ಕೆಪಿಎಸ್‌ಸಿ ನೇಮಕಾತಿ: ಪೂರ್ವಾನುಮತಿ ಪಡೆಯದೇ ಸಕ್ಷಮ ನ್ಯಾಯಾಲಯಕ್ಕೆ ವರದಿ ಸಲ್ಲಿಸದಂತೆ ಹೈಕೋರ್ಟ್‌ ನಿರ್ಬಂಧ

ಯಶಸ್ವಿ ಅಭ್ಯರ್ಥಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸಬಾರದು. ಈ ಆದೇಶ ಕೋರ್ಟ್‌ ಮೆಟ್ಟಿಲು ತುಳಿದಿರುವ ಅರ್ಜಿದಾರರಿಗೆ ಮಾತ್ರವಲ್ಲದೆ ಎಲ್ಲಾ ಅಭ್ಯರ್ಥಿಗಳಿಗೂ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್‌.
Karnataka HC and KPSC
Karnataka HC and KPSC
Published on

ಗೆಜೆಟೆಡ್‌ ಪ್ರೊಬೇಷನರಿ, ಕೈಗಾರಿಕಾ ವಿಸ್ತರಣಾಧಿಕಾರಿ ಮತ್ತು ಪಶು ವೈದ್ಯಾಧಿಕಾರಿ ಸೇರಿದಂತೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳಲ್ಲಿ ಹೈಕೋರ್ಟ್‌ನ ಪೂರ್ವಾನುಮತಿ ಇಲ್ಲದೆ ಸಕ್ಷಮ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬಾರದು ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಸಿಐಡಿಗೆ ನಿರ್ಬಂಧ ವಿಧಿಸಿದೆ.

ಕೆಪಿಎಸ್‌ಸಿ ಅಕ್ರಮ ನೇಮಕಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ವಿಜಯಪುರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಆರ್ ಕಾಂತಕುಮಾರ್ (ಶ್ರೀಕಾಂತ್) ಸೇರಿದಂತೆ ಇತರರು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice M Nagaprasanna
Justice M Nagaprasanna

“ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ಪಡೆಯುವ ನೆಪದಲ್ಲಿ ಸರ್ಕಾರ ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲು ಮುಂದಾಗಿದೆ. ಈ ಮೂಲಕ ದಾಖಲೆಗಳಲ್ಲಿ ತನಿಖಾ ವರದಿಯನ್ನು ಅಡಕಗೊಳಿಸಲು ಸಿದ್ಧತೆ ನಡೆಸಲಾಗಿದೆ. ಆದ್ದರಿಂದ, ತನಿಖೆ ಪೂರ್ಣಗೊಂಡಿದ್ದರೂ ಪ್ರಕರಣಗಳ ಅಂತಿಮ ವರದಿಯನ್ನು ಹೈಕೋರ್ಟ್‌ ಅನುಮತಿಯಿಲ್ಲದೆ ಸಲ್ಲಿಸಬಾರದು ಎಂದು ಸೂಚಿಸುವಂತೆ ಅರ್ಜಿದಾರರು ಕೋರಿದ್ದಾರೆ. ಹೀಗಾಗಿ, ಹೈಕೋರ್ಟ್‌ ಅನುಮತಿ ಇಲ್ಲದೆ ಹಗರಣಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣದ ಅಂತಿಮ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬಾರದು” ಎಂದು ಪೀಠ ನಿರ್ದೇಶಿಸಿತು.

ರಾಜ್ಯ ಪ್ರಾಸಿಕ್ಯೂಷನ್‌ ಸಲ್ಲಿಸಿದ ಸಿಐಡಿ ತನಿಖೆಯ ವಾಸ್ತವ ಸ್ಥಿತಿಗತಿ ವರದಿಗಳನ್ನು ದಾಖಲಿಸಿಕೊಂಡ ಪೀಠವು ವಿವರವಾದ ಆಕ್ಷೇಪಣೆ ಸಲ್ಲಿಸಲು ಹತ್ತು ದಿನ ಕಾಲಾವಕಾಶ ನೀಡಿತು. ಅಂತೆಯೇ, ಯಶಸ್ವಿ ಅಭ್ಯರ್ಥಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸಬಾರದು. ಈ ಆದೇಶ ಕೋರ್ಟ್‌ ಮೆಟ್ಟಿಲು ತುಳಿದಿರುವ ಅರ್ಜಿದಾರರಿಗೆ ಮಾತ್ರವಲ್ಲದೆ ಎಲ್ಲಾ ಅಭ್ಯರ್ಥಿಗಳಿಗೂ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿ ವಿಚಾರಣೆಯನ್ನು ಆಗಸ್ಟ್‌ 20ಕ್ಕೆ ಮುಂದೂಡಿತು.

Kannada Bar & Bench
kannada.barandbench.com