ಕೋಮುಲ್‌ ನೇಮಕಾತಿ ಹಗರಣ: ಇ ಡಿ ಅಧಿಕಾರಿಗಳ ವಿರುದ್ಧದ ಪ್ರಕ್ರಿಯೆಗೆ ತಡೆಯಾಜ್ಞೆ ವಿಧಿಸಿದ ಹೈಕೋರ್ಟ್‌

ಅನರ್ಹರಿಗೆ 150 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಜ.8ರಂದು ಇಡಿ ಅಧಿಕಾರಿಗಳು ಮಾಲೂರು ಶಾಸಕ ನಂಜೇಗೌಡರ ಮನೆಯಲ್ಲಿ ಶೋಧ ನಡೆಸಿದ್ದರು. ಈ ವೇಳೆ ಕೋಮುಲ್‌ ನೇಮಕಾತಿ ಹಗರಣ ಬಹಿರಂಗವಾಗಿತ್ತು.
High Court of Karnataka
High Court of Karnataka
Published on

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದಲ್ಲಿನ (ಕೋಮುಲ್)‌ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬರು ಜಾರಿ ನಿರ್ದೇಶನಾಲಯದ ಇಬ್ಬರು ಅಧಿಕಾರಿಗಳ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್‌ ಬೆದರಿಕೆ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ತಡೆಯಾಜ್ಞೆ ವಿಧಿಸಿದೆ. ಅಲ್ಲದೇ, ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕ ಮನೋಜ್‌ ಮಿತ್ತಲ್‌ ಮತ್ತು ಸಹಾಯಕ ನಿರ್ದೇಶಕ ಅಜಯ್‌ ಕುಮಾರ್‌ ವೈದ್ಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ವಿಲ್ಸನ್‌ ಗಾರ್ಡನ್‌ ಠಾಣೆಯ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ಮತ್ತು ಆನಂತರದ ಪ್ರಕ್ರಿಯೆಗೆ ತಡೆ ವಿಧಿಸಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಜಾರಿ ನಿರ್ದೇಶನಾಲಯದ ಪರವಾಗಿ ವಾದಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅವರು “ಅರ್ಜಿದಾರರು ಪಿವಿಸಿ ಪೈಪ್‌ಗಳನ್ನು ಬಳಕೆ ಮಾಡಿದ್ದು, ಅವು ಐಪಿಸಿ ಸೆಕ್ಷನ್‌ 324ರ ಅಡಿ ಮಾರಕಾಸ್ತ್ರವಲ್ಲ. ಬಾಕಿ ಅಪರಾಧಗಳು ಸಂಜ್ಞೇತರ” ಎಂದರು.

ಅನರ್ಹರಿಗೆ 150 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಜನವರಿ 8ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಲೂರು ಶಾಸಕ ಕೆ ವೈ ನಂಜೇಗೌಡ ಅವರ ಮನೆಯಲ್ಲಿ ಶೋಧ ನಡೆಸಿದ್ದರು. ಈ ಸಂದರ್ಭದಲ್ಲಿ ಕೋಮುಲ್‌ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಮಾಹಿತಿ ಲಭ್ಯವಾಗಿತ್ತು ಎಂದು ಇಡಿ ಹೇಳಿದೆ. ನೇಮಕಾತಿ ಸಮಿತಿಯ ನೇತೃತ್ವ ವಹಿಸಿದ್ದ ನಂಜೇಗೌಡ ಮತ್ತು ಇತರರು 2023ರ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಇಡೀ ನೇಮಕ ಪ್ರಕ್ರಿಯೆಯನ್ನು ತಿರುಚಿದ್ದರು ಎಂದು ಇ ಡಿ ಆಪಾದಿಸಿದೆ. ಎರಡನೇ ಪ್ರತಿವಾದಿ ಅಶ್ವತ್ಥನಾರಾಯಣ ಅವರ ಮನೆಯಲ್ಲಿ ಶೋಧ ನಡೆಸಿದಾಗ ನೇಮಕಾತಿಗೆ ಸಂಬಂಧಿಸಿದಂತೆ ದಾಖಲೆಗಳು ಲಭ್ಯವಾಗಿದ್ದವು. ಇದರ ಭಾಗವಾಗಿ 2024ರ ಜನವರಿ 16ರಂದು ಅಶ್ವತ್ಥನಾರಾಯಣ ಅವರಿಗೆ ಸಮನ್ಸ್‌ ಜಾರಿ ಮಾಡಿದ್ದು, ಅವರು ಜನವರಿ 23ರಂದು ಅವರು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ಇದಾದ ಬಳಿಕ ಪೊಲೀಸರು ದುರುದ್ದೇಶದಿಂದ ಎಫ್‌ಐಆರ್‌ ದಾಖಲಿಸಿದ್ದಾರೆ ಎನ್ನುವುದು ಇ ಡಿ ವಾದ.

ಅಶ್ವತ್ಥನಾರಾಯಣ ಅವರ ವಿರುದ್ಧ ದಾಳಿ ನಡೆಸಿದ ಬೆನ್ನಿಗೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಐಪಿಸಿ ಸೆಕ್ಷನ್‌ 506 (ಕ್ರಿಮಿನಲ್‌ ಬೆದರಿಕೆ), 323 (ಸ್ವಯಂಪ್ರೇರಿತವಾಗಿ ಹಾನಿ ಮಾಡುವುದು), 324 (ಮಾರಕಾಸ್ತ್ರಗಳಿಂದ ಸ್ವಯಂಪ್ರೇರಿತವಾಗಿ ಹಾನಿ ಮಾಡುವುದು) ಮತ್ತು 34ರ ಅಡಿ ಪ್ರಕರಣ ದಾಖಲಿಸಲು ಅವರು ದೂರು ನೀಡಿದ್ದರು. ಇದನ್ನು ಆಧರಿಸಿ ವಿಲ್ಸನ್‌ ಗಾರ್ಡನ್‌ ಪೊಲೀಸರು ಪ್ರಕರಣ ದಾಖಲಿಸಿದ್ದರು.

Kannada Bar & Bench
kannada.barandbench.com