

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಮತ್ತು ಅವ್ಯವಹಾರಗಳ ಕುರಿತು ಜಾರಿ ನಿರ್ದೇಶನಾಲಯ (ಇ ಡಿ) ನಡೆಸುತ್ತಿರುವ ತನಿಖೆಯಲ್ಲಿ ಬಹಿರಂಗವಾಗಿರುವ ಸಂಗತಿಗಳು ನಿಜವಾಗಿದ್ದರೆ, ಅವು ನ್ಯಾಯಾಲಯದ ಆತ್ಮಸಾಕ್ಷಿಯನ್ನಷ್ಟೇ ಅಲ್ಲದೆ, ಸರ್ಕಾರಿ ಉದ್ಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಾಮಾನ್ಯ ವ್ಯಕ್ತಿಯ ಆತ್ಮಸಾಕ್ಷಿಯನ್ನೂ ಬೆಚ್ಚಿಬೀಳಿಸಲಿವೆ ಎಂದು ಕರ್ನಾಟಕ ಹೈಕೋರ್ಟ್ ಶನಿವಾರ ಅಭಿಪ್ರಾಯಪಟ್ಟಿದೆ.
ಕೆಪಿಎಸ್‌ಸಿ ಮುಖಾಂತರ 400 ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪದೆ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಇ ಡಿ ತನಿಖೆಯಲ್ಲಿ ಬಹಿರಂಗವಾಗಿರುವ ಸಂಗತಿಗಳು ನಿಜವಾಗಿದ್ದರೆ, ಕೆಪಿಎಸ್‌ಸಿ ಮೂಲಕ ಈ ಹಿಂದೆ ಮತ್ತು ಹಾಲಿ ನಡೆದಿರುವ ನೇಮಕಾತಿಗಳ ಮೇಲೆ ಗಂಭೀರ ಪರಿಣಾಮ ಬೀರಲಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
“ಜಾರಿ ನಿರ್ದೇಶನಾಲಯ ನಡೆಸಿರುವ ತನಿಖೆಯಲ್ಲಿ ಬಹಿರಂಗವಾಗಿರುವ ಸಂಗತಿಗಳು ನಿಜವಾಗಿದ್ದರೆ, ಕರ್ನಾಟಕ ಲೋಕಸೇವಾ ಆಯೋಗದ ಹಿಂದಿನ ಮತ್ತು ಪ್ರಸ್ತುತ ನೇಮಕಾತಿಗಳ ಮೇಲೆ ಅದು ತೀವ್ರ ಪರಿಣಾಮ ಬೀರಲಿದೆ” ಎಂದು ನ್ಯಾಯಾಲಯ ಹೇಳಿದೆ.
ಕೆಪಿಎಸ್‌ಸಿ ನಡೆಸಿದ ಹಲವು ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳು ಮತ್ತು ಅವ್ಯವಹಾರಗಳ ಕುರಿತು ಜಾರಿ ನಿರ್ದೇಶನಾಲಯ ಸಲ್ಲಿಸಿದ ಸ್ಥಿತಿಗತಿ ವರದಿಯನ್ನು ಪರಿಶೀಲಿಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪಿಎಂಎಲ್‌ಎ ಕಾಯಿದೆಯ ಸೆಕ್ಷನ್ 66(2)ರ ಅಡಿ ತನಿಖೆಯಲ್ಲಿ ಸಂಗ್ರಹಿಸಿರುವ ಮಾಹಿತಿಯನ್ನು ನವೆಂಬರ್ 19ರಂದು, ಅಂದರೆ ವಿಚಾರಣೆಗೆ ಒಂದು ದಿನ ಮುಂಚಿತವಾಗಿ, ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಹಂಚಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ, ಜಾರಿ ನಿರ್ದೇಶನಾಲಯ ಹಂಚಿಕೊಂಡಿರುವ ಮಾಹಿತಿಯ ಆಧಾರದಲ್ಲಿ ಬಹಿರಂಗವಾಗಿರುವ ಅಪರಾಧಗಳಿಗೆ ಸಂಬಂಧಿಸಿದಂತೆ ಎಸ್‌ಐಟಿ ಪ್ರಕರಣಗಳನ್ನು ದಾಖಲಿಸುವುದು ಅನಿವಾರ್ಯ ಎಂದು ನ್ಯಾಯಾಲಯ ಹೇಳಿದೆ.
“ಜಾರಿ ನಿರ್ದೇಶನಾಲಯ ಹಂಚಿಕೊಂಡಿರುವ ಮಾಹಿತಿಯಲ್ಲಿರುವ ಅಪರಾಧಗಳನ್ನು ಎಸ್‌ಐಟಿ ದಾಖಲಿಸುವುದು ಅನಿವಾರ್ಯ. ಏಕೆಂದರೆ, ಇಲ್ಲಿ ಉಲ್ಲೇಖಿಸಿರುವ ಅಪರಾಧಗಳು ನ್ಯಾಯಾಲಯದ ಆತ್ಮಸಾಕ್ಷಿಯನ್ನಷ್ಟೇ ಅಲ್ಲದೆ, ಕೆಪಿಎಸ್‌ಸಿ ನಡೆಸುವ ವಿವಿಧ ನೇಮಕಾತಿ ಪ್ರಕ್ರಿಯೆಗಳಲ್ಲಿ ಭಾಗವಹಿಸುವ ಸಾಮಾನ್ಯ ವ್ಯಕ್ತಿಯ ಆತ್ಮಸಾಕ್ಷಿಯನ್ನೂ ಬೆಚ್ಚಿಬೀಳಿಸುವಂತಿವೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನವೆಂಬರ್ 4, 2026ರಂದು ರಾಜ್ಯ ಸರ್ಕಾರ ಎಸ್‌ಐಟಿಯನ್ನು ಪುನರ್‌ರಚಿಸಿ ಆದೇಶ ಹೊರಡಿಸಿತ್ತು. ಅಲ್ಲದೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 2(1)(u)ರ ಅಡಿ ತನಿಖೆ ನಡೆಸುವ ಉದ್ದೇಶಕ್ಕಾಗಿ ಎಸ್‌ಐಟಿಯನ್ನೇ ಪೊಲೀಸ್ ಠಾಣೆ ಎಂದು ಘೋಷಿಸಿತ್ತು ಎಂಬುದನ್ನು ನ್ಯಾಯಾಲಯ ದಾಖಲಿಸಿದೆ.
ಈ ಮಧ್ಯೆ, ವಿಶೇಷ ಸರ್ಕಾರಿ ಅಭಿಯೋಜಕ ವಿ ಎನ್ ಜಗದೀಶ್ ಅವರು ಜಾರಿ ನಿರ್ದೇಶನಾಲಯ ಹಂಚಿಕೊಂಡಿರುವ ಮಾಹಿತಿಯನ್ನು ಕಾನೂನಿನ ಪ್ರಕಾರ ಅದರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಆದರೆ, ಎಸ್‌ಐಟಿ ನೇರವಾಗಿ ಪ್ರಕರಣಗಳನ್ನು ದಾಖಲಿಸಲು ಸಾಧ್ಯವಿಲ್ಲ. ದೂರುದಾರರು ಮೊದಲು ಸಂಬಂಧಪಟ್ಟ ಅಧಿಕಾರ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ದೂರು ಸಲ್ಲಿಸಿ ಪ್ರಕರಣ ದಾಖಲಿಸಬೇಕು. ಬಳಿಕ ಆ ಪ್ರಕರಣಗಳನ್ನು ತನಿಖೆಗಾಗಿ ಎಸ್‌ಐಟಿಗೆ ವರ್ಗಾಯಿಸಬೇಕಾಗುತ್ತದೆ ಎಂದು ಅವರು ವಾದಿಸಿದರು.
ಇದನ್ನು ಪರಿಗಣಿಸಿದ ನ್ಯಾಯಾಲಯವು ಎಸ್‌ಐಟಿ ರಚನೆಗೆ ಸಂಬಂಧಿಸಿದ ಸರ್ಕಾರದ ಆದೇಶದಲ್ಲಿಯೇ ಕೆಪಿಎಸ್‌ಸಿ ಅಕ್ರಮಗಳಿಗೆ ಸಂಬಂಧಿಸಿದಂತೆ ಈಗಾಗಲೇ ದಾಖಲಾಗಿರುವ ಮತ್ತು ಮುಂದೆ ದಾಖಲಿಸಲಾಗುವ ಎಲ್ಲ ಪ್ರಕರಣಗಳನ್ನು ಎಸ್‌ಐಟಿಗೆ ವರ್ಗಾಯಿಸುವ ಅಂಶ ಅಡಕವಾಗಿದೆ ಎಂದು ಸ್ಪಷ್ಟಪಡಿಸಿತು.
“ಕೆಪಿಎಸ್‌ಸಿ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಬಾಕಿ ಇರುವ ಎಲ್ಲ ಪ್ರಕರಣಗಳು ಹಾಗೂ ಮುಂದೆ ಯಾವುದೇ ಅಧಿಕಾರ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ದಾಖಲಿಸಲಾಗುವ ಎಲ್ಲ ಪ್ರಕರಣಗಳನ್ನು ಯಾವುದೇ ವಿಳಂಬವಿಲ್ಲದೆ ತನಿಖೆಗಾಗಿ ಎಸ್‌ಐಟಿಗೆ ವರ್ಗಾಯಿಸಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಇದರಲ್ಲಿ ಪಿಎಂಎಲ್‌ಎ ಕಾಯಿದೆಯ ಸೆಕ್ಷನ್ 66(2)ರ ಅಡಿ ಜಾರಿ ನಿರ್ದೇಶನಾಲಯವು ಹಂಚಿಕೊಂಡಿರುವ ಮಾಹಿತಿಯೂ ಒಳಗೊಳ್ಳುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
“ಜಾರಿ ನಿರ್ದೇಶನಾಲಯವು ಸೆಕ್ಷನ್ 66(2)ರ ಅಡಿ ಹಂಚಿಕೊಂಡಿರುವ ಮಾಹಿತಿಯನ್ನು ಪ್ರಕರಣ ದಾಖಲಿಸುವ ಪ್ರಕ್ರಿಯೆಗಾಗಿ ಸಂಬಂಧಪಟ್ಟ ಅಧಿಕಾರ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ರವಾನಿಸಬೇಕು. ಅಲ್ಲಿ ಪ್ರಕರಣಗಳನ್ನು ದಾಖಲಿಸಿದ ತಕ್ಷಣ ಯಾವುದೇ ವಿಳಂಬವಿಲ್ಲದೆ ತನಿಖೆಗಾಗಿ ಎಸ್‌ಐಟಿಗೆ ವರ್ಗಾಯಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.
ಇದರಂತೆ, ಜಾರಿ ನಿರ್ದೇಶನಾಲಯವು ಎಸ್‌ಐಟಿ ಜೊತೆ ಹಂಚಿಕೊಂಡಿರುವ ಮಾಹಿತಿಯನ್ನು ವಿಧಾನಸೌಧ ಪೊಲೀಸ್ ಠಾಣೆ ಸೇರಿದಂತೆ ಸಂಬಂಧಪಟ್ಟ ಅಧಿಕಾರ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ರವಾನಿಸಿ, ಅದರಲ್ಲಿ ಬಹಿರಂಗವಾಗಿರುವ ಸಂಜ್ಞೇಯ ಅಪರಾಧಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ, ತಕ್ಷಣ ಎಸ್‌ಐಟಿಗೆ ವರ್ಗಾಯಿಸಬೇಕಿದೆ.
ಈ ಹಿಂದೆ ಎಸ್‌ಐಟಿ ತನಿಖೆ ಮತ್ತು ಜಾರಿ ನಿರ್ದೇಶನಾಲಯದ ತನಿಖೆಗಳು “ತಮ್ಮ ತಮ್ಮ ಶಾಸನಬದ್ಧ ಅಧಿಕಾರ ವ್ಯಾಪ್ತಿಯ ಮಿತಿಯಲ್ಲಿ ಏಕಕಾಲದಲ್ಲಿ, ಸ್ವತಂತ್ರವಾಗಿ ಮತ್ತು ಪರಸ್ಪರ ಸಹಕಾರದೊಂದಿಗೆ ಮುಂದುವರಿಯಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿತ್ತು.
ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಮಧು ರಾವ್ ಅವರು “ಕೆಪಿಎಸ್‌ಸಿ ಮಾಜಿ ಅಧ್ಯಕ್ಷ, ಸದಸ್ಯೆ ಬಿ ವಿ ಗೀತಾ, ಮಧ್ಯವರ್ತಿ ಬಸವರಾಜ್ ಕನ್ನಾಳೆ ಮತ್ತು ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕನ್ನಾಳೆ ಅವರನ್ನು ಬಂಧಿಸಲಾಗಿದ್ದು, ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನೂ ಸಲ್ಲಿಸಲಾಗಿದೆ" ಎಂದರು.
"ಪಶುವೈದ್ಯಾಧಿಕಾರಿಗಳ ನೇಮಕಾತಿ ಮಾತ್ರವಲ್ಲದೆ, ಸಾಹುಕಾರ್ ಮತ್ತು ಗಂಗ್ವಾರ್ ಅವರ ಅಧಿಕಾರಾವಧಿಯ ಇತರ ನೇಮಕಾತಿಗಳಲ್ಲಿಯೂ ಅಕ್ರಮ ನಡೆದಿರುವ ಸೂಚನೆಗಳಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನೇಮಕಾತಿ, ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆ 2023, ಮೋಟಾರು ವಾಹನ ನಿರೀಕ್ಷಕರ ನೇಮಕಾತಿ-2016 ಮತ್ತು ಸಹಾಯಕ ಎಂಜಿನಿಯರ್ ನೇಮಕಾತಿ-2024 ರಲ್ಲೂ ಅಕ್ರಮ ನಡೆದಿರುವ ಸಾಧ್ಯತೆಗಳು ಕಂಡುಬರುತ್ತಿವೆ" ಎಂದು ಇ.ಡಿ ತನ್ನ ಪ್ರಮಾಣ ಪತ್ರದಲ್ಲಿ ವಿವರಿಸಿದೆ.
ಅರ್ಜಿದಾರರ ಪರ ವಕೀಲರಾದ ವೆಂಕಟೇಶ್ ದಳವಾಯಿ, ಗಿರೀಶ್ ಭಾರದ್ವಾಜ್ ಅವರು “ವಿಧಾನ ಸೌಧ ಠಾಣೆಯಲ್ಲಿವಲ್ಲದೇ ಬೇರೆ ಕಡೆ ದಾಖಲಾಗಿರುವ ಪ್ರಕರಣಗಳನ್ನು ಎಸ್‌ಐಟಿಗೆ ವರ್ಗಾಯಿಸಲಾಗಿಲ್ಲ. ಕೆಲವು ಕಡೆ ದೂರನ್ನೂ ಸ್ವೀಕರಿಸುತ್ತಿಲ್ಲ” ಎಂದು ಆಕ್ಷೇಪಿಸಿದರು.
ವಿಚಾರಣೆಯ ಒಂದು ಹಂತದಲ್ಲಿ ಪೀಠವು "ಕೆಪಿಎಸ್‌ಸಿಯು ಯುಪಿಎಸ್‌ಸಿ ಮಾದರಿಯಲ್ಲಿ ಏಕೆ ಕಾರ್ಯನಿರ್ವಹಿಸುವುದಿಲ್ಲ" ಎಂದು ಸರ್ಕಾರವನ್ನು ಪ್ರಶ್ನಿಸಿತು. ಅದಕ್ಕೆ ಸರ್ಕಾರದ ವಕೀಲರು ಅಲ್ಲಿಯೂ ಈ ಸಮಸ್ಯೆ ಇದೆ" ಎಂದರು. ಇದಕ್ಕೆ ಪೀಠವು ಒಪಲಿಲ್ಲ.
ಜವರಿ 8, 2027ಕ್ಕೆ ವಿಚಾರಣೆ ಮುಂದೂಡಿದ ಪೀಠವು ಅದರೊಳಗೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ನಿರ್ದೇಶಿಸಿದೆ.