ಸಾರ್ವಜನಿಕ ಬೇಡಿಕೆಯಿಂದ ಸಾಹುಕಾರ್‌ ಅಮಾನತು; ರಾಜ್ಯಪಾಲರ ನಿರ್ಧಾರ ಸಮರ್ಥಿಸಿದ ಸಂಪುಟ: ಹೈಕೋರ್ಟ್‌ಗೆ ವಿವರಣೆ

ಕರ್ನಾಟಕ ಸರ್ಕಾರ (ಕಲಾಪಗಳು) ನಿಯಮಗಳು1976, ನಿಯಮ 20(1)(b)ರ ಅಡಿ ಔಪಚಾರಿಕವಾಗಿ ಕೆಪಿಎಸ್‌ಸಿ ಅಧ್ಯಕ್ಷರ ಅಮಾನತು ಆದೇಶಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ರಾಜ್ಯಪಾಲರ ನಿಲುವನ್ನು ಒಪ್ಪಲಾಗಿದ್ದು, ಇದಕ್ಕೆ ಅವಕಾಶವಿದೆ ಎಂದ ಹೊಳ್ಳ.
Karnataka HC and KPSC
Karnataka HC and KPSC
Published on

“ಕರ್ನಾಟಕ ಲೋಕಾ ಸೇವಾ ಆಯೋಗದ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್‌ ಅವರನ್ನು ಅಮಾನತು ಮಾಡಲು ಸಾರ್ವಜನಿಕವಾಗಿ ವ್ಯಾಪಕ ಬೇಡಿಕೆ ಕೇಳಿ ಬಂದಿದ್ದು, ಇದಕ್ಕಾಗಿ ಅವರನ್ನು ಅಮಾನತು ಮಾಡಲಾಗಿದೆ. ಆನಂತರ ಈ ನಿರ್ಧಾರಕ್ಕೆ ರಾಜ್ಯ ಸಂಪುಟ ಒಪ್ಪಿಗೆ ಸೂಚಿಸಿದೆ” ಎಂದು ರಾಜ್ಯಪಾಲರ ಪರ ವಕೀಲರು ಹೈಕೋರ್ಟ್‌ನಲ್ಲಿ ಸಮರ್ಥಿಸಿದರು.

ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಜುಲೈ 10ರಂದು ತಮ್ಮನ್ನು ಅಮಾನತು ಮಾಡಿರುವುದನ್ನು ಪ್ರಶ್ನಿಸಿ ಶಿವಶಂಕರಪ್ಪ ಸಾಹುಕಾರ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ನಡೆಸಿತು.

Justice Suraj Govindraj
Justice Suraj Govindraj

ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರತಿನಿಧಿಸಿರುವ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “ಪರಿಸ್ಥಿತಿ ಬೇಡಿದ ಹಿನ್ನೆಲೆಯಲ್ಲಿ ರಾಜ್ಯಪಾಲರು ಸಾಹುಕಾರ್‌ ಅವರನ್ನು ಅಮಾನತು ಮಾಡಿದ್ದಾರೆ. ಇದರ ಬೆನ್ನಿಗೇ ರಾಜ್ಯ ಸಂಪುಟವು ರಾಜ್ಯಪಾಲರ ನಿರ್ಧಾರವನ್ನು ಒಪ್ಪಿದೆ” ಎಂದರು.

“ಈ ಪ್ರಕರಣಲ್ಲಿ ತುರ್ತು ಇತ್ತು. ಸಂಪುಟ ಸಭೆ ನಡೆಯಲು ಸಮಯ ಬೇಕಾಗುತ್ತದೆ. ಎಲ್ಲಾ ಸಚಿವರು ಲಭ್ಯರಾಗಬೇಕಾಗುತ್ತದೆ. ಸಾಹುಕಾರ್‌ ಅಮಾನತಿನ ಕುರಿತು ಸಾರ್ವಜನಿಕವಾಗಿ ವ್ಯಾಪಕ ಬೇಡಿಕೆ ಇತ್ತು. ಸಾಂವಿಧಾನಿಕ ಸಂಸ್ಥೆಯ ಅಧ್ಯಕ್ಷರಾದ ಸಾಹುಕಾರ್‌ ಅವರು ಅನುಮಾನಕ್ಕೆ ಆಸ್ಪದ ನೀಡದಂತಿರಬೇಕು. ಆದರೆ, ಅವರು ನಡೆದುಕೊಂಡಿರುವುದು ಸರಿಯಾಗಿಲ್ಲ ಮತ್ತು ಅಕ್ರಮದಿಂದ ಕೂಡಿದೆ” ಎಂದರು.

“ಸಂಪುಟವು ಕರ್ನಾಟಕ ಸರ್ಕಾರ (ಕಲಾಪಗಳು) ನಿಯಮಗಳು1976, ನಿಯಮ 20(1)(b)ರ ಅಡಿ ಔಪಚಾರಿಕವಾಗಿ ಕೆಪಿಎಸ್‌ಸಿ ಅಧ್ಯಕ್ಷರ ಅಮಾನತು ಆದೇಶಕ್ಕೆ ಒಪ್ಪಿಗೆ ನೀಡಿದೆ. ಈ ಸಂಬಂಧ ಸರ್ಕಾರ ಮೆಮೊ ಸಲ್ಲಿಸಿದೆ. ರಾಜ್ಯಪಾಲರ ನಿಲುವನ್ನು ಒಪ್ಪಲಾಗಿದ್ದು, ಇದಕ್ಕೆ ಅವಕಾಶವಿದೆ” ಎಂದರು.

ಈ ಹಂತದಲ್ಲಿ ಪೀಠವು “ನಿರ್ಧಾರ ಕೈಗೊಂಡ ನಂತರ ಸಂಪುಟ ಒಪ್ಪಿಗೆ ನೀಡುವ ಪ್ರಶ್ನೆ ಎಲ್ಲಿದೆ?” ಎಂದಿತು. ಅದಕ್ಕೆ ಹೊಳ್ಳ ಅವರು ಓರಿಯಂಟಲ್‌ ಇನ್ಶೂರೆನ್ಸ್‌ ಪ್ರಕರಣದಲ್ಲಿ ಆರಂಭದಲ್ಲಿ ನಿಯಮಬಾಹಿರವಾದ ಆದೇಶವನ್ನು ಸಿಂಧುಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಆದೇಶಿಸಿದೆ ಎಂದರು.

“ವಿಸ್ತೃತ ಪೀಠವು ಅಕ್ರಮ ಆದೇಶವನ್ನು ಸಿಂಧುಗೊಳಿಸಬಹುದು ಎಂದು ಆದೇಶಿಸಿದೆ. ಅಮಾನತು ಆದೇಶಕ್ಕೂ ಮುಂಚಿನ ದಿನಕ್ಕೆ ಸಿಂಧುಗೊಳಿಸುವ ನಿರ್ಧಾರ ಅನ್ವಯಿಸುತ್ತದೆ. ಹೀಗಾಗಿ, ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಸಾಹುಕಾರ್‌ ಅಮಾನತು ಮಾಡಿರುವ ರಾಜ್ಯಪಾಲರ ಆದೇಶವು ಸಿಂಧುವಾಗಿದೆ” ಎಂದರು.

ಇನ್ನೊಂದು ಹಂತದಲ್ಲಿ ಪೀಠವು “ಜಾತಿ ಪ್ರಮಾಣ ಪತ್ರ ಸಲ್ಲಿಸಿ ಸರ್ಕಾರಿ ಉದ್ಯೋಗ ಪಡೆಯಲು ಪ್ರಯತ್ನಿಸಿರುವುದು ಸಾಹುಕಾರ್‌ ಪುತ್ರಿ. ಸಾಹುಕಾರ್‌ ವಿರುದ್ಧ ಯಾವುದೇ ಆರೋಪ ಇಲ್ಲವಲ್ಲ” ಎಂದಿತು.

ಇದಕ್ಕೆ ಹೊಳ್ಳ ಅವರು “ಪುತ್ರಿಯ ಆದಾಯ ಪ್ರಮಾಣ ಪತ್ರದ ದುರ್ನಡತೆಯ ಬಗ್ಗೆ ಸಾಹುಕಾರ್‌ಗೆ ಮಾಹಿತಿ ಇತ್ತು. ಅದಾಗ್ಯೂ, ನಿರ್ಲಜ್ಜವಾಗಿ ಸಾಹುಕಾರ್‌ ನಡೆದುಕೊಂಡಿದ್ದಾರೆ. ತುರ್ತು ಇದ್ದುದರಿಂದ ಅವರನ್ನು ಅಮಾನತು ಮಾಡಲಾಗಿದೆ. ರಾಜ್ಯಪಾಲರ ಆದೇಶವನ್ನು ಸಂಪುಟ ಒಪ್ಪಿರುವುದರಿಂದ ಅದು ಸಿಂಧುವಾಗುತ್ತದೆ” ಎಂದರು. ಸಂಪುಟ ಸಭೆಯು ರಾಜ್ಯಪಾಲರ ಆದೇಶವನ್ನು ಒಪ್ಪದಿದ್ದರೆ ಅದು ಹೋಗುತ್ತದೆಯೇ ಎಂಬುದಕ್ಕೆ ಹೊಳ್ಳ ಅವರು ಸಮ್ಮತಿಸಿದರು.

ಇದಕ್ಕೂ ಮುನ್ನ, ಸಾಹುಕಾರ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್‌ ಅವರು “ಸಂಪುಟ ಸಭೆಯ ಸಲಹೆ ಮತ್ತು ಶಿಫಾರಸ್ಸು ಆಧರಿಸಿ ರಾಜ್ಯಪಾಲರು ಅಮಾನತು ಆದೇಶ ಮಾಡದೇ ಇರುವುದರಿಂದ ಅದು ಅಸಾಂವಿಧಾನಿಕವಾಗುತ್ತದೆ. ಹೀಗಾಗಿ, ಅದನ್ನು ವಜಾಗೊಳಿಸಬೇಕು” ಎಂದು ಕೋರಿದರು.

ವಾದ-ಪ್ರತಿವಾದ ಆಲಿಸಿದ ಪೀಠವು ವಿಚಾರಣೆಯನ್ನು ಜುಲೈ 24ಕ್ಕೆ ಮುಂದೂಡಿತು. ರಾಜ್ಯಪಾಲ ವಿಶೇಷ ಕಾರ್ಯದರ್ಶಿ ಪರವಾಗಿ ವಕೀಲ ಕೆ ಅಭಿಷೇಕ್‌ ಕುಮಾರ್‌ ವಕಾಲತ್ತು ವಹಿಸಿದ್ದಾರೆ.

Kannada Bar & Bench
kannada.barandbench.com