ದೃಷ್ಟಿಹೀನ ಅಭ್ಯರ್ಥಿಗಳಿಗೆ ಗಂಟೆಗೆ 20 ನಿಮಿಷ ಹೆಚ್ಚು ಸಮಯ ನೀಡಲು ಕೆಪಿಎಸ್‌ಸಿ‌, ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

“ಕೋವಿಡ್ ಸಾಂಕ್ರಮಿಕತೆಯ ಹಿನ್ನೆಲೆಯಲ್ಲಿ 305 ದೃಷ್ಟಿಹೀನ ಅಭ್ಯರ್ಥಿಗಳಲ್ಲಿ ಹಲವರಿಗೆ ಲಿಪಿಕಾರ ಸಹಾಯಕರು ಲಭ್ಯವಾಗದ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಕೆಪಿಎಸ್ ಸಿ ಹಾಗೂ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ತಳೆಯಬೇಕಿದೆ”.
ದೃಷ್ಟಿಹೀನ ಅಭ್ಯರ್ಥಿಗಳಿಗೆ ಗಂಟೆಗೆ 20 ನಿಮಿಷ ಹೆಚ್ಚು ಸಮಯ ನೀಡಲು ಕೆಪಿಎಸ್‌ಸಿ‌, ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಮುಂಬರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವ ದೃಷ್ಟಿಹೀನ ಅಭ್ಯರ್ಥಿಗಳಿಗೆ ಪ್ರತಿ ಗಂಟೆಗೆ ಹೆಚ್ಚುವರಿಯಾಗಿ 20 ನಿಮಿಷ ಕಾಲಾವಕಾಶ ನೀಡುವಂತೆ ಆಯೋಗ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಅಂಗವಿಕಲರ ಕ್ಷೇಮಾಭಿವೃದ್ಧಿ ಇಲಾಖೆ ನಿರ್ದೇಶಗಳನ್ನು ಕೆಪಿಎಸ್‌ಸಿ ಪಾಲಿಸಿಲ್ಲ ಎಂದು ಉಲ್ಲೇಖಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಹಾಗೂ ಅಶೋಕ್ ಎಸ್‌ ಕಿಣಗಿ ನೇತೃತ್ವದ ದ್ವಿಸದಸ್ಯ ಪೀಠ ಆದೇಶ ಹೊರಡಿಸಿತು. ಆಗಸ್ಟ್‌ 24ರಂದು ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ನಡೆಯಲಿದೆ.

ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠವು ಹೀಗೆ ಹೇಳಿದೆ:

“ಆಗಸ್ಟ್ 24ಕ್ಕೆ ಪೂರ್ವಭಾವಿ ಪರೀಕ್ಷೆ ನಿಗದಿಯಾಗಿದ್ದು, ಪರೀಕ್ಷೆಗೆ ಕೇವಲ ಮೂರು ದಿನ ಬಾಕಿ ಇರುವುದರಿಂದ ಪೀಠವು ಮಧ್ಯಂತರ ಆದೇಶ ನೀಡಲಾಗದು. ‌ಈ ಹಿನ್ನೆಲೆಯಲ್ಲಿ ದಿವ್ಯಾಂಗರ ಹಕ್ಕು ಕಾಯ್ದೆ ಅನುಷ್ಠಾನದ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯ 12ನೇ ಅಧಿನಿಮಯದಲ್ಲಿ ಉಲ್ಲೇಖಿಸಿರುವಂತೆ ಮೊದಲ ಪ್ರತಿವಾದಿ (ಕೆಪಿಎಸ್‌ಸಿ) ಹಾಗೂ ಎರಡನೇ ಪ್ರತಿವಾದಿಗಳು (ರಾಜ್ಯ ಸರ್ಕಾರ) ದೃಷ್ಟಿಹೀನ ಅಭ್ಯರ್ಥಿಗಳಿಗೆ ಪ್ರತಿ ಗಂಟೆಗೆ ಹೆಚ್ಚುವರಿಯಾಗಿ 20 ನಿಮಿಷ ಕಾಲಾವಕಾಶ ಕಲ್ಪಿಸಲು ನಿರ್ಧಾರ ಕೈಗೊಳ್ಳಬೇಕು”
ಕರ್ನಾಟಕ ಹೈಕೋರ್ಟ್

ಪರೀಕ್ಷೆ ಮುಂದೂಡುವುದಕ್ಕೆ ಸಂಬಂಧಿಸಿದಂತೆ ನ್ಯಾಯಪೀಠವು ಮಧ್ಯಂತರ ಆದೇಶ ಹೊರಡಿಸುವುದಿಲ್ಲ. ದೃಷ್ಟಿಹೀನ ಅಭ್ಯರ್ಥಿಗಳಿಗೆ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸುವ ಸಂಬಂಧದ ಕಾನೂನು ವ್ಯಾಪ್ತಿಯನ್ನು ಮುಕ್ತವಾಗಿಡಬೇಕು ಎಂಬುದನ್ನು ಪೀಠ ಸ್ಪಷ್ಟಪಡಿಸಿದೆ. ಎರಡನೆಯದಾಗಿ ದೃಷ್ಟಿಹೀನ ಅಭ್ಯರ್ಥಿಗಳು ಜನವರಿಯಲ್ಲಿಯೇ ಸಹಾಯಕರನ್ನು ನೇಮಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರು. ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ 305 ಅಭ್ಯರ್ಥಿಗಳಲ್ಲಿ ಹಲವರಿಗೆ ಲಿಪಿಕಾರ ಸಹಾಯಕರು ಸಿಕ್ಕಿಲ್ಲದೆ ಇರುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿವಾದಿಗಳು ನಿರ್ಧಾರ ಕೈಗೊಳ್ಳಬೇಕಿದೆ ಎಂದು ನ್ಯಾಯಪೀಠ ಹೇಳಿದೆ.

ಸುಮಾರು 800 ದೃಷ್ಟಿಹೀನ ಅಭ್ಯರ್ಥಿಗಳು ಕೆಪಿಎಸ್‌ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಜಯ್ನಾ ಕೊಠಾರಿ, ಅಂಗವಿಕಲತೆಯ ಪ್ರಮಾಣಪತ್ರವನ್ನು ಅಭ್ಯರ್ಥಿಗಳು ಹೊಂದಿದ್ದರೂ ಕಾನೂನಿಗೆ ವಿರುದ್ಧವಾಗಿ ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ಆಯೋಗ ಸೂಚಿಸಿದೆ ಎಂದರು.

ಸಹಾಯಕರನ್ನು ಒದಗಿಸುವ ಸಂಬಂಧ ಕೆಪಿಎಸ್‌ಸಿ ಯಾವುದೇ ತೆರನಾದ ಸಿದ್ಧತೆ ಮಾಡಿಕೊಂಡಿಲ್ಲ. ಬದಲಾಗಿ ಸ್ವತಃ ಸಹಾಯಕರನ್ನು ಕರೆತರುವಂತೆ ಅಭ್ಯರ್ಥಿಗಳಿಗೆ ಆಯೋಗ ಸೂಚಿಸಿದೆ. ದೃಷ್ಟಿಹೀನ ಅಭ್ಯರ್ಥಿಗಳಿಗೆ ಪ್ರತಿ ಗಂಟೆಗೆ 20 ನಿಮಿಷ ಹೆಚ್ಚುವರಿ ಕಾಲಾವಕಾಶ ಕಲ್ಪಿಸದಿದ್ದರೆ ಅದು ದಿವ್ಯಾಂಗರ ಶ್ರೇಯೋಭಿವೃದ್ಧಿ ಇಲಾಖೆಯ ಒಪ್ಪಂದವನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ನ್ಯಾಯಾಲಯದ ಗಮನಸೆಳೆದರು.

682 ದೃಷ್ಟಿಹೀನ ಅಭ್ಯರ್ಥಿಗಳ ಪೈಕಿ 305 ಮಂದಿ ಮಾತ್ರ ಲಿಪಿಕಾರ ಸಹಾಯಕರ ನೆರವನ್ನು ಕೋರಿದ್ದಾರೆ. ಉಳಿದ 377 ಮಂದಿ ಸಹಾಯಕರನ್ನು ನೇಮಿಸಿಕೊಳ್ಳುವ ಅವಕಾಶವನ್ನು ಬಳಿಸಿಕೊಂಡಿಲ್ಲ ಎಂದು ಕೆಪಿಎಸ್‌ಸಿ ಪರ ವಕೀಲ ರುಬೆನ್ ಜಾಕೊಬ್ ವಿವರಿಸಿದರು.

ಉಭಯ ವಕೀಲರ ವಾದ ಆಲಿಸಿದ ನ್ಯಾಯಾಲಯವು “ಆಯೋಗವು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಏಕೆ ಅನುಸರಿಸಿಲ್ಲ ಎಂಬುದನ್ನು ವಿವರಿಸಬೇಕಿದೆ” ಎಂದಿತು. ಯಾವುದೇ ದೃಷ್ಟಿಹೀನ ಅಭ್ಯರ್ಥಿ ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತವಾಗದಂತೆ ಎಚ್ಚರವಹಿಸಬೇಕಾಗಿದೆ ಎಂದು ಕೋರ್ಟ್‌ ಕೆಪಿಎಸ್‌ಸಿಯನ್ನು ಎಚ್ಚರಿಸಿತು.

Related Stories

No stories found.
Kannada Bar & Bench
kannada.barandbench.com