ಕೆಪಿಎಸ್‌ಸಿ ನೇಮಕಾತಿ ಹಗರಣ: ಆರು ದಿನ ಇ ಡಿ ಕಸ್ಟಡಿಗೆ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌

ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಕನ್ನಾಳೆಯು ₹1.50 ಕೋಟಿ ಲಂಚವನ್ನು ಮುಂಗಡವಾಗಿ ಸಂಗ್ರಹಿಸಿದ್ದು, ಈ ಪೈಕಿ ₹1.30 ಕೋಟಿಯನ್ನು ಗಂಗ್ವಾರ್‌ಗೆ ನಗದಿನ ರೂಪದಲ್ಲಿ ಪಾವತಿಸಿದ್ದಾನೆ ಎಂದು ದೂರಿರುವ ಇ ಡಿ.
Gyanendra Kumar Gangwar and ED
Gyanendra Kumar Gangwar and ED
Published on

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿಯಲ್ಲಿನ ಅಕ್ರಮದ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ದಾಖಲಾಗಿರುವ ಪ್ರಕರಣದಲ್ಲಿ(ಪಿಎಂಎಲ್‌) ಅಮಾನತುಗೊಂಡಿರುವ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ ಅವರನ್ನು ಆರು ದಿನಗಳ ಕಾಲ ಬೆಂಗಳೂರಿನ ವಿಶೇಷ ನ್ಯಾಯಾಲಯವು ಸೋಮವಾರ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿದೆ.

ಸಿಬಿಐ ಮತ್ತು ಪಿಎಂಎಲ್‌ಎ ಪ್ರಕರಣಗಳ ವಿಚಾರಣೆಗೆಗಾಗಿ ಸ್ಥಾಪಿಸಲಾಗಿರುವ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥ್‌ ಸಂಗ್ರೇಶಿ ಅವರು ಗಂಗ್ವಾರ್‌ ಅವರನ್ನು ಸೆಪ್ಟೆಂಬರ್‌ 26ರವರೆಗೆ ಇ ಡಿ ಕಸ್ಟಡಿಗೆ ನೀಡಿದ್ದಾರೆ.

Judge Manjunath Sangreshi
Judge Manjunath Sangreshi

ಆಗಸ್ಟ್‌ 30ರಂದು ಬಂಧಿತರಾಗಿದ್ದ ಗಂಗ್ವಾರ್‌ ಅವರನ್ನು ಆಗಸ್ಟ್‌ 31ರಂದು ಸಿಐಡಿಯು 10 ದಿನ ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡಿತ್ತು. ಆನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಇದರ ಭಾಗವಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಗಂಗ್ವಾರ್‌ ಅವರನ್ನು ಬಂಧಿಸಿದ್ದ ಇ ಡಿಯು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸಿ, ಆನಂತರ ತನ್ನ ಕಸ್ಟಡಿಗೆ ಪಡೆದುಕೊಂಡಿತು.

ಇ ಡಿ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕಿ ಡಿ ಎಂ ಮಹೇಶ್ವರಿ ಅವರು ಗಂಗ್ವಾರ್‌ ಅವರನ್ನು 14 ದಿನ ಕಸ್ಟಡಿಗೆ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಗಂಗ್ವಾರ್‌ ಮತ್ತು ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಹಾಗೂ ನೇಮಕಾತಿ ಹಗರಣದ ಕಿಂಗ್‌ಪಿನ್‌ ಬಸವರಾಜ್‌ ಕನ್ನಾಳೆ ಪಿತೂರಿ ನಡೆಸಿ, ಸೋರಿಕೆ ಮಾಡುವ ಮೂಲಕ ಆಕಾಂಕ್ಷಿಗಳಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿದ್ದಾರೆ ಎಂದು ಇ ಡಿಯು ರಿಮ್ಯಾಂಡ್‌ನಲ್ಲಿ ಆರೋಪಿಸಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಕನ್ನಾಳೆಯು ₹1.50 ಕೋಟಿ ಲಂಚವನ್ನು ಮುಂಗಡವಾಗಿ ಸಂಗ್ರಹಿಸಿದ್ದು, ಈ ಪೈಕಿ ₹1.30 ಕೋಟಿಯನ್ನು ಗಂಗ್ವಾರ್‌ಗೆ ನಗದಿನ ರೂಪದಲ್ಲಿ ಪಾವತಿಸಿದ್ದಾನೆ. ಕೆಪಿಎಸ್‌ಸಿ ಮಾಜಿ ಅಧಿಕಾರಿಗೆ ₹23 ಲಕ್ಷದಲ್ಲಿ ಚಿನ್ನಾಭರಣ ಖರೀದಿಸಲಾಗಿದೆ ಎಂದು ಇ ಡಿ ಆರೋಪಿಸಿದೆ.

ಜನವರಿ 9ರಂದು ಪಶು ವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆ ನಡೆದಿದ್ದು, ಗಂಗ್ವಾರ್‌ ಅವರು ಜನವರಿ 7ರಂದು ಪ್ರಶ್ನೆ ಪತ್ರಿಕೆ ಮತ್ತು ಉತ್ತರಗಳನ್ನು ಕನ್ನಾಳೆಗೆ ಎಚ್‌ಪಿ ಪೆನ್‌ಡ್ರೈವ್‌ನಲ್ಲಿ ನೀಡಿದ್ದರು. ಹೀಗಾಗಿ, ಅಪರಾಧದ ಪ್ರಕ್ರಿಯೆ ಪತ್ತೆ ಹಚ್ಚಲು ಹಾಗೂ ಯಾರೆಲ್ಲಾ ಭಾಗವಾಹಿಸಿದ್ದಾರೆ ಮತ್ತು ಹಣ ವರ್ಗಾವಣೆ ಹೇಗೆ ಆಗಿದೆ ಎಂಬುದನ್ನು ಪತ್ತೆ ಹಚ್ಚಲು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವುದು ಅಗತ್ಯವಾಗಿದೆ ಎಂದು ಇ ಡಿ ವಾದಿಸಿತು. ಈ ವಾದವನ್ನು ನ್ಯಾಯಾಲಯ ಪುರಸ್ಕರಿಸಿದೆ.

Kannada Bar & Bench
kannada.barandbench.com