

ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಹಗರಣದಲ್ಲಿ ಪ್ರಧಾನ ಆರೋಪಿಗಳಾಗಿರುವ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ಸದಸ್ಯೆ ಬಿ ವಿ ಗೀತಾ ಅವರನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯವು ಅಕ್ಟೋಬರ್ 19ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿದೆ. ಇದರೊಂದಿಗೆ ಇಡೀ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
ಶಿವಶಂಕರಪ್ಪ ಮತ್ತು ಗೀತಾ ಅವರನ್ನು ಮಂಗಳವಾರ ಬಂಧಿಸಿದ್ದ ಇ ಡಿಯು ಎಲ್ಲಾ ಪ್ರಕ್ರಿಯೆ ಮುಗಿಸಿ ಇಂದು ಜಾರಿ ನಿರ್ದೇಶನಾಲಯದ ಪ್ರಕರಣ ವಿಚಾರಣೆಗಾಗಿ ಸ್ಥಾಪಿಸಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥ ಸಂಗ್ರೇಶಿ ಅವರ ಮುಂದೆ ಹಾಜರುಪಡಿಸಿದರು.
ಪ್ರಕರಣದ ಸಂಬಂಧ ಮಾಹಿತಿ ಪಡೆದು ಜಾರಿ ನಿರ್ದೇಶನಾಲಯದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಆರೋಪಿಗಳಾದ ಸಾಹುಕಾರ್ ಮತ್ತು ಗೀತಾ ಅವರನ್ನು ಅಕ್ಟೋಬರ್ 19ರವರೆಗೆ ಇ ಡಿ ಕಸ್ಟಡಿಗೆ ನೀಡಿದೆ.
400 ಪಶು ವೈದ್ಯಾಧಿಕಾರಿಗಳ ನೇಮಕ ಮತ್ತು ಕೈಗಾರಿಕಾ ವಿಸ್ತರಣಾಧಿಕಾರಿಗಳ ನೇಮಕದಲ್ಲಿ ಭಾರಿ ಅಕ್ರಮ ನಡೆದಿದ್ದು, ತನ್ನ ಪುತ್ರಿಯರಿಗೆ ನೆರವಾಗುವ ಮೂಲಕ ಸ್ವಜನ ಪಕ್ಷಪಾತ ಎಸಗಿರುವ ಗಂಭೀರ ಆರೋಪ ಸಾಹುಕಾರ್ ಮೇಲಿದೆ. ಅಲ್ಲದೇ, ಹಗರಣದ ಕಿಂಗ್‌ಪಿನ್ ಬಸವರಾಜ್ ಕನ್ನಾಳೆಯ ಜೊತೆ ಸಾಹುಕಾರ್ ನಿರಂತರವಾಗಿ ಸಂಪರ್ಕದಲ್ಲಿದ್ದರು ಎಂಬುದು ಕರೆ ದಾಖಲೆಯಿಂದ ದೃಢವಾಗಿತ್ತು ಎನ್ನಲಾಗಿದೆ.
ಹಗರಣವು ಬೆಳಕಿಗೆ ಬರುತ್ತಲೇ ರಾಜ್ಯಪಾಲರು ಶಿವಶಂಕರಪ್ಪ ಸಾಹುಕಾರ್ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದರು. ಆನಂತರ ನಿರೀಕ್ಷಣಾ ಜಾಮೀನು ಕೋರಿ ಸಾಹುಕಾರ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು.
ಕೆಪಿಎಸ್‌ಸಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿದ್ದ ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಮತ್ತು ಪ್ರಕರಣದ ಕಿಂಗ್‌ಪಿನ್ ಬಸವರಾಜ್ ಕನ್ನಾಳೆಯನ್ನು ಈಗಾಗಲೇ ಇ ಡಿಯು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದೆ. ಸಾಹುಕಾರ್ ಮತ್ತು ಗೀತಾ ಬಂಧನದೊಂದಿಗೆ ಇ ಡಿಯು ಇಡೀ ಪ್ರಕರಣದಲ್ಲಿ ಒಟ್ಟು ನಾಲ್ವರನ್ನು ಬಂಧಿಸಿದಂತಾಗಿದೆ.
ಜಾರಿ ನಿರ್ದೇಶನಾಲಯದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಮಧು ರಾವ್ ಮತ್ತು ಡಿ ಎಂ ಮಹೇಶ್ವರಿ ವಾದಿಸಿದರು.