ ಆಕೆ ಕೊಲ್ಕತ್ತಾದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

Kannada Bar & Bench
kannada.barandbench.com